Advertisement

ಮೆಗ್ಗಾನ್‌ ಆಸ್ಪತ್ರೆ “ಸರ್ಜರಿ’ಗೆ ಅಗತ್ಯ ಕ್ರಮ

12:31 PM Apr 19, 2020 | Naveen |

ಶಿವಮೊಗ್ಗ: ಮೆಗ್ಗಾನ್‌ ಆಸ್ಪತ್ರೆ ನಿರ್ವಹಣೆಯಲ್ಲಿ ಕೆಲವು ಲೋಪದೋಷಗಳು ಕಂಡು ಬಂದಿದ್ದು, ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

Advertisement

ಶನಿವಾರ ಮೆಗ್ಗಾನ್‌ ಬೋಧನಾ ಸಂಸ್ಥೆಯಲ್ಲಿ ಹಿರಿಯ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಕಳೆದೆರಡು ದಿನದಲ್ಲಿ ಮೂವರು ರೋಗಿಗಳು ಮೃತಪಟ್ಟಿದ್ದಾರೆಂಬ ಮಾಹಿತಿ ಇದೆ. ರೋಗಿಗಳು ಮೃತಪಡಲು ಕಾರಣವೇನು ಎಂದು ಆಸ್ಪತ್ರೆ ವೈದ್ಯಾ ಧಿಕಾರಿಗಳಿಗೆ ಸಚಿವ ಈಶ್ವರಪ್ಪ ಪ್ರಶ್ನಿಸಿದರು.

ಆಗ ವೈದ್ಯಾಧಿಕಾರಿಗಳು ಮಾಹಿತಿ ನೀಡಲು ತಡಬಡಾಯಿಸಿದರು. ಇದರಿಂದ ಬೇಸರಗೊಂಡ ಸಚಿವರು, ನಿಮಗೆ ಮೃತಪಟ್ಟವರ ಹೆಸರು ಗೊತ್ತಿಲ್ಲವೆಂದರೆ ಹೇಗೆ? ಇಂತಹ ಬೇಜವಾಬ್ದಾರಿತನ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು. ಆಸ್ಪತ್ರೆ ಕುಂದುಕೊರತೆ ನೀಗಿಸಲು ಡಿಸಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲು, ರೇಡಿಯಾಲಜಿಸ್ಟ್‌ ಸೇರಿ 133 ಹುದ್ದೆ ಖಾಲಿ ಇದ್ದು, ರೋಸ್ಟರ್‌ ಪದ್ಧತಿ ಮೂಲಕ ಹುದ್ದೆ ಭರ್ತಿಗೆ ಹಾಗೂ ಈ ಕುರಿತು ಶೀಘ್ರ ಟೆಂಡರ್‌ ಕರೆಯಲು ಸಚಿವರು ಸೂಚಿಸಿದರು.

ಮಂಗನ ಕಾಯಿಲೆ ಹತೋಟಿಗೆ ತರಲು ಆರೋಗ್ಯ ಇಲಾಖೆಯಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದರು. ಶಾಸಕ ಆರಗ ಜ್ಞಾನೇಂದ್ರ, ಜೂನ್‌ ತಿಂಗಳಿಂದ ಕಾಯಿಲೆಗೆ ಲಸಿಕೆ ನೀಡುವುದು ಸರಿಯಾದ ಕ್ರಮವಲ್ಲ. ಮೇ ತಿಂಗಳಲ್ಲಿ ಮಳೆ ಆಗದಿದ್ದರೆ ತೀರ್ಥಹಳ್ಳಿ ಭಾಗದಲ್ಲಿ ಜನರ ಮಾರಣ ಹೋಮ ನಡೆಯುತ್ತದೆ. ಮಂಗ ಸತ್ತರೆ ಆ ಜಾಗದಲ್ಲಿ ಮೆಥಲಾನ್‌ ಸಿಂಪಡಿಸಬೇಕು. ಆದರೆ ಇದಕ್ಕೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತದೆ. ಇದಕ್ಕೆ ಪರಿಹಾರ ಹುಡುಕಬೇಕಿದೆ ಎಂದರು.

ಜಿಲ್ಲಾ ಆಸ್ಪತ್ರೆ ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ ಆದ ಬಗ್ಗೆ ತನಿಖೆ ನಡೆಯಬೇಕೆಂದು ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು. ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ. ಜಿಲ್ಲೆಯ ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ. ಜನರು ಜಿಲ್ಲಾಡಳಿತ ನೀಡಿರುವ ಯಾವುದೇ ಸೂಚನೆಗಳನ್ನು ಮೀರಬಾರದು. ಸೂಚನೆಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ತಿಳಿಸಲಾಗಿದೆ ಎಂದು ಹೇಳಿದರು.

Advertisement

ರಾಜ್ಯಾದ್ಯಂತ ನರೇಗಾ ಅಡಿ ಕಾಮಗಾರಿಗಳನ್ನು ದೊಡ್ಡ ಪ್ರಮಾಣದಲ್ಲಿ ಆರಂಭಿಸಲಾಗುತ್ತಿದೆ. ಈಗಾಗಲೇ ಕೂಲಿ ಹಣವನ್ನು 245 ರೂ.ನಿಂದ 275ರೂ. ಗೆ ಹೆಚ್ಚಿಸಲಾಗಿದ್ದು, ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌, ಕೋವಿಡ್‌ ಗಿಂತ ಮೊದಲು ಮೆಗ್ಗಾನ್‌ ಆಸ್ಪತ್ರೆಯಿಂದ ಎಷ್ಟು ಪ್ರಕರಣಗಳನ್ನು ಬೇರೆ ಖಾಸಗಿ ಅಥವಾ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ ಎಂಬ ಮಾಹಿತಿಯನ್ನು ಪರಿಶೀಲಿಸಿದರೆ, ಮೆಗ್ಗಾನ್‌ ಕಾರ್ಯನಿರ್ವಹಣೆಯನ್ನು ಅರ್ಥ ಮಾಡಿಕೊಳ್ಳಬಹುದು ಎಂದರು. ಆಗ ಸಚಿವರು ಮಾತನಾಡಿ, ಇನ್ನು ಮುಂದೆ ಬೇರೆ ಆಸ್ಪತ್ರೆಗಳಿಗೆ ಕಳುಹಿಸಲಾಗುವ ಪ್ರಕರಣಗಳ ಮಾಹಿತಿಯನ್ನು ಸರಿಯಾಗಿ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಧಿಕಾರಿ ಕೆ.ಬಿ.ಶಿವಕುಮಾರ್‌ ಮಾತನಾಡಿ, ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಆಶಾ ಕಾರ್ಯಕರ್ತೆಯರ ತಂಡ 60ಸಾವಿರ ಮನೆಗಳಲ್ಲಿ ಆರೋಗ್ಯ ಪರಿಶೀಲನೆ ನಡೆಸಿದೆ. ಈ ಪ್ರಕ್ರಿಯೆಯನ್ನು ಆಯ್ದ ಗ್ರಾಮೀಣ ಪ್ರದೇಶಗಳಲ್ಲಿ ಸಹ ಕೈಗೊಳ್ಳಲಾಗುವುದು. ಜಿಲ್ಲೆಯ ಒಳಗೆ ಪ್ರವೇಶಿಸುವ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಹೋಂ ಕ್ವಾರೆಂಟೈನ್‌ ಕಟ್ಟುನಿಟ್ಟಾಗಿ ಪಾಲಿಸುವಂತೆ ತೀವ್ರ ನಿಗಾ ಇರಿಸಲಾಗುತ್ತಿದೆ ಎಂದರು.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಅರಗ ಜ್ಞಾನೇಂದ್ರ, ಅಶೋಕ ನಾಯ್ಕ, ರುದ್ರೇಗೌಡ, ಪ್ರಸನ್ನ ಕುಮಾರ್‌, ಎಸ್ಪಿ ಕೆ.ಎಂ. ಶಾಂತರಾಜು, ಜಿಲ್ಲಾ ಪಂಚಾಯತ್‌ ಸಿಇಒ ಎಂ.ಎಲ್‌. ವೈಶಾಲಿ, ಶಿಮ್ಸ್‌ ನಿರ್ದೇಶಕ ಡಾ| ಗುರುಪಾದಪ್ಪ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next