Advertisement

ಶಿಮುಲ್‌ನಿಂದ ಹಾಲು ಉತ್ಪಾದಕರಿಗೆ 2 ರೂ. ಕಡಿತ

04:49 PM Jun 03, 2020 | Naveen |

ಶಿವಮೊಗ್ಗ: ಮೂರು ಜಿಲ್ಲೆಗಳ ವ್ಯಾಪ್ತಿಯ ಶಿಮುಲ್‌ (ಶಿವಮೊಗ್ಗ ಹಾಲು ಉತ್ಪಾದಕರ ಒಕ್ಕೂಟ) ಸೋಮವಾರದಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ ಹಾಲಿಗೆ ಎರಡು ರೂ. ಕಡಿತಗೊಳಿಸಿದೆ. ಇನ್ನು ಮುಂದೆ ಒಕ್ಕೂಟದಿಂದ ರೈತರಿಗೆ 26 ರೂ. ಹಾಗೂ ಸರ್ಕಾರದ ಪ್ರೋತ್ಸಾಹ ಧನ ಸೇರಿ ಪ್ರತಿ ಲೀಟರ್‌ಗೆ 31 ರೂ. ದೊರೆಯಲಿದೆ.

Advertisement

ಶಿಮುಲ್‌ನಲ್ಲಿ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಒಂದು ವರ್ಷದ ಅವಧಿಯಲ್ಲಿ ಮೂರು ಬಾರಿ ಹೈನುಗಾರರಿಗೆ ನೀಡುವ ಧಾರಣೆಯನ್ನು ಹೆಚ್ಚಿಸಿತ್ತು. ಪ್ರತಿ ಲೀಟರ್‌ಗೆ 31.70 ರೂ. ನೀಡುವ ಮೂಲಕ ರಾಜ್ಯದಲ್ಲೇ ಹೈನುಗಾರರಿಗೆ ಹೆಚ್ಚು ಹಣ ನೀಡುವ ಒಕ್ಕೂಟ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹಾಲಿನ ಬೇಡಿಕೆ ಕುಸಿದ ಪರಿಣಾಮ ಶಿಮುಲ್‌ನಿಂದ ಕ್ರಮೇಣ ಖರೀದಿ ದರ ಇಳಿಸಲಾಗಿತ್ತು. ಇದುವರೆಗೆ ಪ್ರತಿ ಲೀಟರ್‌ಗೆ 28 ರೂ. ನೀಡಲಾಗುತ್ತಿತ್ತು. ಇನ್ನು ಮುಂದೆ 26 ರೂ.ನಂತೆ ಹಾಲು ಖರೀದಿಸಲಾಗುತ್ತದೆ.

ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಗಳನ್ನೊಳಗೊಂಡ ಒಕ್ಕೂಟದಲ್ಲಿ 1,250 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಪ್ರತಿ ದಿನ 5.80 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ 2.50 ಲಕ್ಷ ಲೀಟರ್‌ನಷ್ಟು ನೇರವಾಗಿ ಹಾಲು, ಮೊಸರು., ಮಜ್ಜಿಗೆ ರೂಪದಲ್ಲಿ ಗ್ರಾಹಕರಿಗೆ ಪೂರೈಕೆ ಮಾಡಲಾಗುತ್ತಿದೆ. ಒಂದು ಲಕ್ಷ ಲೀಟರ್‌ ಬೇರೆ ರಾಜ್ಯಗಳಿಗೆ ಕಳುಹಿಸಲಾಗುತ್ತದೆ. ಉಳಿದ ಹಾಲನ್ನು ಹಾಲಿನ ಪುಡಿ ಸೇರಿದಂತೆ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದನೆ ಮಾಡಲಾಗುತ್ತದೆ.

ಕುಸಿದ ಬೇಡಿಕೆ
ಪ್ರತಿ ವರ್ಷ ಈ ಅವಧಿಯಲ್ಲಿ 2.80 ಲಕ್ಷ ಲೀಟರ್‌ ಹಾಲು ನೇರವಾಗಿ ಗ್ರಾಹಕರನ್ನು ತಲುಪುತ್ತಿತ್ತು. ಲಾಕ್‌ಡೌನ್‌ ಕಾರಣದಿಂದ ಹೊಟೇಲ್
ಗಳು ಬಂದ್‌ ಆಗಿವೆ. ಶುಭ ಸಮಾರಂಭಗಳು ನಡೆಯುತ್ತಿಲ್ಲ. ಹೀಗಾಗಿ ಶಿಮುಲ್‌ ವ್ಯಾಪ್ತಿಯಲ್ಲಿ ಹಾಲಿನ ಬೇಡಿಕೆ ಕುಸಿತ ಕಂಡಿದೆ. ಉತ್ಪಾದಕರಿಂದ ಖರೀದಿ ದರ ಇಳಿಕೆ ಮಾಡಿರುವುದು ತಾತ್ಕಾಲಿಕ ಕ್ರಮವಾಗಿದ್ದು, ಹಾಲಿನ ಪೂರೈಕೆ ಹೆಚ್ಚಳವಾಗಿರುವುದರಿಂದ, ಬೇಡಿಕೆ ಕುಸಿದಿರುವುದರಿಂದ ಅನಿವಾರ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next