ಶಿವಮೊಗ್ಗ: ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಶಂಕಿತರ ವಾರ್ಡ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಸ್ಪತ್ರೆ ಸಿಬ್ಬಂದಿಗೆ ಪೌಷ್ಟಿಕ ಆಹಾರ ಸರಬರಾಜು ಮಾಡುವಂತೆ ಒತ್ತಾಯಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಸಂಘದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಕೋವಿಡ್ ಶಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆ ವೈದ್ಯರು, ಶುಶ್ರೂಷಕರು ಹಾಗೂ ಸಹಾಯಕ ವೈದ್ಯಕೀಯ ಸಿಬ್ಬಂದಿಗೆ ಪೌಷ್ಟಿಕಾಂಶದಿಂದ ಕೂಡಿದ ಉಪಹಾರ ಮತ್ತು ಮಧ್ಯಾಹ್ನ ಹಾಗೂ ರಾತ್ರಿಯ ಆಹಾರವನ್ನು ಜಿಲ್ಲಾಡಳಿತದಿಂದ ಪೂರೈಸುವಂತೆ ಸೂಚನೆ ನೀಡಬೇ ಕೆಂದು ಒತ್ತಾಯಿಸಿದರು. ಕೊರೊನಾ ರೋಗಿಗಳಿಗೆ ಮೀಸಲಿಟ್ಟಿರುವ ಆಸ್ಪತ್ರೆಯ ವಾರ್ಡ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿ ಪಿಪಿಇ ಕಿಟ್‌ಗಳನ್ನು ಧರಿಸಿ ಸತತ ಆರು ಗಂಟೆಗಳಿಗೂ ಹೆಚ್ಚು ಕಾಲ ನೀರು ಮತ್ತು ಆಹಾರ ಸೇವಿಸಿದೆ. ಕರ್ತವ್ಯ ನಿರ್ವಹಿಸಬೇಕಾಗುತ್ತದೆ ಎಂದು ತಿಳಿಸಿದರು.
ಇದು ವ್ಯಕ್ತಿ-ವ್ಯಕ್ತಿಗಳ ನಡುವೆ ಹರಡುವ ಸೋಂಕು ಆಗಿರುವುದರಿಂದ ಕರ್ತವ್ಯ ನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿ ಪೌಷ್ಟಿಕ ಆಹಾರ ಸೇವಿಸುವುದು ಅವಶ್ಯಕವಾಗಿರುತ್ತದೆ. ಹೀಗಾಗಿ, ಎಲ್ಲ ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಪೌಷ್ಟಿಕ ಆಹಾರ ಒದಗಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು. ಪೌಷ್ಟಿಕ ಆಹಾರದೊಂದಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕೆಂದರು.ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಮನವಿಗೆ ಸ್ಪಂದಿಸುವ ಭರವಸೆ ನೀಡಿದರು.
ಸಂಘದ ಜಿಲ್ಲಾ ಅಧ್ಯಕ್ಷ ಮ.ಸ. ನಂಜುಂಡಸ್ವಾಮಿ, ಜಿಲ್ಲಾ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ| ಗುಡದಪ್ಪ ಕಸಬಿ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ
ಐ.ಪಿ. ಶಾಂತರಾಜ್, ಕಾರ್ಯಾಧ್ಯಕ್ಷ ವಿ. ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ನರಸಿಂಹ, ಸಿ.ಎಂ. ಹೆಗಡೆ, ವಂದನ, ಬಸವರಾಜ್ ಮತ್ತಿತರರು ಇದ್ದರು.