Advertisement

ನೆರೆಹಾನಿ ಪರಿಹಾರಕ್ಕೆ ತುರ್ತು ಕ್ರಮ

07:37 PM Oct 25, 2019 | Team Udayavani |

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ನಾಲ್ಕಾರು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಮನೆ ಹಾನಿ, ಜೀವ ಹಾನಿ, ಬೆಳೆ ಹಾನಿ ಮುಂತಾದವುಗಳಿಗೆ ಪರಿಹಾರ, ಶಾಲಾ ಕಟ್ಟಡ, ರಸ್ತೆ, ಸೇತುವೆಗಳ ದುರಸ್ತಿಗೊಳಿಸಲು ಸರ್ಕಾರದ ವತಿಯಿಂದ ಅಗತ್ಯವಿರುವ ಎಲ್ಲಾ ರೀತಿಯ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್‌ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಹೇಳಿದರು.

Advertisement

ಗುರುವಾರ ಮಳೆಹಾನಿ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಹಿಂದೆ ಮಳೆಹಾನಿಯಿಂದ ಸಂತ್ರಸ್ತರಾದವರೆಲ್ಲರಿಗೂ ಪರಿಹಾರ ಧನ ನೀಡಲಾಗಿದೆ. ಪ್ರಸ್ತುತ ಹಾನಿಗೊಳಗಾಗಿರುವ ಫಲಾನುಭವಿಗಳಿಗೂ ತ್ವರಿತಗತಿಯಲ್ಲಿ ಪರಿಹಾರ ಧನ ವಿತರಿಸುವಂತೆ ಜಿಲ್ಲಾ ಧಿಕಾರಿಗಳಿಗೆ ಸೂಚಿಸಿದ ಅವರು, ಭದ್ರಾವತಿಯಲ್ಲಿ ಮಂಗಳವಾರ ಮಳೆಯಿಂದಾಗಿ ಜೀವಹಾನಿಯಾಗಿರುವ ಕುಟುಂಬದ ಅವಲಂಬಿತರಿಗೆ ಕೂಡಲೇ 5 ಲಕ್ಷ ರೂ.ಗಳ ಪರಿಹಾರ ಧನವನ್ನು ನೀಡುವಂತೆಯೂ ಸೂಚಿಸಿದರು.

ಈ ಹಿಂದೆ ಮಳೆಯಿಂದ ಮನೆಹಾನಿಯಾಗಿರುವ ಮಂಡ್ಲಿ, ಚಿಕ್ಕಲ್‌ ಮತ್ತು ಶಾಂತಮ್ಮ ಲೇಔಟ್‌ನ ಇನ್ನೂ ಕೆಲವು ಫಲಾನುಭವಿಗಳಿಗೆ ತಕ್ಷಣದ ಪರಿಹಾರ ಧನ ಮಂಜೂರಾಗದಿರುವ ಬಗ್ಗೆ ಅಹವಾಲುಗಳಿದ್ದು, ಅವುಗಳನ್ನು ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆಯೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಮಳೆಹಾನಿಗೊಳಗಾದ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಿಗೆ, ಅಂಗನವಾಡಿ ಕೆಂದ್ರಗಳ ದುರಸ್ತಿಗೆ ಅಗತ್ಯ ಅನುದಾನ ಮಂಜೂರಾಗಿದ್ದು, ನ. 5ರೊಳಗಾಗಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ, ಕಾಮಗಾರಿ ಆರಂಭಿಸಲಾಗುವುದು. ಆ ಕಾಮಗಾರಿಗಳ ಉದ್ಘಾಟನೆಯನ್ನು 5ರಂದೇ ನೆರವೇರಿಸಲಾಗುವುದು. ಒಟ್ಟು 9 ಕೋಟಿ ಹಾಗೂ ಶೌಚಾಲಯಗಳ ದುರಸ್ತಿಗೆ 4.50ಕೋಟಿ ರೂ.ಗಳ ವೆಚ್ಚದಲ್ಲಿ ನಡೆಯಲಿರುವ ಈ ಕಾಮಗಾರಿಯು ಆರಂಭಗೊಂಡ 2-3 ತಿಂಗಳೊಳಗಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.

Advertisement

ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೊಳಪಡುವ ಜಿಲ್ಲೆಯ 182 ಕೆರೆಗಳ ದುರಸ್ತಿಗೆ ಟೆಂಡರ್‌ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅಲ್ಲದೇ ಜಿಪಂ ವ್ಯಾಪ್ತಿಯ 441ಕೆರೆಗಳನ್ನು 24 ಕೋಟಿ ರೂ.ಗಳ ವೆಚ್ಚದಲ್ಲಿ ದುರಸ್ತಿಗೊಳಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೂಡಲೇ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಶಿವಮೊಗ್ಗ ಜಿಲ್ಲೆಯ ಎಲ್ಲಾ ರಸ್ತೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರದಿಂದ ಸೂಚನೆ ಹಾಗೂ ಅಗತ್ಯ ಅನುದಾನ ಬಂದಿದೆ. ಅಲ್ಲದೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಶಾಸಕರ ಅಪೇಕ್ಷೆಯಂತೆ ಕಾಮಗಾರಿಗಳನ್ನು ನಿರ್ವಹಿಸಲು ಸೂಚಿಸಲಾಗಿದೆ. ಒಟ್ಟಾರೆ ರಾಜ್ಯದ ಎಲ್ಲಾ ರಸ್ತೆಗಳ ಕಾಮಗಾರಿಗಳು ಆರಂಭವಾಗಲಿವೆ ಎಂದರು.

ಜಾನುವಾರು ಸಾವು ಪ್ರಕರಣಗಳಲ್ಲಿ ಅಗತ್ಯ ಪರಿಹಾರ ಧನ ವಿತರಿಸಲಾಗಿದೆ. ಪ್ರಸ್ತುತ ಮನೆಗೆ ನೀರು ನುಗ್ಗಿ ಹಾನಿಯಾಗಿರುವ 6705 ಮನೆಗಳಿಗೆ ತಕ್ಷಣದ ಪರಿಹಾರವಾಗಿ 10,000/-ರೂ.ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಮನೆ ಕಟ್ಟಿಕೊಳ್ಳಲು ತಲಾ 1 ಲಕ್ಷ ರೂ.ಗಳನ್ನು ನೀಡಲಾಗಿದೆ. ಇತ್ತೀಚಿನ 4-6ದಿನಗಳಲ್ಲಿ ಬಿದ್ದ ಮಳೆಯಿಂದಾಗಿ ಜಿಲ್ಲೆಯಲ್ಲಿ 360 ಮನೆಗಳು ಹಾನಿಗೊಳಗಾಗಿವೆ. ಅವುಗಳ ದುರಸ್ತಿಗೂ ಅನುದಾನ
ನೀಡಲಾಗುವುದು ಎಂದರು.

ಬೆಳೆ ಹಾನಿ: 644 ಹೆಕ್ಟೇರ್‌ ಭೂಮಿ ಜಲಾವೃತವಾಗಿದ್ದು, ಪರಿಹಾರ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಹಿಂದೆ ಬೆಳೆಹಾನಿ ಬಗ್ಗೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಯಾಗಿದ್ದು, ಶೀಘ್ರವೇ ಫಲಾನುಭವಿಗಳಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಮಂಡ್ಲಿಯಲ್ಲಿನ ಸಂತ್ರಸ್ತ ನಿವಾಸಿಗಳಿಗೆ ಪರ್ಯಾಯವಾಗಿ ಸುರಕ್ಷಿತ ಸ್ಥಳದಲ್ಲಿ ಹೊಸದಾಗಿ ಮನೆಗಳನ್ನು ನಿರ್ಮಿಸಿ, ಅವರನ್ನು ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಅಲ್ಲಿ ಮಳೆ ನೀರು ಸುಲಭವಾಗಿ ಹರಿಯುವಂತಾಗಲು ಮಹಾನಗರ ಪಾಲಿಕೆ ಹಾಗೂ ಸೂಡಾ ಇಂಜಿನಿಯರರ ಸಲಹೆಯಂತೆ ಅಲ್ಲಿ ಬಾಕ್ಸ್‌ ಡ್ರೈನೇಜ್‌ಗಳ ನಿರ್ಮಾಣಕ್ಕೂ ಕ್ರಮ ವಹಿಸಲಾಗುವುದು. ಅಲ್ಲದೇ ನಗರದ ಎಲ್ಲಾ ರಾಜಾ ಕಾಲುವೆಗಳ ದುರಸ್ತಿಗೂ ಕ್ರಮ ವಹಿಸಲಾಗುವುದು ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಅವರು ಮಾಹಿತಿ ನೀಡಿ, ಈ ಹಿಂದೆ ಆಗಿದ್ದ ಮಳೆಹಾನಿಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ 7515 ಬಾಧಿತ ಕುಟುಂಬಗಳಿಗೆ ಅರ್ಜಿಗಳನ್ನು ಪಡೆದುಕೊಳ್ಳಲಾಗಿದ್ದು, 6701 ಕುಟುಂಬಕ್ಕೆ 670.10 ಲಕ್ಷ ರೂ.ಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ ಎಂದು ಸಚಿವರಿಗೆ ತಿಳಿಸಿದರು.

ಅಲ್ಲದೇ 18ಜೀವಹಾನಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಈಗಾಗಲೇ 15 ಕುಟುಂಬಗಳ ಅವಲಂಬಿತರಿಗೆ ತಲಾ ರೂ. 5ಲಕ್ಷದಂತೆ 75ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ. ಮೊನ್ನೆ ಜೀವಹಾನಿಯಾಗಿರುವ ಭದ್ರಾವತಿಯ ಒಂದು ಕುಟುಂಬದ ಅವಲಂಬಿತರಿಗೂ ಪರಿಹಾರಧನ ವಿತರಿಸಲಾಗುವುದು. ಮಳೆಯಿಂದ ಜಮೀನುಗಳಲ್ಲಿ ಮರಳು ತುಂಬಿಕೊಂಡಿದ್ದು, ಅದನ್ನು ತೆರವುಗೊಳಿಸಲು 4913 ರೈತರ 2068.65 ಹೆಕ್ಟೇರ್‌ ಜಮೀನಿಗೆ 232.097 ಲಕ್ಷ ರೂ.ಗಳನ್ನು ವಿತರಿಸಲಾಗಿದೆ ಎಂದರು.

ಸಭೆಯಲ್ಲಿ ಶಾಸಕರಾದ ಕೆ.ಬಿ. ಅಶೋಕನಾಯ್ಕ, ಕುಮಾರ ಬಂಗಾರಪ್ಪ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್‌. ವೈಶಾಲಿ, ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಶಾಂತರಾಜು, ಮಹಾನಗರ ಪಾಲಿಕೆ ಮಹಾಪೌರರಾದ ಲತಾ ಗಣೇಶ್‌, ಉಪಮಹಾಪೌರ ಚನ್ನಬಸಪ್ಪ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ್‌ ವಟಾರೆ, ಅಪರ ಜಿಲ್ಲಾಧಿಕಾರಿ ಅನುರಾಧಾ ಜಿ., ಉಪವಿಭಾಧಿಗಾಕಾರಿ ಟಿ.ವಿ. ಪ್ರಕಾಶ್‌, ಸೂಡಾ ಆಯುಕ್ತ ಎಂ. ಕರಭೀಮಣ್ಣನವರ್‌ ಮತ್ತಿತರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next