ಶಿವಮೊಗ್ಗ: ಮಾಚೇನಹಳ್ಳಿಯ ಶಿವಮೊಗ್ಗ ಹಾಲು ಒಕ್ಕೂಟದ ಮುಂದೆ ಧರೆ ಕುಸಿದಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ದುರಸ್ತಿ ಮಾಡಿಸುತ್ತಿದ್ದಾರೆ. ಆದರೆ ಇದು ತಾತ್ಕಾಲಿಕ ದುರಸ್ತಿಯಾಗಿದ್ದು ಭಾರೀ ವಾಹನಗಳು ಪ್ರತಿ ದಿನ ಓಡಾಡಿದರೆ ಮತ್ತಷ್ಟು ಕುಸಿಯುವ ಆತಂಕ ಇದೆ.
ಶಿಮುಲ್ ಎದುರಿನ ರಸ್ತೆ ಪರಿಸ್ಥಿತಿ ಬಗ್ಗೆ ಉದಯವಾಣಿಯಲ್ಲಿ ಗುರುವಾರ ವರದಿ ಪ್ರಕಟವಾಗಿತ್ತು. ಇದಾದ ನಂತರ ದುರಸ್ತಿ ಕಾರ್ಯ ನಡೆಯುತ್ತಿದೆ. ಜಿಲ್ಲಾಡಳಿತ ತಕ್ಷಣ ಗಮನಹರಿಸಿ ಶಿವಮೊಗ್ಗ – ಭದ್ರಾವತಿ ಓಡಾಡುವ ಭಾರೀ ವಾಹನಗಳನ್ನು ಪರ್ಯಾಯ ಮಾರ್ಗದಲ್ಲಿ ಹೋಗುವಂತೆ ಮಾಡಬೇಕಿದೆ.
ಶಿವಮೊಗ್ಗದಿಂದ ಹೋಗುವ, ಬರುವ ಎಲ್ಲ ವಾಹನಗಳು ಪ್ರತಿ ನಿತ್ಯ ಇದೇ ಮಾರ್ಗದಲ್ಲಿ ಓಡಾಡುವುದರಿಂದ ಶಿವಮೊಗ್ಗ- ಭದ್ರಾವತಿ ರಸ್ತೆ ಯಾವಾಗಲೂ ಬ್ಯೂಸಿಯಾಗಿರುತ್ತದೆ. ಚತುಷ್ಪಥ ರಸ್ತೆ ಕಾಮಗಾರಿಗಾಗಿ ಮಾಚೇನಹಳ್ಳಿ ಬಳಿ ಗುಡ್ಡವನ್ನು ಸಮತಟ್ಟು ಮಾಡುವ ಕೆಲಸ ನಡೆಯುತ್ತಿದೆ. ತಾತ್ಕಾಲಿಕವಾಗಿ ಸರ್ವಿಸ್ ರಸ್ತೆಯಲ್ಲೆ ಎಲ್ಲ ವಾಹನಗಳು ಹೋಗಲು ವ್ಯವಸ್ಥೆ ಮಾಡಲಾಗಿದೆ. ಗುಡ್ಡ ಕಡಿದು ರಸ್ತೆ ಮಾಡುವಾಗ ಬರೀ ಬಂಡೆಗಳು ಸಿಕ್ಕಿದ್ದರಿಂದ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಹೈವೇ ಪ್ರಾಧಿಕಾರ ಕೈಗೊಂಡಿರಲಿಲ್ಲ. ಈಗ ಸರ್ವಿಸ್ ರಸ್ತೆ ಕುಸಿಯುತ್ತಿದ್ದು ಪ್ರತಿ ಗಂಟೆಗೂ ಅದು ವಿಸ್ತರಿಸುತ್ತಿದೆ. ತಾತ್ಕಾಲಿಕವಾಗಿ ಕಲ್ಲು, ಮಣ್ಣು ಸುರಿದು ಹೆಚ್ಚಿನ ಅನಾಹುತ ತಪ್ಪಿಸಲಾಗುತ್ತಿದೆ.
ಮಳೆಗಾಲ ಇನ್ನೂ ಎರಡು ತಿಂಗಳು ಇರುವುದರಿಂದ ಭಾರೀ ವಾಹನಗಳ ಓಡಾಟವನ್ನು ನಿಯಂತ್ರಣ ಮಾಡದಿದ್ದರೆ ಅಪಾಯಕ್ಕೆ ಆಹ್ವಾನ ನೀಡಲಿದೆ.