ಶಿವಮೊಗ್ಗ: ಕೋಟೆ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಮಂಗಳವಾರ ವೈಭವದಿಂದ ಆರಂಭವಾಯಿತು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರ ದಂಡೇ ಗಾಂಧಿ ಬಜಾರಿನಲ್ಲಿ ನೆರೆದಿತ್ತು. ತವರು ಮನೆ ಗಾಂಧಿ ಬಜಾರಿನಿಂದ ಕರ್ನಾಟಕ ಸಂಘದವರಿಗೆ ಸರದಿ ಸಾಲು ಕಂಡು ಬಂದಿತು. ಬಿಸಿಲನ್ನು ಲೆಕ್ಕಿಸದೆ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.
ತವರು ಮನೆ ಗಾಂಧಿ ಬಜಾರ್‌ನಲ್ಲಿ ದೇವಿ ಪ್ರತಿಷ್ಠಾಪನಾ ಕಾರ್ಯ ವೈವಿಧ್ಯಮಯವಾಗಿ ನೆರವೇರಿತು. ಬಿ.ಬಿ. ರಸ್ತೆಯಲ್ಲಿನ ಬ್ರಾಹ್ಮಣರ ಸಮುದಾಯದ ನಾಡಿಗರ ಕುಟುಂಬದವರು ಬೆಳಗ್ಗೆ 4ಕ್ಕೆ ಮೊದಲ ಪೂಜೆ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಮುತ್ತೈದೆಯರು ಬೆಳಗಿನ 4ರಿಂದಲೇ ಸರತಿ ಸಾಲಿನಲ್ಲಿ ನಿಂತು ಮಡಿಲಕ್ಕಿ ನೀಡಿ ದೇವಿಯ ದರ್ಶನ ಪಡೆದರು.
ಅರ್ಚಕರು ಮಕ್ಕಳನ್ನು ದೇವಿಯ ಮೂರ್ತಿಗೆ ತಾಗಿಸಿ, ಪೋಷಕರಿಗೆ ನೀಡುತ್ತಿದ್ದರು. ಮಕ್ಕಳನ್ನು ದೇವಿಗೆ ಮುಟ್ಟಿಸಿ ಆಶೀರ್ವಾದ ಪಡೆಯಲು ಸಾವಿರಾರು ಕುಟುಂಬಗಳು ಬಹು ದೂರದವರೆಗೂ ಸರತಿಯಲ್ಲಿ ಸಾಗಿದರು. ಗಾಂಧಿ ಬಜಾರ್ ಹಾಗೂ ಮಾರಿಕಾಂಬಾ ದೇವಾಲಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ದೇವಸ್ಥಾನಕ್ಕೆ ದರ್ಶನ ಪಡೆಯಲು ಭಕ್ತರಿಗೆ ತೊಂದರೆಯಾಗದಂತೆ ಉದ್ದಕ್ಕೂ ಬ್ಯಾರಿಕೇಡ್ ಅಳವಡಿಸಲಾಗಿದೆ. ಸೂಕ್ತ ಬಂದೋಬಸ್ತ್ ಗಾಗಿ ಹೆಚ್ಚಿನ ಪೊಲೀಸರನ್ನು ಯೋಜಿಸಲಾಗಿದೆ.
ದರ್ಶನಕ್ಕೆ ಸೂಕ್ತ ವ್ಯವಸ್ಥೆ: ಭಕ್ತರಿಗೆ ತೊಂದರೆಯಾಗದಂತೆ ದೇವಾಲಯ ಆಡಳಿತ ಮಂಡಳಿಯಿಂದ ಸೂಕ್ತ ವ್ಯವಸ್ಥೆ ಮಾಡಿತ್ತು. ಮಧ್ಯಾಹ್ನದ ವೇಳೆಗೆ ಜನದಟ್ಟಣೆ ಹೆಚ್ಚಾಗಿ ಸರತಿ ಸಾಲು ಬಿ.ಎಚ್. ರಸ್ತೆಯ ಬೆಕ್ಕಿನ ಕಲ್ಮಠವರೆಗೂ ಬೆಳೆದಿತ್ತು. ಜನರು ಬಿಸಿಲನ್ನೂ ಲೆಕ್ಕಿಸದೆ ದೇವಿಯ ದರ್ಶನ ಮಾಡಲು ಮುಂದಾಗಿದ್ದರು. ಸರತಿ ಸಾಲಿನಲ್ಲಿ ಬರುವ ಭಕ್ತರಿಗೆ ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿ ಮತ್ತು ಸಂಘ-ಸಂಸ್ಥೆಗಳು ನೀರು, ಮಜ್ಜಿಗೆ ವ್ಯವಸ್ಥೆ ಮಾಡಿದ್ದರು. ದರ್ಶನಕ್ಕೆ ಬರುವ ಭಕ್ತರು ಹಣ್ಣು, ಸೀರೆ, ಬಳೆ, ಅಕ್ಕಿ ಮತ್ತಿತರ ಹರಕೆ ವಸ್ತುಗಳನ್ನು ಹಾಕಲು ಒಟ್ಟು 34 ಡಬ್ಬಿಗಳ ವ್ಯವಸ್ಥೆ ಮಾಡಲಾಗಿತ್ತು. ಜಾತ್ರಾ ಮಹೋತ್ಸವದ ಹಿನ್ನೆಲೆ ಯಲ್ಲಿ ನಗರದಾದ್ಯಂತ ಸಡಗರದ ವಾತಾವರಣ ಇದ್ದರೆ, ಜಾತ್ರೆಗೆ ಶುಭ ಕೋರುವ ಫ್ಲೆಕ್ಸ್ ಗಳು ಎಲ್ಲೆಡೆ ಕಂಡುಬಂದಿದೆ.
ವಿದ್ಯುದ್ದೀಪಗಳಿಂದ ಸಿಂಗಾರಗೊಂಡ ನಗರ: ನಗರದ ಎಲ್ಲಾ ಮುಖ್ಯ ರಸ್ತೆ, ಕೋಟೆ ರಸ್ತೆ, ಗಾಂಧಿ ಜಜಾರ್ ರಸ್ತೆಯನ್ನು ಜಗಮಗಿಸುವ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ.