ಶಿವಮೊಗ್ಗ: ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಿಂದ ಆನೆ ದಂತಗಳು ನಾಪತ್ತೆಯಾದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಲಾಖೆಯೊಳಗೆ ತೀವ್ರ ಸಂಚಲನ ಮೂಡಿದೆ. ಅಲ್ಲದೆ ಕಚೇರಿಯಿಂದ ಒಂದಲ್ಲ ಎರಡು ಆನೆದಂತ ಕಾಣೆಯಾಗಿದೆ ಎನ್ನುವುದು ಕೂಡ ಗೊತ್ತಾಗಿದೆ. ಇದರ ಜೊತೆಗೆ ಈ ಜೋಡಿ ದಂತವು ಇಲಾಖೆಯ ಆಸ್ತಿ ಪಟ್ಟಿಯಲ್ಲಿ ಸೇರ್ಪಡೆಯಾಗಿರಲಿಲ್ಲ ಎಂಬ ಮಾಹಿತಿ ಹೊರಬಂದಿದೆ.
ಯಾವುದೇ ಕಚೇರಿಯಲ್ಲಿ ಅಲ್ಲಿರುವ ಪ್ರತಿ ಆಸ್ತಿಯನ್ನು ಅಂದರೆ ಟೇಬಲ್, ಕುರ್ಚಿ, ಫ್ಯಾನು ಸೇರಿ ಎಲ್ಲ ವಸ್ತುಗಳನ್ನು ಪಟ್ಟಿ ಮಾಡಲಾಗುತ್ತದೆ. ಇವೆಲ್ಲವನ್ನೂ ಪ್ರತಿ ವರ್ಷ ಆಡಿಟ್ ವರದಿಯಲ್ಲಿ ನಮೂದಿಸಲಾಗುತ್ತದೆ. ಆದರೆ ಈ ಆನೆ ದಂತವನ್ನು ಮಾತ್ರ ಆಸ್ತಿಪಟ್ಟಿಯಲ್ಲಿ ಸೇರಿಸಿರಲಿಲ್ಲ. ಇದರಿಂದಾಗಿಯೇ ಆನೆ ದಂತ ಕಾಣೆಯಾಗಿದ್ದರೂ ಯಾರ ಗಮನಕ್ಕೂ ಬಂದಿಲ್ಲ.
ಆಡಿಟ್ ವರದಿಯಲ್ಲಿ ಸೇರ್ಪಡೆಯಾಗಿದ್ದರೆ ಪ್ರತಿ ವರ್ಷ ಆಡಿಟ್ ವರದಿ ಸಿದ್ಧಗೊಳಿಸುವ ಸಂದರ್ಭದಲ್ಲಿ ಇದನ್ನು ಪರಿಶೀಲಿಸಲಾಗುತ್ತಿತ್ತು. ಆದರೆ ಇಷ್ಟು ಅಮೂಲ್ಯವಾದ ಆನೆ ದಂತಗಳನ್ನು ಯಾಕೆ ಆಸ್ತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಲ್ಲ ಎಂಬುದು ಪ್ರಶ್ನೆಯಾಗಿದೆ. ಕಚೇರಿಯ ಆಸ್ತಿಗಳ ಪಟ್ಟಿ ಮಾಡುವಾಗ ಈ ದಂತ ಗಮನಕ್ಕೆ ಬಾರದೇ ಇದ್ದರೂ ಇರಬಹುದು. ಅಥವಾ ಆಕಸ್ಮಿಕವಾಗಿ ಪಟ್ಟಿಯಿಂದ ಬಿಟ್ಟು ಹೋಗಿರುವ ಸಾಧ್ಯತೆಯೂ ಇದೆ. ಆದರೆ ಆನೆದಂತದಂತಹ ಬೆಲೆ ಬಾಳುವ ವಸ್ತುವೊಂದು ಇಲಾಖೆ ಕಚೇರಿಗೆ ಬಂದಾಕ್ಷಣವೇ ಇದನ್ನು ನೋಂದಾವಣಿ ಮಾಡಿಸುವ ಜವಾಬ್ದಾರಿ ಆಗಿನ ಅಧಿಕಾರಿಯದ್ದಾಗಿತ್ತು. ಆದರೆ ದಂತದ ನೋಂದಣಿಯಾಗಿತ್ತೋ ಅಥವಾ ಇಲ್ಲವೋ ಎಂಬುದು ತಿಳಿದಿಲ್ಲ.
ಇನ್ನೊಂದೆಡೆ ಆನೆ ದಂತ ಕಳವು ಪ್ರಕರಣದ ವಿಚಾರಣೆ ನಡೆಯುತ್ತಿದೆ. ರಮಣ್ ಗುಪ್ತಾ ಎಸ್‌ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಇದು ಇತ್ತು ಎಂದು ಮೂಲಗಳು ಹೇಳುತ್ತಿವೆ. ಆ ಸಂದರ್ಭದಲ್ಲಿ ಕಚೇರಿಯ ದುರಸ್ತಿ ಸಂದರ್ಭ ಇದನ್ನು ತೆಗೆಯಲಾಗಿತ್ತು. ಆ ವೇಳೆ ಇದು ಕಾಣೆಯಾಗಿದೆ ಎಂದು ಮೂಲಗಳು ಹೇಳಿದ್ದು, ತನಿಖೆಯಿಂದಷ್ಟೇ ಸತ್ಯ ಹೊರ ಬರಬೇಕಾಗಿದೆ.