ಶಿವಮೊಗ್ಗ: ರಾಜ್ಯದ ಮೊದಲ ಸೈನಿಕ ಶಿಲ್ಪ ಉದ್ಯಾನವನ ಉದ್ಘಾಟನೆ ನಂತರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಪಾರ್ಕ್ನಲ್ಲಿ ಈಗ ಮದ್ಯದ ಬಾಟಲಿ, ಗುಟ್ಕಾ ಪಾಕೆಟ್, ಒಣಗಿದ ಅಲಂಕಾರಿಕ ಗಿಡಗಳು, ಎಲ್ಲೆಲ್ಲೂ ಕಸದ ರಾಶಿ ತುಂಬಿದೆ.
ಸೈನಿಕರ ಕರ್ತವ್ಯ ನಿಷ್ಠೆ, ಹೋರಾಟದ ಬದುಕು ಬಿಂಬಿಸುವ ಹಾಗೂ ದೇಶಪ್ರೇಮ ಅನಾವರಣಗೊಳಿಸುವ ನಿಟ್ಟಿನಲ್ಲಿ ಅಂದಿನ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಶಿಲ್ಪಕಲಾ ಅಕಾಡೆಮಿ ವಿದ್ಯಾರ್ಥಿಗಳಿಂದ ನಾನಾ ರೀತಿಯ ಕಲಾಕೃತಿಗಳನ್ನು ರಚಿಸಿದ್ದರು. ಪಡ್ಡೆಗಳ ಅಡ್ಡೆಯಾಗಿದ್ದ ಈ ಜಾಗವನ್ನು ದೇಶಾಭಿಮಾನದ ಸ್ಥಳವನ್ನಾಗಿ ಮಾಡಲು ಪಣ ತೊಟ್ಟಿದ್ದರು.
ದೇಶ ರಕ್ಷಣೆಯೇ ನಮ್ಮ ಗುರಿ ಎನ್ನುವಂತೆ ಎದೆಯುಬ್ಬಿಸಿ ನಿಂತಿರುವ ಸೈನಿಕ ಅಧಿಕಾರಿ, ಹೋರಾಟದಲ್ಲಿ ಶತ್ರುಗಳ ಗುಂಡೇಟು ತಿಂದು ಗಾಯಾಳಾದ ಇನ್ನೊಬ್ಬ ಯೋಧನನ್ನು ಹೊತ್ತು ಹೋಗುತ್ತಿರುವ ಕಲಾಕೃತಿ, ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ವೃದ್ಧ, ಮಗುವಿನ ರಕ್ಷಣಾ ಕಾರ್ಯದಲ್ಲಿ ನಿರತ ವೀರ ಯೋಧ, ಸೈನಿಕ ತನ್ನ ಸಂಸಾರವನ್ನು ತೊರೆದು ಸೈನ್ಯಕ್ಕೆ ಹೋಗುತ್ತಿರುವ ಭಾವನಾತ್ಮಕ ಸನ್ನಿವೇಶ, ವೀರ ಹುತಾತ್ಮದ ಸಂಕೇತವಾದ ಅಮರ್ ಜವಾನ್ ಕಲಾಕೃತಿಗಳು ಇಲ್ಲಿವೆ.
ಇದಲ್ಲದೆ ಅಧಿಕಾರಿ ಸೆಲ್ಯೂಟ್ ಹೊಡೆಯುತ್ತಿರುವುದು, ವಿಜಯೋತ್ಸವ ಆಚರಣೆ ದೃಶ್ಯ, ವಾಯುಸೇನೆ, ನೌಕಾಸೇನೆ, ಭೂಸೇನಾ ಅಧಿಕಾರಿಗಳು, ರಕ್ಷಣಾ ಕಾರ್ಯಾಚರಣೆಯಲ್ಲಿ ಹಿಂದೂ, ಮುಸ್ಲಿಂ ಎಲ್ಲರೂ ಒಂದೇ ಎನ್ನುವ ಸಂದೇಶ ಸಾರುವ ಕಲಾಕೃತಿ, ಇನ್ನೂ ಹಲವು ಈ ರೀತಿಯ ದೇಶ ಪ್ರೇಮ ಉಕ್ಕಿಸುವ ಸೈನಿಕ ಕಾರ್ಯಚಟುವಟಿಕೆ ಮತ್ತು ಸೈನಿಕರ ಬದುಕನ್ನು ಬಿಂಬಿಸುವ ಕಲಾಕೃತಿಗಳು ಈ ಪಾರ್ಕ್‌ನ ವಿಶೇಷತೆಯಾಗಿತ್ತು. ಜನಾಕರ್ಷಣೆಯ ಕೇಂದ್ರವಾಗಿದ್ದ ಈ ಉದ್ಯಾನ ಈಗ ಪಾಳು ಬಿದ್ದಿದೆ.
ಕಾರಣ ಏನು?: 2019, ಜುಲೈನಲ್ಲಿ ಉದ್ಘಾಟನೆಯಾಗಿದ್ದ ಪಾರ್ಕ್‌ನ್ನು ಯಾರು ನಿರ್ವಹಣೆ ಮಾಡಬೇಕೆಂಬ ಜಿಜ್ಞಾಸೆ ಮೂಡಿದ್ದೇ ಅಂದ ಹಾಳಾಗಲು ಕಾರಣವಾಯಿತು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದ ಪಾರ್ಕ್‌ನ್ನು ಸೈನಿಕ ಕಲ್ಯಾಣ ಇಲಾಖೆ ವತಿಯಿಂದ ಅಭಿವೃದ್ಧಿಪಡಿಸಲಾಯಿತು. ಕಾರ್ಗಿಲ್ ವಿಜಯ್ ದಿವಸ್ ದಿನದಂದು ಉದ್ಘಾಟನೆ ಕೂಡ ನೆರವೇರಿತು. ಉತ್ತಮ ಮಳೆಯಾಗಿದ್ದರಿಂದ ನವೆಂಬರ್‌ವರೆಗೂ ಗಿಡಗಳಿಗೆ ನೀರು ಬೇಕಿರಲಿಲ್ಲ. ಆದರೆ ನಂತರ ನೀರಿಲ್ಲದೇ ಅಲಂಕಾರಿಕ ಗಿಡಗಳು, ಹಸಿರು ಹುಲ್ಲಿನ ಹೊದಿಕೆ ಸಂಪೂರ್ಣ ಒಣಗಿದೆ. ಪ್ರತಿಕೃತಿಗಳ ಮೇಲೆ ಮರದ ಕೊಂಬೆ ಮುರಿದು ಬಿದ್ದರೂ ಅದನ್ನು ತೆರವುಗೊಳಿಸಲು ಯಾರೂ ಇಲ್ಲ.
ವಾಕಿಂಗ್ ಪಾತ್‌ನಲ್ಲಿ ಒಣಗಿದ ಎಲೆಗಳ ರಾಶಿ ಕಾಣುತ್ತಿದೆ. ಸೆಕ್ಯೂರಿಟಿ ಇಲ್ಲದ ಕಾರಣ ಪಡ್ಡೆ ಹುಡುಗ, ಹುಡುಗಿಯರು ಕೂರುವುದು, ಗುಟ್ಕಾ ಹಾಕುವುದು, ಮದ್ಯ ಸೇವನೆ ಮುಂದುವರಿದಿದೆ. ಒಟ್ಟಿನಲ್ಲಿ ಸೈನಿಕರಿಗೆ ಗೌರವ ತೋರಿಸಬೇಕಿದ್ದ ಪಾರ್ಕ್ ಈಗ ಅಗೌರವದ ತಾಣವಾಗಿದೆ.
ಇಲ್ಲಿನ “ಚೆನ್ನುಡಿ’ ಬಳಗದ ಸದಸ್ಯರು ಪಾರ್ಕ್ ನಿರ್ವಹಣೆಗೆ ಸಹಕಾರ ನೀಡುವುದಾಗಿ ಮುಂದೆ ಬಂದರೂ ಸಂಬಂಧಪಟ್ಟ ಇಲಾಖೆ ಸ್ಪಂದಿಸಿಲ್ಲ. “ಪರೋಕಪಕಾರಂ’ ತಂಡದವರು ಎರಡು ಬಾರಿ ಸ್ವಚ್ಛತೆ ಕಾರ್ಯ ಮಾಡಿದ್ದರು. ನೀರು ಪೂರೈಕೆ ಪೈಪ್ ಲೈನ್ ಹಾಳಾಗಿದ್ದು ಮಹಾನಗರ ಪಾಲಿಕೆ ಅದು ನಮ್ಮದಲ್ಲ ಎನ್ನುತ್ತಿದೆ. ಪೈಪ್‌ಲೈನ್ ಒಳಚರಂಡಿ ಮಂಡಳಿಗೆ ಸೇರಿದ್ದರಿಂದ ರಿಪೇರಿಗೆ ಅವರೇ ಮುಂದೆ ಬರಬೇಕಿದೆ.
ಸೈನಿಕರಿಗೆ ಗೌರವ ಸೂಚಿಸಲು ಈ ಪಾರ್ಕ್ ನಿರ್ಮಾಣ ಮಾಡಲಾಯಿತು. ಆದರೆ ನಂತರ ನಿರ್ವಹಣೆ ಮಾಡುತ್ತಿಲ್ಲ. ಕಾವಲುಗಾರರ ನೇಮಕ ಮಾಡಬೇಕು. ಸಿಸಿ ಕ್ಯಾಮೆರಾ ಅಳವಡಿಸಬೇಕು. ನಿರ್ವಹಣೆ ಜವಾಬ್ದಾರಿಯನ್ನು ಪಾಲಿಕೆಗೆ ವಹಿಸಬೇಕು. ಒಂದು ವೇಳೆ ಆಗದಿದ್ದರೆ ಸಂಘ- ಸಂಸ್ಥೆಗಳಿಗೆ ವಹಿಸಿ ಕೊಟ್ಟರೆ ನಮ್ಮ ಸಂಘ ನಿರ್ವಹಣೆ ಮಾಡಲಿದೆ.
ತ್ಯಾಗರಾಜ ಮಿತ್ಯಾಂತ,
ಚೆನ್ನುಡಿ ಬಳಗ
ಶರತ್ ಭದ್ರಾವತಿ