Advertisement

ಕಾಯಿಲೆ ತಡೆಗೆ ಕ್ರಮ ಅಗತ್ಯ

06:08 PM Nov 13, 2019 | Team Udayavani |

ಶಿವಮೊಗ್ಗ: ಮಾರಣಾಂತಿಕ ಕಾಯಿಲೆಗಳ ವಿರುದ್ಧ 0-2ವರ್ಷದೊಳಗಿನ ಮಕ್ಕಳಲ್ಲಿ ಹಾಗೂ ಗರ್ಭಿಣಿಯರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಮಿಷನ್‌ ಇಂದ್ರಧನುಷ್‌ ಯೋಜನೆಯಡಿ ಧನುರ್ವಾಯು, ಬಾಲಕ್ಷಯ, ಗಂಟಲುಮಾರಿ, ಮುಂತಾದ ಮಾರಕ ಕಾಯಿಲೆಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಅವರು ಹೇಳಿದರು.

Advertisement

ಮಂಗಳವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳ್ಳುವ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈ ಲಸಿಕಾ ಅಭಿಯಾನ ನಿರೀಕ್ಷೆಯಂತೆ ಅನುಷ್ಠಾನಗೊಳ್ಳಲಿದೆ. ಆದರೆ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಈ ಹಿಂದಿನ ಲಸಿಕಾ ಅಭಿಯಾನದಲ್ಲಿ ಹಾಗೂ ಈವರೆಗೆ ಲಸಿಕೆ ಹಾಕಿಸದೆ ಕೈಬಿಟ್ಟು ಹೋಗಿರುವ ಕುಟುಂಬಗಳು, ಲಸಿಕೆಯನ್ನು ಹಾಕಿಸಿಕೊಳ್ಳದಿರುವ, ಕೆಲವು ಲಸಿಕೆಗಳನ್ನು ಹಾಕಿಸಿಕೊಂಡು ಮತ್ತೆ ಕೆಲವು ಲಸಿಕೆಗಳಿಂದ ವಂಚಿತರಾದ ಮಕ್ಕಳನ್ನು ಗುರುತಿಸಿ ಲಸಿಕೆ ಹಾಕಲು ಉದ್ದೇಶಿಸಿದ್ದು, ನಗರದ ಕೊಳಚೆ ಪ್ರದೇಶಗಳು, ವಲಸಿಗರು ನೆಲೆಸಿರುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಈಗಾಗಲೇ ಸಮೀಕ್ಷೆ ನಡೆಸಲಾಗಿದೆ. ಇದರಿಂದಾಗಿ ಮಾರಣಾಂತಿಕ ಕಾಯಿಲೆಗಳಿಗೆ ಲಸಿಕೆ ಪಡೆಯದಿರುವ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ಹಾಕಲು ಸಾಧ್ಯವಾಗಲಿದೆ ಎಂದರು.

ಮಕ್ಕಳು ಮತ್ತು ಗರ್ಭಿಣಿಯರಿಗೆ ಕಾಲಕಾಲಕ್ಕೆ ಕೆಲವು ಚುಚ್ಚುಮದ್ದುಗಳನ್ನು ನೀಡುವ ಅಗತ್ಯವಿದೆ. ಲಸಿಕೆಗಳನ್ನು ಪಡೆಯದಿರುವವರು ಮುಂದಿನ ದಿನಗಳಲ್ಲಿ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವ ಸಂಭವವಿದೆ. ಆದ್ದರಿಂದ ಆರಂಭದ ಹಂತವಾಗಿ ಡಿ. 2ರಂದು ಈ ಲಸಿಕೆ ಆಂದೋಲನವನ್ನು ಜಿಲ್ಲಾದ್ಯಂತ ಆಯೋಜಿಸಲಾಗಿದೆ. ಡಿಸೆಂಬರ್‌, ಜನವರಿ, ಫೆಬ್ರವರಿ ಮತ್ತು ಮಾರ್ಚ್‌ ಮಾಹೆಗಳಲ್ಲಿ ತಲಾ ಹತ್ತು ದಿನಗಳಲ್ಲಿ ಲಸಿಕೆ ಹಾಕಲಾಗುವುದು ಎಂದರು.

ಶಾಲೆಗಳಲ್ಲಿ ಲಸಿಕೆ ಕಾರ್ಯಕ್ರಮ: 5 ಮತ್ತು 6 ವರ್ಷದ ಮಕ್ಕಳಿಗೆ ಡಿಪಿಟಿ ಲಸಿಕೆ ಹಾಗೂ 10ಮತ್ತು 16 ವರ್ಷದ ಮಕ್ಕಳಿಗೆ ಟಿ.ಡಿ. ಲಸಿಕೆಯನ್ನು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಮಕ್ಕಳಿಗೆ ಡಿ. 11 ರಿಂದ 31ರವರೆಗೆ ಲಸಿಕೆ ಹಾಕಲು ಉದ್ದೇಶಿಸಲಾಗಿದ್ದು, ಪೋಷಕರು ನಿಗದಿಪಡಿಸಿದ ಅವಧಿಯಲ್ಲಿ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಸೂಚಿಸಿದ ಅವರು, ಖಾಸಗಿ ಶಾಲೆಗಳ ಮುಖ್ಯಸ್ಥರು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಅವರು ಸೂಚಿಸಿದರು.

Advertisement

ಇದೇ ತಿಂಗಳ 25ರಿಂದ ಡಿ. 10ರವರೆಗೆ ಜಿಲ್ಲೆಯಲ್ಲಿ ಕುಷ್ಟರೋಗ ಮತ್ತು ಕ್ಷಯರೋಗ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಸಮೀಕ್ಷೆಗೆ ಮನೆ- ಮನೆಗೆ ಬರುವ ಅಧಿಕಾರಿ, ಸಿಬ್ಬಂದಿಗಳಿಗೆ ಸಾರ್ವಜನಿಕರು ಮಾಹಿತಿ ನೀಡಿ ಸಹಕರಿಸುವಂತೆ ಅವರ ಮನವಿ ಮಾಡಿದ ಅವರು, ಈ ಕಾರ್ಯಕ್ಕಾಗಿ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಹಾಗೂ ಅಂಗನವಾಗಿ ಕಾರ್ಯಕರ್ತೆಯರು ಹಾಗೂ ನರ್ಸಿಂಗ್‌ ಕಾಲೇಜಿನ ಪ್ರಶಿಕ್ಷಣಾರ್ಥಿಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು ಎಂದರು.

ಲಸಿಕೆ ಆಂದೋಲನದ ಯಶಸ್ಸು ಹಾಗೂ ಸಮೀಕ್ಷೆಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಕುರಿತು ಡಿ. 28ರೊಳಗಾಗಿ ಮಾಹಿತಿ ನೀಡುವಂತೆ ಹಾಗೂ ಈಗಾಗಲೇ ನಿಗಧಿ ಪಡಿಸಿದ ದಿನಾಂಕಗಳಂದೇ ಕಾರ್ಯಕ್ರಮ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಜೇಶ್‌ ಸುರಗೀಹಳ್ಳಿ ಅವರು ಸೂಚಿಸಿದರು.

ಸಭೆಯಲ್ಲಿ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತು ಇಲಾಖೆಯ ಅನುಷ್ಠಾನಾ ಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಆರ್‌.ಸಿ.ಎಚ್‌. ಅಧಿಕಾರಿ ಡಾ| ನಾಗರಾಜ ನಾಯ್ಕ, ಡಾ| ಶಂಕರಪ್ಪ, ಡಾ| ಶಮಾ, ಡಾ| ಹನುಮಂತಪ್ಪ, ಡಾ|
ನಟರಾಜ್‌, ಡಾ| ಸತ್ಯನಾರಾಯಣ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next