Advertisement

ಕಸ ಸಂಸ್ಕರಣೆಗೆ ಆಧುನಿಕ ವಿಧಾನ

07:44 PM Dec 28, 2019 | Naveen |

ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯದಲ್ಲಿ ಹಸಿಕಸ ಮತ್ತು ಒಣ ಕಸವನ್ನಾಗಿ ಬೇರ್ಪಡಿಸಿ ಮೂಲದಲ್ಲಿಯೇ ಸಂಸ್ಕರಿಸಿ, ಪ್ರತಿನಿತ್ಯ ಪಾಲಿಕೆ ವತಿಯಿಂದ ಸಂಗ್ರಹಿಸಲಾಗುತ್ತಿರುವ ಕಸವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹೊಸ, ಆಧುನಿಕ ಹಾಗೂ ಸರಳ ವಿಧಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಅವರು ಹೇಳಿದರು.

Advertisement

ಶುಕ್ರವಾರ ತಮ್ಮ ಮನೆಯ ಆವರಣದಲ್ಲಿ ಪೈಪ್‌ ಕಾಂಪೋಸ್ಟ್‌ ಕಿರುಘಟಕ ಸ್ಥಾಪಿಸಿಕೊಳ್ಳುವ ಮೂಲಕ ತ್ಯಾಜ್ಯ ನಿಯಂತ್ರಣದ ಭಾಗವಾಗಿ ಮಹಾನಗರ ಪಾಲಿಕೆ ವತಿಯಿಂದ ಆರಂಭಿಸಿರುವ ತ್ಯಾಜ್ಯ ನಿಯಂತ್ರಣ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮನೆಯಲ್ಲಿ ಉತ್ಪತ್ತಿಯಾಗುವ ಹಸಿಕಸವನ್ನು ಮನೆಯಲ್ಲಿಯೇ ಸಂಗ್ರಹಿಸಿ, ಅದನ್ನು ವ್ಯವಸ್ಥಿತವಾಗಿ ಪೈಪ್‌ ಕಾಂಪೋಸ್ಟ್‌ ಕೊಳವೆಗೆ ನಿಯಮಾನುಸಾರ ಹಾಕುವುದರಿಂದ ಕಸದ ಪ್ರಮಾಣ ಕಡಿಮೆಯಾಗಲಿದೆ. ಇದರ ಅಳವಡಿಕೆಯಿಂದ ಪ್ರತಿ ಮನೆಯಿಂದ ಪಾಲಿಕೆಯ ಕಸದ ಗಾಡಿಗೆ ಬರುವ ತ್ಯಾಜ್ಯದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದರು.

ಈ ಕಸ ಕೆಲವೇ ತಿಂಗಳುಗಳಲ್ಲಿ ಸಾವಯವ, ಸಾರಯುಕ್ತ ಸುವಾಸಿತ ಗೊಬ್ಬರವಾಗಿ ದೊರೆಯಲಿದ್ದು, ಅದನ್ನು ತಮ್ಮ ಕೈತೋಟಗಳಿಗೆ ಬಳಸಬಹುದಾಗಿದೆ ಎಂದ ಅವರು, ಈ ಕಾರ್ಯಕ್ರಮದ ಮೊದಲ ಹಂತವಾಗಿ ನಗರದ ಸರ್ಕಾರಿ ವಸತಿಗೃಹಗಳಲ್ಲಿ ಪೈಪ್‌ ಕಾಂಪೋಸ್ಟ್‌ ಪೈಪ್‌ ಅಳವಡಿಸಲು ಪಾಲಿಕೆ ಕಾರ್ಯಕ್ರಮವನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಹಾಸ್ಟೆಲ್‌, ಸರ್ಕಾರಿ ಶಾಲೆಗಳು, ವಿವಿಗಳು, ಖಾಸಗಿ ಕಚೇರಿಗಳು, ಸರ್ಕಾರಿ ಸ್ವಾಮ್ಯದ ಕಚೇರಿಗಳ ಆವರಣಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಪ್ರತಿದಿನ ಉತ್ಪತ್ತಿಯಾಗುವ ಟನ್‌ಗಟ್ಟಲೆ ಕಸದ ಉತ್ಪಾದನೆಯನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದರು.

ಸಾರ್ವಜನಿಕರು ತಮ್ಮ ಕುಟುಂಬದ ಸದಸ್ಯರನ್ನು ಗಮನದಲ್ಲಿಟ್ಟುಕೊಂಡು ಕಸ ಉತ್ಪಾದನೆಯ ಸಾಮರ್ಥಯಕ್ಕನುಗುಣವಾಗಿ ಘಟಕವನ್ನು ಅಳವಡಿಸಿಕೊಳ್ಳಬಹುದಾಗಿದೆ. ಈ ಕಾರ್ಯಕ್ರಮದ ಅನುಷ್ಠಾನದಲ್ಲಿ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು ಸಹಕಾರ ನೀಡಿರುವುದು ಅಭಿನಂದನೀಯ ಎಂದರು.

Advertisement

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ 2018ರ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ ವಿಜೇತ ಟಿ.ಎಸ್‌. ಮಹದೇವಸ್ವಾಮಿ ಅವರು ಮಾತನಾಡಿ, ಸಹಜವಾಗಿ ಮಹಿಳೆಯರು ಮನೆಯ ಮೇಲ್ವಿಚಾರಣೆ ನಡೆಸುವುದರಿಂದ ಅವರ ಅನುಕೂಲಕ್ಕೆ ತಕ್ಕಂತೆ ಅಳವಡಿಸುವ ಕೊಳವೆ ಸುಮಾರು 5ಅಡಿ ಇರುವಂತೆ ವಿನ್ಯಾಸಗೊಳಿಸಲಾಗಿದೆ. ಮನೆಯಲ್ಲಿ ಉತ್ಪತ್ತಿಯಾಗುವ ಹಸಿಕಸವನ್ನು ಹಾಗೂ ವಾರಕ್ಕೊಮ್ಮೆ ಹಿಡಿ ಮಣ್ಣು ಮತ್ತು ಒಂದು ಬಿಂದಿಗೆ ನೀರನ್ನು ಹಾಕಬೇಕು. ಇದರ ನಿರ್ವಹಣೆಗೆ ಹೆಚ್ಚಿನ ಹಣ ಮತ್ತು ಸಮಯದ ಅಗತ್ಯವಿಲ್ಲ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ಎಸ್‌. ವಟಾರೆ, ಯೋಜನಾ ನಿರ್ದೇಶಕ ನಾಗೇಂದ್ರ ಎಫ್‌.ಹೊನ್ನಳ್ಳಿ, ಟಿ.ಎಸ್‌.ಮಹದೇವಸ್ವಾಮಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next