ಶಿವಮೊಗ್ಗ: ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ನಗರದಲ್ಲಿ ಮತ್ತಷ್ಟು ಭದ್ರತೆ ಕೈಗೊಳ್ಳಲು ಮುಂದಾಗಿರುವ ಪೊಲೀಸ್ ಇಲಾಖೆ ನೈಟ್ ಬೀಟ್ ಚೀತಾ ಗ್ರೂಪ್ ಆರಂಭಿಸಿದೆ. ಕಿಡಿಗೇಡಿಗಳ ಕೃತ್ಯ ತಡೆಯುವ ಸಲುವಾಗಿ ನೈಟ್ ಬೀಟ್ ಚೀತಾ ವ್ಯವಸ್ಥೆ ಜಾರಿಗೆ ಬಂದಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಜಾರಿಗೆ ಬಂದಿದ್ದು, ಇತರೆ ಜಿಲ್ಲೆಗಳ ಪೊಲೀಸರು ಈ ಮಾದರಿ ಅನುಸರಿಸಲು ಮುಂದಾಗಿದ್ದಾರೆ.
ಏನಿದು ನೈಟ್ ಬೀಟ್ ಚೀತಾ ಗ್ರೂಪ್?: ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಗಳಲ್ಲಿ 23 ಚೀತಾ ಬೈಕ್‌ಗಳಿವೆ. ಪ್ರತಿ ಬೈಕ್‌ಗೆ ಇಬ್ಬರಂತೆ, 46 ಪೊಲೀಸರು ರಾತ್ರಿಯಿಡೀ ಶಿವಮೊಗ್ಗ ನಗರದಲ್ಲಿ ಗಸ್ತು ತಿರುಗಲಿದ್ದಾರೆ. ಒಂದೊಂದು ಚೀತಾಗೆ ನಿರ್ದಿಷ್ಟ ಪ್ರದೇಶ ನೀಡಲಾಗುತ್ತಿದ್ದು, ಆಯಾ ಪ್ರದೇಶದಲ್ಲಿ ನಿರಂತರ ಗಸ್ತು ನಡೆಯಲಿದೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆದರೂ ಕೂಡಲೇ ಅದನ್ನು ತಿಳಿಗೊಳಿಸುವ ಪ್ರಯತ್ನ ಮಾಡಬೇಕಾಗುತ್ತದೆ.
ರಾತ್ರಿ ಗಸ್ತು ಏಕೆ?: ಈ ಹಿಂದೆ, ರಾತ್ರಿ ವೇಳೆಯಲ್ಲೆ ಗಣೇಶೋತ್ಸವದ ಬ್ಯಾನರ್, ಬಂಟಿಂಗ್ಸ್ ಕೀಳುವುದು ಸೇರಿದಂತೆ ಹಲವು ಅಹಿತಕರ ಘಟನೆಗಳು ನಡೆದಿವೆ. ಹಾಗಾಗಿ ಚೀತಾ ವಾಹನಗಳು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಗಸ್ತು ತಿರುಗಲಿವೆ. ಇದಕ್ಕಾಗಿ ಪ್ರತ್ಯೇಕ ವಾಟ್ಸ್ ಆ್ಯಪ್ ಗ್ರೂಪ್ ಸಿದ್ಧಪಡಿಸಲಾಗಿದೆ.
ಏನಿದು ವಾಟ್ಸ್ ಆ್ಯಪ್ ಗ್ರೂಪ್?: ನೈಟ್ಬೀಟ್ ಚೀತಾ ವ್ಯವಸ್ಥೆಯನ್ನು ಸಮಪರ್ಕವಾಗಿ ನಿರ್ವಹಿಸಲು ಪ್ರತ್ಯೇಕ ವಾಟ್ಸ್ ಆ್ಯಪ್ ಗ್ರೂಪ್ ಸಿದ್ಧಪಡಿಸಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ, ಹೆಚ್ಚುವರಿ ರಕ್ಷಣಾಧಿಕಾರಿ, ಡಿವೈಎಸ್‌ಪಿ, ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್‌ಗಳು, 23 ಚೀತಾ ವಾಹನಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಈ ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿದ್ದಾರೆ. ಗಸ್ತು ತಿರುಗುವಾಗ ಯಾವುದೇ ಅಹಿತಕರ ಘಟನೆ ನಡೆದಿರುವುದು ತಿಳಿದರೆ ಕೂಡಲೆ ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಅಪ್‌ಡೇಟ್ ಮಾಡಬೇಕು. ಇದು ಉಳಿದ ಸಿಬ್ಬಂದಿಯನ್ನು ಅಲರ್ಟ್ ಮಾಡಲಿದೆ.
ದಿನಕ್ಕೊಂದು ಕಡೆ ಸಿಬ್ಬಂದಿ ರೋಲ್ಕಾಲ್: ನೈಟ್ ಬೀಟ್ ಚೀತಾ ಪೊಲೀಸರು ಒಂದೊಂದು ದಿನ ಒಂದೊಂದು ಕಡೆಗೆ ರೋಲ್ಕಾಲ್ ಮಾಡುತ್ತಾರೆ. ಪ್ರತಿ ರಾತ್ರಿ 10 ಗಂಟೆಗೆ 23 ಚೀತಾಗಳು ಒಂದು ಕಡೆ ರೋಲ್ಕಾಲ್ ಆರಂಭಿಸಲಿದ್ದಾರೆ. ಬೆಳಗ್ಗೆ 6 ಗಂಟೆ ಹೊತ್ತಿಗೆ ಅದೇ ಜಾಗಕ್ಕೆ ಬಂದು ಸೇರಬೇಕು. ರಾತ್ರಿ ಗಸ್ತು ತಿರುಗುವಾಗ ನಡೆದ ಘಟನೆಗಳ ವಿವರ ನೀಡಬೇಕಾಗುತ್ತದೆ. ಇನ್ನು, ಗಸ್ತು ಪ್ರಕ್ರಿಯೆ ಪರಿಣಾಮಕಾರಿಯಾಗಿಸಲು ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜು, ಹೆಚ್ಚುವರಿ ರಕ್ಷಣಾಧಿಕಾರಿ ಶೇಖರ್ ಅವರು ವಿವಿಧೆಡೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಗಣೇಶ ಚತುರ್ಥಿ ಆರಂಭಕ್ಕೂ ಐದು ದಿನ ಮೊದಲಿನಿಂದ ನೈಟ್ ಬೀಟ್ ಚೀತಾ ವ್ಯವಸ್ಥೆ ಆರಂಭವಾಗಿದೆ. ಹಿಂದೂ ಮಹಾಸಭಾ ಗಣಪತಿ ವಿಸರ್ಜನೆವರೆಗೂ ಈ ವ್ಯವಸ್ಥೆ ಜಾರಿಯಲ್ಲಿರಲಿದೆ.