ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಕರ್ನಾಟಕ ಜಾನಪದ ಪರಿಷತ್ತು, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದಲ್ಲಿ ಡಿ.ವಿ.ಎಸ್. ಶಿಕ್ಷಣ ಸಂಸ್ಥೆ ಆತಿಥ್ಯದಲ್ಲಿ ಶಿವಮೊಗ್ಗ ತಾಲ್ಲೂಕು 7ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ.
ಜ. 3 ರಂದು ನಗರದ ವಿನೋಬನಗರ ಡಿ.ವಿ.ಎಸ್. ಪ್ರೌಢಶಾಲಾ ಆವರಣದಲ್ಲಿ ಸಮ್ಮೇಳನ ಜರುಗಲಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಿ.ವಿ.ಎಸ್. ಸಂಯುಕ್ತ ಪಪೂ ಕಾಲೇಜು ವಿದ್ಯಾರ್ಥಿನಿ ತಮಡಿಹಳ್ಳಿಯ ನಿವಾಸಿ ಟಿ.ಆರ್. ಸಂಗೀತಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಧ್ಯಕ್ಷರಾದ ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.ವಿ.ಎಸ್. ವಿನೋಬನಗರದ ಪ್ರೌಢಶಾಲೆಯ ಆವರಣದಲ್ಲಿ ಮುಖ್ಯ ಶಿಕ್ಷಕರಾದ ಸಕ್ರಾನಾಯ್ಕ ಅವರು ಬೆಳಿಗ್ಗೆ 10 ಕ್ಕೆ ನಾಡಧ್ವಜಾರೋಹಣದೊಂದಿಗೆ ಆರಂಭವಾಗಲಿದೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆವರಣದಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಕುಮಾರಿ ಭಾವನಾ ಗೌಡ, ಆನವಟ್ಟಿ ಅವರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಿ.ವಿ.ಎಸ್. ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರುದ್ರಪ್ಪಗೌಡ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್ವರ್, ಶ್ರೀನಿಧಿ ಶಿಕ್ಷಣ ಸಂಸ್ಥೆಯ ಆಡಳಿತಾಧಿ ಕಾರಿಗಳಾದ ಟಿ. ಪಿ. ನಾಗರಾಜ್ ಅವರು ಭಾಗವಹಿಸಲಿದ್ದಾರೆ.
ಉದ್ಘಾಟನೆಯ ನಂತರ ಮಕ್ಕಳೇ ಬರೆದ ಕವನಗಳ ವಾಚನಗೋಷ್ಠಿ, ಕಥಾ ಗೋಷ್ಠಿ, ಪ್ರಬಂಧ ಗೋಷ್ಠಿ ನಡೆಯಲಿದೆ. ವಿದ್ಯಾರ್ಥಿಗಳ ಚಿಂತನೆ ಒರೆಗೆ ಹಚ್ಚುವ ಪ್ರಚಲಿತ ವಿಚಾರಗಳ ಚಿಂತನೆ ನಡೆಯಲಿದೆ. ಮಹಾತ್ಮ ಗಾಂಧಿ ಅವರು ಕಂಡ ಕನಸೇನು, ನನಸಾಗದಿರಲು ಕಾರಣವೇನು?, ನನ್ನ ಸತ್ಯಾನ್ವೇಷಣೆ ಕೃತಿಯಲ್ಲಿ ಗಾಂಧಿಯವರು ಕಂಡ ಕನಸೇನು?, ಸ್ವಚ್ಛ ಭಾರತ್ ಅಭಿಯಾನದ ಉದ್ದೇಶಗಳೇನು?, ಪರಿಸರ ಸಂರಕ್ಷಣೆಯಲ್ಲಿ ನಮ್ಮ ಕೊಡುಗೆ ಏನು?, ನೆರೆ, ಬರ ಕೊಚ್ಚಿಹೋದ ಬದುಕಿಗೆ ಸಾಂತ್ವಾನ, ಭದ್ರತೆ, ಪುನರ್ವಸತಿ ಕಾರ್ಯದಲ್ಲಿ ಸರ್ಕಾರದ ಜವಾಬ್ದಾರಿಗಳೇನು. ನಾಗರೀಕರ ಕರ್ತವ್ಯವೇನು?, ಉದ್ಯೋಗ ಸೃಷ್ಟಿಯಲ್ಲಿ ನಮ್ಮ ವ್ಯವಸ್ಥೆಯ ವೈಫಲ್ಯಕ್ಕೆ ಕಾರಣಗಳೇನು. ಪರಿಹಾರಕ್ಕೆ ನಿಮ್ಮ ಚಿಂತನೆಗಳೇನು.? ಈ ವಿಚಾರಗಳನ್ನು ಕುರಿತು ಮಾತನಾಡಲು ಅವಕಾಶವಿದೆ. ತಾಲೂಕಿನಲ್ಲಿ ಆಯ್ಕೆಯಾದವರು ಜ. 7 ರಂದು ನಡೆಯುವ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.