Advertisement

ನಾಟಕದಿಂದ ಬಹುಸಂಸ್ಕೃತಿಗೆ ಬಲ

05:29 PM Feb 17, 2020 | Naveen |

ಶಿವಮೊಗ್ಗ: ಬಹುಸಂಸ್ಕೃತಿ, ಭಾಷೆ, ವೈವಿಧ್ಯತೆ ಈ ನೆಲದ ಜೀವಾಳವಾಗಿದೆ. ಅದನ್ನು ಇನ್ನಷ್ಟು ಬಲಗೊಳಿಸುವ ಕಾರ್ಯವನ್ನು ನಾಟಕದಂತಹ ಮಾಧ್ಯಮಗಳು ಮಾಡುತ್ತಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹೇಳಿದರು.

Advertisement

ಶನಿವಾರ ಶಿವಮೊಗ್ಗ ರಂಗಾಯಣ ಆಯೋಜಿಸಿರುವ ಎಂಟು ದಿನಗಳ ಬಹುಮುಖೀ ರಾಷ್ಟ್ರೀಯ  ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ದೇಶದಲ್ಲಿ ಸಾವಿರಾರು ಭಾಷೆ, ಆಹಾರ ಪದ್ಧತಿ, ಸಾಂಸ್ಕೃತಿಕ ವೈವಿಧ್ಯತೆ ಇದ್ದರೂ, ಏಕತೆ ಭಾವವಿದೆ. ಇದೇ ನಮ್ಮ ಶಕ್ತಿಯಾಗಿದೆ. ದೇಶವನ್ನು ಭಾಷೆ, ಸಂಸ್ಕೃತಿ, ಪ್ರಾದೇಶಿಕತೆ ಹೆಸರಿನಲ್ಲಿ ಒಡೆಯಲು ಹಲವಾರು ಷಡ್ಯಂತ್ರಗಳು ನಿರಂತರವಾಗಿ ನಡೆದರೂ, ಈ ನೆಲದ ಬಹುತ್ವ ಅದಕ್ಕೆ ಅವಕಾಶ ಕೊಟ್ಟಿಲ್ಲ. ಬಹುತ್ವ ಸನ್ನಿವೇಶಕ್ಕೆ ತಕ್ಕಂತೆ ಸೃಷ್ಟಿಯಾಗುವಂತದ್ದಲ್ಲ. ಅದು ನಮ್ಮ ಉಸಿರಾಗಿದೆ ಎಂದು ಹೇಳಿದರು.

ಪ್ರಶ್ನಿಸುವ ಅವಕಾಶ ನಮ್ಮ ದೇಶದಲ್ಲಿದೆ. ಪ್ರಶ್ನಿಸುವುದು ಅಪರಾಧ ಎಂದು ನಮ್ಮ ಶಾಸ್ತ್ರ,  ದೇಶ ಎಂದೂ ಹೇಳಿಲ್ಲ. ಎಲ್ಲವನ್ನೂ ಪ್ರಶ್ನಿಸಿ, ಒಳ್ಳೆಯದ್ದನ್ನು ಸ್ವೀಕರಿಸುವ ಅವಕಾಶವನ್ನು ನಮ್ಮ ಸಂಸ್ಕೃತಿ ನಮಗೆ ಕಲಿಸಿದೆ. ಕೆಲವು ದೇಶಗಳಲ್ಲಿ ಪ್ರಶ್ನಿಸಲು ಸಾಧ್ಯವಾಗದಂತಹ ಉಸಿರು ಕಟ್ಟಿಸುವ ವಾತಾವರಣ ಇದೆ. ಬಹುಮುಖೀ ನಾಟಕೋತ್ಸವ ಇಂತಹ ಪ್ರಶ್ನಿಸುವ ಮನೋಭಾವವನ್ನು ಬೆಳೆಸಲಿ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಶಾಸಕರಾದ ಅರಗ ಜ್ಞಾನೇಂದ್ರ, ಆಯನೂರು ಮಂಜುನಾಥ ಅವರು ಮಾತನಾಡಿದರು. ರಂಗಾಯಣದ ನಿರ್ದೇಶಕ ಸಂದೇಶ ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗ ಸಮಾಜ ಸದಸ್ಯ ಹಾಲಸ್ವಾಮಿ ಅವರು ಆಶಯ ನುಡಿ ನುಡಿದರು. ಆರ್ಯ ವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್‌. ಅರುಣ್‌, ಅಪರ ಜಿಲ್ಲಾಧಿಕಾರಿ ಅನುರಾಧಾ ಇದ್ದರು. ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್‌ ವಂದಿಸಿದರು. ಇದಕ್ಕೂ ಮೊದಲು ಸಚಿವರು ನಾಟಕಗಳ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದರು. ಮಣಿಪುರದ ಎನ್‌.ಟಿ. ಥಿಯೇಟರ್‌ ತಂಡದಿಂದ “ಹಂಟರ್ಸ್‌ ಸಾಂಗ್‌’ ಮಣಿಪುರಿ ನಾಟಕ ಪ್ರದರ್ಶನ ಮೆಚ್ಚುಗೆ ಪಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next