ಶಿವಮೊಗ್ಗ: ಈ ಬಾರಿ ಮೈಸೂರು ದಸರಾ ಉತ್ಸವದಲ್ಲಿ ಶಿವಮೊಗ್ಗ ಜಿಲ್ಲೆಯ ಟ್ಯಾಬ್ಲೋ ಅಂತಿಮಗೊಂಡಿದ್ದು, ನಾಡ ದೇವಿ ಮೆರವಣಿಗೆಯಂದು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಫಿಟ್ ಇಂಡಿಯಾ’ ರಾರಾಜಿಸಲಿದೆ. ಜಂಬೂ ಸವಾರಿ ಟ್ಯಾಬ್ಲೋಕ್ಕಾಗಿ ಜಿಲ್ಲಾಡಳಿತದಿಂದ ಒಟ್ಟು ಮೂರು ವಿಷಯಗಳನ್ನು ಅಂತಿಮಗೊಳಿಸಲಾಗಿತ್ತು. ಉಜ್ವಲ ಯೋಜನೆ, ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯ ಕೇದಾರೇಶ್ವರ ದೇವಸ್ಥಾನ ಹಾಗೂ ಫಿಟ್ ಇಂಡಿಯಾ ಯೋಜನೆ ಬಗ್ಗೆ ವರದಿ ಸಲ್ಲಿಸಲಾಗಿತ್ತು. ಉಜ್ವಲ ಯೋಜನೆ ವಿಷಯವನ್ನು ಆರಂಭಿಕ ಹಂತದಲ್ಲೇ ರಿಜೆಕ್ಟ್ ಮಾಡಲಾಗಿತ್ತು. ಅಂತಿಮವಾಗಿ ಆ.29ರಂದು
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶ್ವ ಕ್ರೀಡಾ ದಿನದ ಅಂಗವಾಗಿ ಚಾಲನೆ ನೀಡಿದ್ದ ಫಿಟ್ ಇಂಡಿಯಾ’ ಆಯ್ಕೆಯಾಗಿದೆ.
Advertisement
ಹೀಗರಲಿದೆ ಟ್ಯಾಬ್ಲೋ: ಫಿಟ್ ಇಂಡಿಯಾ ಟ್ಯಾಬ್ಲೋದಲ್ಲಿ ಕ್ರೀಡಾ ವಲಯದಲ್ಲಿ ಸಾಧನೆ ಮಾಡಿದ ಕೆಲ ಆಯ್ದ ಗಣ್ಯರ ಭಾವಚಿತ್ರ ಬಳಸಿಕೊಳ್ಳಲಾಗುತ್ತಿದೆ. ಈ ಯೋಜನೆ ಬ್ರ್ಯಾಂಡ್ಅಂಬಾಸಿಡರ್ ಆಗಿರುವ ಶಿಲ್ಪಾ ಅಗರ್‌ವಾಲ್, ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಅಂತಾರಾಷ್ಟ್ರೀಯ ಅಂಗವಿಕಲ ಸಸ್ಯಾಹಾರಿ ದೇಹದಾರ್ಡ್ಯ ಪಟು ಅನುಲ್ ಕುರ್ಚಿಕರ್ ಭಾವಚಿತ್ರಗಳು ಮುಖ್ಯವಾಗಿ ರಾರಾಜಿಸಲಿವೆ.
ಸದೃಢವಾಗಿದ್ದರೆ ಏನಾದರೂ ಸಾಧನೆ ಮಾಡಬಹುದು. ಶರೀರವು ಸದೃಢವಾಗಬೇಕಾದರೆ ಯೋಗ, ವ್ಯಾಯಾಮ, ಕ್ರೀಡೆ, ಪೌಷ್ಟಿಕ ಆಹಾರ ಮುಖ್ಯ ಎಂಬುದು ಯೋಜನೆ ಉದ್ದೇಶ. ಈ ಬಗ್ಗೆ ಜನರಲ್ಲಿ ಮತ್ತಷ್ಟು ಅರಿವು ಮೂಡಿಸಲು ಈ ಟ್ಯಾಬ್ಲೋ ಸಿದ್ಧವಾಗುತ್ತಿದೆ.