ಶಿವಮೊಗ್ಗ: ಜಿಲ್ಲೆಯಲ್ಲಿ ಕೋವಿಡ್ ವಿಶೇಷ ವಾರ್ಡ್ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಆರು ಜನ ಸಿಬ್ಬಂದಿಯನ್ನು ಅಮಾನತುಗೊಳಿಸಿ ಸಿಮ್ಸ್ ನಿರ್ದೇಶಕರು ಮಂಗಳವಾರ ಆದೇಶಿಸಿದ್ದಾರೆ.
ಕಾಯಂ ಶುಶ್ರೂಷಕಿ ಚೇತನಾ ಕುಮಾರಿ, ಹೊರಗುತ್ತಿಗೆ ಶುಶ್ರೂಷಕಿ ಭುವನೇಶ್ವರಿ, ಹೊರಗುತ್ತಿಗೆ ಅಟೆಂಡರ್‌ಗಳಾದ ಅರುಣ್ ಕುಮಾರ್, ಪದ್ಮರಾಜ್, ಹೊರಗುತ್ತಿಗೆ ಸ್ವೀಪರ್ ಅನಿತಾ, ಲಕ್ಷ್ಮೀದೇವಿ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ. ಕೋವಿಡ್-19ಗೆ ಸಂಬಂಧಪಟ್ಟಂತೆ ವಿಶೇಷ ವಾರ್ಡ್ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಇವರಿಗೆ ನಗರದ ಕುವೆಂಪು ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ತಂಗುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಸೋಮವಾರ ರಾತ್ರಿ ತಮಗೆ ಆಗುತ್ತಿರುವ ಅವ್ಯವಸ್ಥೆ ಮತ್ತು ತೊಂದರೆಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ನೀಡಲಾಗುತ್ತಿರುವ ಆಹಾರ ಗುಣಮಟ್ಟದಿಂದ ಕೂಡಿಲ್ಲ. ಡ್ನೂಟಿ ನಿಗದಿ ಪಡಿಸುತ್ತಿಲ್ಲ ಎಂದು ಟೀಕಿಸಿದ್ದಾರೆ. ಈ ವಿಷಯವನ್ನು ವಾಟ್ಸ್‌ಆ್ಯಪ್‌ನಲ್ಲಿ ಶೇರ್ ಮಾಡಿದ್ದಾರೆ. ಕೋವಿಡ್ -19 ಆಸ್ಪತ್ರೆಯ ಮೇಲುಸ್ತುವಾರಿ ಅಧಿಕಾರಿಯಾದ ಜಿಪಂ ಸಿಇಒ ಸಮಕ್ಷಮದಲ್ಲಿ ಒಪ್ಪಿ ಹೇಳಿಕೆ ನೀಡಿ, ಲಿಖೀತವಾಗಿ ತಿಳಿಸಿರುವುದರಿಂದ ಅವರನ್ನು ಅಮಾನತುಗಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ನಡುವೆ ಗಣ್ಯರು, ಸಂಘಟನೆ ಪ್ರಮುಖರು ಅಮಾನತು ಆದೇಶ ಹಿಂಪಡೆಯುವಂತೆ ಒತ್ತಡ ತಂದಿರುವುದಾಗಿ ತಿಳಿದುಬಂದಿದೆ.
ಆರು ಜನ ಶುಶ್ರೂಷಕರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ. ಇದುವರೆಗೆ ಆದೇಶ ಹಿಂಪಡೆದಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳ ಜತೆ ಚರ್ಚಿಸಲಾಗುವುದು.
ಡಾ. ಗುರುಪಾದಪ್ಪ,
ನಿರ್ದೇಶಕರು, ಸಿಮ್ಸ್