Advertisement

ಪ್ಲಾಸ್ಟಿಕ್‌ ನಿಷೇಧ ಕಟ್ಟು ನಿಟ್ಟಿನ ಜಾರಿಗೆ ಆದೇಶ

05:05 PM Nov 10, 2019 | Naveen |

ಶಿವಮೊಗ್ಗ: ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್‌ಗಳು ಘನತ್ಯಾಜ್ಯ ನಿರ್ವಹಣೆ ಕುರಿತು ಸಮಗ್ರವಾದ ಬೈಲಾ ಮತ್ತು ಮೈಕ್ರೋ ಪ್ಲ್ಯಾನ್
ರೂಪಿಸಬೇಕು ಎಂದು ರಾಷ್ಟ್ರೀಯ ಹಸಿರು ಪೀಠದ ಅಧ್ಯಕ್ಷ ನ್ಯಾ| ಸುಭಾಷ್‌ ಅಡಿ ಅವರು ಸೂಚನೆ ನೀಡಿದರು.

Advertisement

ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತು ರಾಷ್ಟ್ರೀಯ ಹಸಿರು ಪೀಠದ ಆದೇಶಗಳ ಅನುಷ್ಠಾನ ಕುರಿತು ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಮನೆ ಮನೆಯಿಂದ ಕಸ ಸಂಗ್ರಹಣೆ, ಮೂಲದಲ್ಲೇ ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕಿಸುವಿಕೆ ಕಾರ್ಯವನ್ನು ಶೇ.100ರಷ್ಟು ಕಾನೂನು ಪ್ರಕಾರ ಮಾಡಬೇಕಾಗಿದೆ. ಇದಕ್ಕಾಗಿ ಸೂಕ್ತ ಬೈಲಾ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು ರೂಪಿಸಬೇಕು. ಕಸ ಸಂಗ್ರಹಣೆ ವಾಹನ, ಮಾನವ ಸಂಪನ್ಮೂಲ, ಕಸ ವಿಲೇವಾರಿ ಘಟಕ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಎಲ್ಲಾ ಸ್ಥಳೀಯ ಸಂಸ್ಥೆಗಳು ಹೊಂದಿರಬೇಕು. ಎಲ್ಲಾ ಕಸ ಸಂಗ್ರಹಣಾ ವಾಹನಕ್ಕೆ ಜಿಪಿಎಸ್‌ ಮತ್ತು ಜಿಯೋ ಫೆನ್ಸಿಂಗ್‌ ಅಳವಡಿಸಬೇಕು. ಪ್ರತಿ ಮನೆಯಲ್ಲಿ ತ್ಯಾಜ್ಯ ಸಂಗ್ರಹಿಸಿರುವ ಕುರಿತು ಖಾತ್ರಿಪಡಿಸಲು ಕಾರ್ಡ್‌ ಸ್ಕ್ಯಾನಿಂಗ್‌ ವ್ಯವಸ್ಥೆ ಇರಬೇಕು ಎಂದು ಹೇಳಿದರು.

ದಂಡ ವಿಧಿಸಿ: ಹಸಿ ಕಸ ಮತ್ತು ಒಣಕಸ ವಿಂಗಡಿಸದೇ ನೀಡುವ ಮನೆಯವರಿಗೆ ದಂಡ ವಿಧಿಸಲು ಬೈಲಾದಲ್ಲಿ ಕಾನೂನು ರೂಪಿಸಬೇಕು. ಇದೇ ರೀತಿ ಅಂತಹ ವಿಂಗಡಿಸದ ಕಸವನ್ನು ಸಂಗ್ರಹಿಸುವ ಪೌರ ಕಾರ್ಮಿಕ ಹಾಗೂ ಗುತ್ತಿಗೆದಾರರಿಗೂ ದಂಡ ವಿಧಿಸಲು ಅವಕಾಶವಿರಬೇಕು. ಹಸಿ ಕಸವನ್ನು ಮನೆಗಳಲ್ಲಿಯೇ ಕಂಪೋಸ್ಟ್‌ ಮಾಡಲು ಉತ್ತೇಜಿಸಬೇಕು. ಪೈಪ್‌ ಕಂಪೋಸ್ಟ್‌ ಅಳವಡಿಸುವವರಿಗೆ ಪ್ರೋತ್ಸಾಹ ಧನ ನೀಡಬೇಕು. ಹಸಿಕಸವನ್ನು ಪ್ರತಿದಿನ ಹಾಗೂ ಒಣಕಸವನ್ನು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಸಂಗ್ರಹಿಸಬೇಕು.

ಒಣಕಸ ಸಂಗ್ರಹಕ್ಕೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಬೇಕು. ಕಸ ವಿಂಗಡನೆ ಬಗ್ಗೆ ಮನೆಯವರಿಗೆ ಹಾಗೂ ಪೌರ ಕಾರ್ಮಿಕರಿಗೆ ತರಬೇತಿ ನೀಡಬೇಕು. ಸ್ಯಾನಿಟರಿ ನ್ಯಾಪ್‌ಕಿನ್‌ನಂತಹ ತ್ಯಾಜ್ಯಗಳನ್ನು ವೈದ್ಯಕೀಯ ತ್ಯಾಜ್ಯ ಎಂದು ಪ್ರತ್ಯೇಕ ವಿಭಾಗ ಮಾಡಿ ವಿಲೇವಾರಿಗೆ ನೀಡಬೇಕು. ಹಾಸ್ಟೆಲ್‌ ಗಳಲ್ಲಿ ಸಂಗ್ರಹವಾಗುವ ನ್ಯಾಪ್‌ಕಿನ್‌ಗಳನ್ನು ಹಾಗೂ ಪಶು ವೈದ್ಯಕೀಯ ಆಸ್ಪತ್ರೆಯ ತ್ಯಾಜ್ಯಗಳನ್ನು ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿಯೇ ಕಟ್ಟುನಿಟ್ಟಿನಿಂದ ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಿದರು.

ಪ್ಲಾಸ್ಟಿಕ್‌ ಸಂಪೂರ್ಣ ನಿಷೇ ಧಿಸಿ: ಜಿಲ್ಲೆಯಲ್ಲಿ ಏಕಬಳಕೆಯ ಪ್ಲಾಸ್ಟಿಕ್‌ ಮುಂದಿನ ಒಂದು ತಿಂಗಳ ಒಳಗಾಗಿ ಸಂಪೂರ್ಣ ನಿಷೇಧಿಸಬೇಕು. ಯಾವುದೇ ಕಾರಣಕ್ಕೂ ಹೊಟೇಲ್‌, ಅಂಗಡಿಗಳು, ವಾಣಿಜ್ಯ ಸಂಸೆಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಇಲ್ಲದಂತೆ ಖಾತ್ರಿಪಡಿಸಬೇಕು. ಇದಕ್ಕಾಗಿ ನಿರಂತರ ದಾಳಿ, ದಂಡ ವಿಧಿಸುವಿಕೆ, ಅರಿವು ಮೂಡಿಸುವಿಕೆಯಂತಹ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚನೆ ನೀಡಿದರು.

Advertisement

ಗ್ರೀನ್‌ ಮ್ಯಾರೇಜ್‌: ಮೈಸೂರಿನಲ್ಲಿ ಕಲ್ಯಾಣ ಮಂಟಪಗಳಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡುವ ಗ್ರೀನ್‌ ಮ್ಯಾರೇಜ್‌ ಪದ್ಧತಿಯನ್ನು ಉತ್ತೇಜಿಸಲಾಗುತ್ತಿದೆ. ಇದೇ ರೀತಿ ಶಿವಮೊಗ್ಗದಲ್ಲಿಯೂ ಆರಂಭಿಸಬೇಕು. ಕಲ್ಯಾಣ ಮಂಟಪಗಳಲ್ಲಿ ಸಂಗ್ರಹವಾಗುವ ಹಸಿಕಸವನ್ನು ಕಡ್ಡಾಯವಾಗಿ ಕಲ್ಯಾಣ ಮಂಟಪದವರೇ ತಮ್ಮ ಪರಿಸರದಲ್ಲಿ ಸೂಕ್ತ ವಿಲೇವಾರಿಗೆ ವ್ಯವಸ್ಥೆ ಮಾಡಬೇಕು. ಈ ಕುರಿತು ಬೈಲಾದಲ್ಲಿ ನಿಯಮ ರೂಪಿಸಬೇಕು. ಕಟ್ಟಡ ನಿರ್ಮಾಣದ ತ್ಯಾಜ್ಯ ವಿಲೇವಾರಿ, ಇತ್ಯಾಜ್ಯ ವಿಲೇವಾರಿಗೆ ಕಾನೂನು ಪ್ರಕಾರ ಸೂಕ್ತ ವ್ಯವಸ್ಥೆ ಮಾಡಬೇಕು. ಶಿವಮೊಗ್ಗ ನಗರದ ಒಳಚರಂಡಿ ಹಾಗೂ ತ್ಯಾಜ್ಯಗಳನ್ನು ನದಿಗೆ ನೇರವಾಗಿ ಬಿಡುತ್ತಿರುವ ಬಗ್ಗೆ ದೂರುಗಳನ್ನು ಸ್ವೀಕರಿಸಲಾಗಿದೆ. ಹಸಿರು ಪೀಠ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ಕಾರಣಕ್ಕೂ ನದಿಗೆ ತ್ಯಾಜ್ಯ ನೇರವಾಗಿ ಬಿಡಬಾರದು ಎಂದು ಸೂಚನೆ ನೀಡಿದರು.

ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರತಿನಿತ್ಯ ಒಟ್ಟು 9ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 293.30 ಟನ್‌ ಕಸವನ್ನು ಸಂಗ್ರಹಿಸಲಾಗುತ್ತಿದ್ದು, ಇದರಲ್ಲಿ 159.25ಟನ್‌ ಕಸವನ್ನು ಘನತ್ಯಾಜ್ಯ ನಿರ್ವಹಣೆ ಮಾರ್ಗಸೂಚಿ ಪ್ರಕಾರ ವಿಲೇವಾರಿ ಮಾಡಲಾಗುತ್ತಿದೆ. ಒಟ್ಟು 185 ವಾರ್ಡ್‌ಗಳಲ್ಲಿ ಕಸವನ್ನು ಮನೆಗಳಿಂದ ಸಂಗ್ರಹಿಸಲಾಗುತ್ತಿದ್ದು, 148ವಾರ್ಡ್‌ಗಳಲ್ಲಿ ಕಸವನ್ನು ಮೂಲದಲ್ಲಿಯೇ ವಿಂಗಡನೆ ಮಾಡಲಾಗುತ್ತಿದೆ. ವಾಹನ ಖರೀದಿ ಇತ್ಯಾದಿ ಮೂಲಸೌಕರ್ಯ ಕಲ್ಪಿಸಲು 53.21 ಕೋಟಿ ಮೊತ್ತಕ್ಕೆ ಡಿಪಿಆರ್‌ ಸಿದ್ಧಪಡಿಸಲಾಗಿದೆ.

ಶಿವಮೊಗ್ಗದಲ್ಲಿ 35 ವಾರ್ಡ್‌ಗಳ ಪೈಕಿ 30 ವಾರ್ಡ್ಗಳಲ್ಲಿ ಕಸ ನೇರವಾಗಿ ಸಂಗ್ರಹಿಸಲಾಗುತ್ತಿದ್ದು, 6 ವಾರ್ಡ್‌ಗಳಲ್ಲಿ ಮೂಲದಲ್ಲಿಯೇ ವಿಂಗಡನೆ ಮಾಡಲಾಗುತ್ತಿದೆ. ಇನ್ನುಳಿದ ಎಲ್ಲಾ ವಾರ್ಡ್‌ಗಳಲ್ಲಿ ಒಂದುವರೆ ತಿಂಗಳ ಒಳಗಾಗಿ ಮೂಲದಲ್ಲಿಯೇ ಕಸ ವಿಂಗಡನೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಘನತ್ಯಾಜ್ಯ ನಿರ್ವಹಣೆಗೆ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ವಿವರ ನೀಡಿದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ವೈಶಾಲಿ, ಪೊಲೀಸ್‌
ವರಿಷ್ಠಾಧಿಕಾರಿ ಶಾಂತರಾಜು, ಜಿಲ್ಲಾ ಸತ್ರ ನ್ಯಾಯಾಧೀಶ ಮಹಾಸ್ವಾಮಿ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಅಪರ ಜಿಲ್ಲಾಧಿಕಾರಿ ಅನುರಾಧಾ, ಯೋಜನಾ ನಿರ್ದೇಶಕ ಡಾ| ನಾಗೇಂದ್ರ ಹೊನ್ನಳ್ಳಿ ಮತ್ತಿತರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next