Advertisement

ಹಾಳಾದ ರಸ್ತೆ ದುರಸ್ತಿಗೆ ಸೂಚನೆ: ಈಶ್ವರಪ್ಪ

05:22 PM Dec 05, 2019 | |

ಶಿವಮೊಗ್ಗ: ಭಾರೀ ಮಳೆಯಿಂದಾಗಿ ಹಾಳಾಗಿರುವ ಮತ್ತು ಗುಂಡಿ ಬಿದ್ದಿರುವ ರಸ್ತೆಗಳನ್ನು ಜ. 1ರೊಳಗಾಗಿ ದುರಸ್ತಿಗೊಳಿಸಿ, ಸಾರ್ವಜನಿಕ ಅನುಕೂಲಕ್ಕೆ ಮುಕ್ತವಾಗಿರುವಂತೆ ನೋಡಿಕೊಳ್ಳಲು ಪಾಲಿಕೆ ಅಯುಕ್ತರಿಗೆ ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಹೇಳಿದರು.

Advertisement

ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ಮಾರ್ಟ್‌ಸಿಟಿ  ಕಾಮಗಾರಿಗಳ ಪ್ರಗತಿ ಪರಿಶೀಲನೆ ಕುರಿತು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕಾಮಗಾರಿಗಳನ್ನು ಕೈಗೊಳ್ಳಲು ಹಾಗೂ ಹೊಸ ರಸ್ತೆಗಳ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ ಎಂದರು.

ಶಿವಮೊಗ್ಗ ಸ್ಮಾರ್ಟ್‌ಸಿಟಿ ಯೋಜನೆಯಡಿ ಈಗಾಗಲೇ ಕೈಗೊಂಡಿರುವ ಹಾಗೂ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗಳು ತ್ವರಿತಗತಿಯಲ್ಲಿ ಹಾಗೂ ನಿಗ ಪಡಿಸಿದ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಅನುಕೂಲವಾಗುವಂತೆ ನಿರ್ವಹಣೆ ಮತ್ತು ಉಸ್ತುವಾರಿಗಾಗಿ ಪಾಲಿಕೆಯ ಇಂಜಿನಿಯರ್‌ರಿಗೆ ನಿಯೋಜಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದ ಅವರು, ಉಸ್ತುವಾರಿ ಅಧಿಕಾರಿಗಳು ತಮ್ಮ ಗುತ್ತಿಗೆದಾರರೊಂದಿಗೆ ಮುಂದಿನ ಸಭೆಗಳಲ್ಲಿ ಕಾಮಗಾರಿಗಳ ಪ್ರಗತಿಯ ಸಂಪೂರ್ಣ ವಿವರಗಳನ್ನು ಸಲ್ಲಿಸಲು ಸಿದ್ಧರಾಗಿರಬೇಕೆಂದರು.

ನಗರದ ಸೌಂದರ್ಯ ಹೆಚ್ಚಿಸಲು ಅನುಕೂಲವಾಗುವಂತೆ ಪಾಲಿಕೆ ವ್ಯಾಪ್ತಿಯಲ್ಲಿ 32 ಕೋಟಿ ರೂ.ಗಳ ವೆಚ್ಚದಲ್ಲಿ 20,000 ಎಲ್‌.ಇ.ಡಿ. ದೀಪಗಳನ್ನು ಅಳವಡಿಸಲು ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಈ ಗುತ್ತಿಗೆ ಅವಧಿಯು 7ವರ್ಷಗಳಾಗಿದ್ದು, ಈ ಅವಧಿಯಲ್ಲಿ ಅದರ ಸಂಪೂರ್ಣ ನಿರ್ವಹಣೆ ಗುತ್ತಿಗೆದಾರರದ್ದೇ ಆಗಿರುತ್ತದೆ. ಈ ಸಂಬಂಧ ಇನ್ನಷ್ಟು ವಿವರಗಳ ಕುರಿತು ಚರ್ಚಿಸಲು ಎಲ್‌.ಇ.ಡಿ. ಬೀದಿದೀಪ ನಿರ್ವಹಣೆಗೆ ಗುತ್ತಿಗೆ ಹೊಂದಿರುವವರನ್ನು ಮುಂದಿನ ಸಭೆಗೆ ಆಹ್ವಾನಿಸುವಂತೆಯೂ ಸೂಚಿಸಿದ ಅವರು, ಜ.15ರೊಳಗಾಗಿ ಅವರಿಗೆ ಕಾರ್ಯಾದೇಶ ನೀಡುವಂತೆಯೂ ಸೂಚಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ದುರಸ್ತಿಗೆ ಟೆಂಡರ್‌ ಪ್ರಕ್ರಿಯೆ ಚಾಲನೆಯಲ್ಲಿದ್ದು, ಕೂಡಲೇ ಟೆಂಡರ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಕಾರ್ಯಾದೇಶ ನೀಡುವಂತೆ ಸೂಚಿಸಿದ ಅವರು, ಶಾಲೆಗಳ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಾಡುವ ಕಾಮಗಾರಿ ತ್ವರಿತ ಹಾಗೂ ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳಲು ಸೂಚಿಸಿದರು.

Advertisement

ಶಾಲೆಗಳ ದುರಸ್ತಿಗೆ ಸಂಬಂಸಿದಂತೆ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿರುವುದು ಸರಿ. ಆದರೆ, ಪ್ರತಿ ಶಾಲೆಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಪೂರ್ಣ ವಿವರಗಳನ್ನು ಹೊಂದಿದ್ದು, ಅದರಂತೆಯೇ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಅಲ್ಲದೇ ಶಾಲೆಗಳ ಶೌಚಾಲಯ ದುರಸ್ತಿಗೆ ಟೆಂಡರ್‌ ಪ್ರಕ್ರಿಯೆ ಕೂಡ ಪ್ರಗತಿಯಲ್ಲಿದ್ದು, ಪೂರ್ಣಗೊಳಿಸಿ, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿ, ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಸಚಿವರು ಆಯುಕ್ತರಿಗೆ ಸೂಚಿಸಿದರು.

ಶಿವಮೊಗ್ಗ ನಗರಕ್ಕೆ ಸಮೀಪದ ಗೋವಿಂದಾಪುರದಲ್ಲಿ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ತಾಂತ್ರಿಕ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆಗೊಂಡು ಶೀಘ್ರದಲ್ಲಿ ಬರುವ ನಿರೀಕ್ಷೆ ಇದೆ. ಅಂತೆಯೇ ತಕ್ಷಣ ಕಾಮಗಾರಿ ಆರಂಭಿಸಲು ಅನುಮತಿ ನೀಡಲಾಗುವುದು ಎಂದರು.

ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಆರ್‌. ಪ್ರಸನ್ನಕುಮಾರ್‌, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌, ಪಾಲಿಕೆ ಮಹಾಪೌರರಾದ ಲತಾ ಗಣೇಶ್‌, ಉಪಮಹಾಪೌರರಾದ ಚನ್ನಬಸಪ್ಪ, ರಮೇಶ್‌ ಹೆಗ್ಡೆ, ಜ್ಞಾನೇಶ್ವರ್‌, ಮಹಾನಗರಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next