Advertisement

ಮುಕ್ತ ವ್ಯಾಪಾರ ಒಪ್ಪಂದ ಅಪಾಯಕಾರಿ

05:29 PM Dec 22, 2019 | Naveen |

ಶಿವಮೊಗ್ಗ: ಡಬ್ಲ್ಯೂಟಿಒಗಿಂತ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದ (ಆರ್‌ಸಿಇಪಿ) ಅಪಾಯಕಾರಿಯಾಗಿದೆ ಎಂದು ಪ್ರಗತಿಪರ ಚಿಂತಕ ಹಾಗೂ ಬರಹಗಾರ ಶಿವಸುಂದರ್‌ ಹೇಳಿದರು.

Advertisement

ನಗರದ ಎನ್‌ಇಎಸ್‌ ಆವರಣದಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ಆಯೋಜಿಸಿದ್ದ ರೈತ ನಾಯಕ ಎನ್‌.ಡಿ. ಸುಂದರೇಶ್‌ ಮತ್ತು ಕೆ.ಎಸ್‌. ಪುಟ್ಟಣ್ಣಯ್ಯ ನೆನಪಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ರೈತರ ಪ್ರತಿಭಟನೆ ಬಳಿಕ ಪ್ರಧಾನಿ ಮೋದಿ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕದೇ ಹೊರ ಬಂದಿದ್ದಾರೆ. ಬೀಸುವ ದೊಣ್ಣೆ ತಪ್ಪಿದೆ ಎಂದು ಸುಮ್ಮನಾಗುವಂತಿಲ್ಲ. ದೇಶದ ಕೆಲ ರಾಜ್ಯಗಳಲ್ಲಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸಹಿ ಹಾಕದೇ ಬಂದಿರಬಹುದು. ಅವರು ಒಪ್ಪಂದವನ್ನು ನಿರಾಕರಿಸಿಲ್ಲ ಎಂದು ಹೇಳಿದರು.

ಇಂಡೋನೇಷ್ಯಾ, ನ್ಯೂಜಿಲೆಂಡ್‌, ಆಸ್ಟೇಲಿಯಾ ಪ್ರಧಾನಿಗಳು ಮೋದಿಯವರ ಮನವೊಲಿಸಿದ್ದಾರೆ. ರಾಜ್ಯಗಳಲ್ಲಿನ ಚುನಾವಣೆ ಮುಗಿದ ನಂತರ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂದರು.

ದೇಶದಲ್ಲಿ ಪ್ರತಿದಿನ 17 ಲಕ್ಷ ಕೋಟಿ ಟನ್‌ ಹಾಲು ಉತ್ಪಾದನೆಯಾಗುತ್ತಿದೆ. ಮುಂದುವರಿದ ದೇಶಗಳಿಗೆ ಭಾರತವೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಆದ್ದರಿಂದ ಹಾಲಿನ ಪುಡಿ ಸೇರಿದಂತೆ ಹೈನೋದ್ಯಮ ಉತ್ಪನ್ನಗಳನ್ನು ಈ ಒಪ್ಪಂದದ ಮೂಲಕ ಭಾರತದಲ್ಲಿ ಮಾರಾಟ ಮಾಡಲು ಆ ದೇಶಗಳು ಹಾತೊರೆಯುತ್ತಿವೆ. ಇದು ಭಾರತದ ರೈತರು, ಹೈನುಗಾರರ ಮೇಲೆ ಗಧಾಪ್ರಹಾರ ನಡೆಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

Advertisement

ಆರ್‌ಸಿಇಪಿ ಒಪ್ಪಂದಕ್ಕೆ 16 ದೇಶಗಳು ಒಳಪಟ್ಟಿದ್ದು, ವಿಶ್ವದ ಕಾಲುಭಾಗ ಆರ್ಥಿಕತೆಯನ್ನು ಈ ದೇಶಗಳು ಹೊಂದಿವೆ. ಬಡ ದೇಶಗಳ ಮಾರುಕಟ್ಟೆಯನ್ನು ವಶಕ್ಕೆ ಪಡೆಯಲು ಈ ದೇಶಗಳು ತಂತ್ರಗಾರಿಕೆ ರೂಪಿಸಿದೆ. ಡಬ್ಲ್ಯೂ ಡಿಒ ಒಪ್ಪಂದದಿಂದ ಈ ಹಿಂದೆ ಭಾರತದ ಸಣ್ಣಪುಟ್ಟ ಉದ್ಯಮಗಳು ನೆಲ ಕಚ್ಚಿವೆ. ಡಬ್ಲ್ಯೂ ಟಿಒ ಜಾಗದಲ್ಲಿ ಈಗ ಆರ್‌ಸಿಇಪಿ ತಲೆ ಎತ್ತಿದೆ. ನಮ್ಮ ದೇಶಕ್ಕೆ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದ ಮಾರಕವಾಗಿದೆ. ರೈತರ ಆರ್ಥಿಕತೆ ಬೆಳೆದರೆ ಮಾತ್ರ ದೇಶದ ಆರ್ಥಿಕತೆ ಬೆಳೆಯುತ್ತದೆ ಎಂಬುದನ್ನು ಸರ್ಕಾರಗಳು ಮನಗಾಣಬೇಕಿದೆ ಎಂದರು.

ರೈತ ಸಂಘದ ಅಧ್ಯಕ್ಷ ಕೆ.ಟಿ. ಗಂಗಾಧರ್‌, ನಂದಿನಿ ಜಯರಾಮ್‌, ಯಶವಂತರಾವ್‌ ಘೋರ್ಪಡೆ, ಹನುಮಂತಪ್ಪ, ಹಿರಣ್ಣಯ್ಯ, ಅರುಣ್‌ ಕುಮಾರ್‌, ಶಿವಮೂರ್ತಿ, ಎಚ್‌.ಎಸ್‌. ವೀರೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next