Advertisement

ಮಾಸಾಂತ್ಯದೊಳಗೆ ಕ್ರಿಯಾಯೋಜನೆ ಸಲ್ಲಿಸಿ

04:40 PM Sep 22, 2019 | Team Udayavani |

ಶಿವಮೊಗ್ಗ: ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಗೊಳಪಡುವ ಕ್ಷೇತ್ರಗಳ ಶಾಸಕರು ತಮ್ಮ ವ್ಯಾಪ್ತಿಯಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ಕುರಿತು ಸೆಪ್ಟೆಂಬರ್‌ ಮಾಸಾಂತ್ಯದೊಳಗಾಗಿ ಕ್ರಿಯಾಯೋಜನೆ ಸಲ್ಲಿಸುವಂತೆ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ| ಶಾಲಿನಿ ರಜನೀಶ್‌ ಅವರು ಮನವಿ ಮಾಡಿದರು.

Advertisement

ಶನಿವಾರ ಮಂಡಳಿಯ ಮಲೆನಾಡು ಸಿರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ದ್ವಿತೀಯ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಟ್ಟು 88 ಜನ ಶಾಸಕರಲ್ಲಿ 73 ಶಾಸಕರು ಸಲ್ಲಿಸಿದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದ ಅವರು, ಪ್ರಸ್ತುತ ಮಂಡಳಿಯಲ್ಲಿ 27 ಕೋಟಿ ರೂ. ಅನುದಾನ ಲಭ್ಯವಿದೆ. ಅಲ್ಲದೆ 24 ಕೋಟಿ ರೂ.ಗಳ ಆರಂಭಿಕ ಅನುದಾನವೂ ಇದೆ. 23 ಕೋಟಿ ರೂ.ಗಳನ್ನು ಮುಂದುವರಿದ ಕಾಮಗಾರಿಗಳಿಗಾಗಿ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ. ಅಂತೆಯೇ 27 ಕೋಟಿ ರೂ. ಗಳಿಗೆ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ಇದೆ ಎಂದರು.

ಕೆಲವೇ ಶಾಸಕರು ಕ್ರಿಯಾಯೋಜನೆ ಸಲ್ಲಿಸದಿರುವುದರಿಂದ ಉಳಿದ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗದಂತೆ ಕ್ರಮ ವಹಿಸಬೇಕು ಎಂದು ಶಾಸಕ ಕುಮಾರ್‌ ಬಂಗಾರಪ್ಪ ಅವರು ಅಧ್ಯಕ್ಷರ ಗಮನ ಸೆಳೆದರು. ಆಗ ಡಾ| ಶಾಲಿನಿ ರಜನೀಶ್‌ ಅವರು ಈಗ ಮಂಡಳಿಯಲ್ಲಿ ಲಭ್ಯವಿರುವ ಅನುದಾನದಲ್ಲಿ ಶೇ.70ರಷ್ಟು ಅನುದಾನವನ್ನು ಬಳಕೆ ಮಾಡಿದರೆ ಹಣಕಾಸು ಇಲಾಖೆ ಉಳಿದ ಅನುದಾನ ಬಿಡುಗಡೆ ಮಾಡಲಿದೆ. ತಪ್ಪಿದಲ್ಲಿ ಹಣ ಮಂಜೂರಾತಿಗೆ ಅವಕಾಶ ಇರುವುದಿಲ್ಲ ಎಂದರು.

ಇತ್ತೀಚಿನ ದಿನಗಳಲ್ಲಿ ಮಂಡಳಿಯಿಂದ ಕೈಗೊಳ್ಳಲಾದ ಕಾಮಗಾರಿಗಳ ವಿವರವನ್ನು ಜನಸಾಮಾನ್ಯರಿಗೆ ತಲುಪಿಸುವ ಸದುದ್ದೇಶದಿಂದ ಮಂಡಳಿಯ ಜಾಲತಾಣದಲ್ಲಿ ಮಾಹಿತಿಯನ್ನು ಪ್ರಕಟಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಕಾಮಗಾರಿಗೆ ಬಿಡುಗಡೆಗೊಂಡು ಅನುದಾನ, ಕಾಮಗಾರಿಯ ಹಂತ, ಅದರ ವಿವರವಾದ ಮಾಹಿತಿ ಲಭ್ಯವಾಗಲಿದೆ ಎಂದರು. ಮಂಡಳಿ ವ್ಯಾಪ್ತಿಯಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಕೈಗೊಳ್ಳಬಹುದಾದ ಮಹತ್ವದ ಕಾಮಗಾರಿಗಳಿಗಾಗಿ ತಜ್ಞರ ಸಲಹೆ ಪಡೆಯಲು ಉದ್ದೇಶಿಸಲಾಗಿದೆ ಅಲ್ಲದೇ ಮಲೆನಾಡು ಮತ್ತು ಬಯಲು ಸೀಮೆಗಳ ಪ್ರಾದೇಶಿಕ ತಾರತಮ್ಯವನ್ನು ನಿವಾರಿಸುವಲ್ಲಿ ಮಂಡಳಿಯನ್ನು ಪುನರ್‌ ರಚನೆಗೆ ಪರಿಷ್ಕರಣೆ ಕಾರ್ಯ ನಡೆಸಲಾಗುತ್ತಿದೆ ಎಂದವರು ನುಡಿದರು.

Advertisement

ರೂ.5ಲಕ್ಷ ಮಿತಿಯೊಳಗಿನ ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ನಡೆಸದೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅನುಮತಿ ನೀಡಲಾಗಿದೆ ಎಂದರು.

2018-19ನೇ ಸಾಲಿನ ಮಾರ್ಚ್‌ ಮಾಸಾಂತ್ಯಕ್ಕೆ 555 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಅದರಲ್ಲಿ 345 ಕಾಮಗಾರಿಗಳು ಪ್ರಗತಿಯಲ್ಲಿವೆ. ಮಂಡಳಿಯ ವ್ಯಾಪ್ತಿಯ ಎಲ್ಲಾ ಶಾಸಕರಿಗೆ ತಲಾ ಒಂದು ಕೋಟಿ ರೂ.ಗಳ ಅನುದಾನಕ್ಕೆ ಕ್ರಿಯಾ ಯೋಜನೆಯನ್ನು ತಯಾರಿಸಲು ಕ್ರಮ ವಹಿಸಲಾಗಿದೆ. 2019-20ನೇ ಸಾಲಿನಲ್ಲಿ 32 ಕ್ಷೇತ್ರಗಳ 3132 ಲಕ್ಷ ಮೊತ್ತದ 383 ಕಾಮಗಾರಿಗಳ
ಪಟ್ಟಿಗೆ ಅನುಮೋದನೆ ದೊರೆತಿದೆ. 4099 ಲಕ್ಷ ಮೊತ್ತದ 493 ಕಾಮಗಾರಿಗಳ ಪಟ್ಟಿಯನ್ನು ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. 345 ಮುಂದುವರಿದ ಕಾಮಗಾರಿಗಳಲ್ಲಿ 68 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಆಗಸ್ಟ್‌ ಮಾಸಾಂತ್ಯಕ್ಕೆ ಒಟ್ಟು 103 ಕಾಮಗಾರಿಗಳನ್ನು ಪೂರೈಸಬೇಕಾಗಿದ್ದು ಈವರೆಗೆ 66 ಕಾಮಗಾರಿಗಳನ್ನು ಪೂರೈಸಲಾಗಿದೆ. 897 ಲಕ್ಷ ಅನುದಾನ ಖರ್ಚು ಮಾಡಲು ಗುರಿ ನಿಗದಿ ಪಡಿಸಲಾಗಿದ್ದು, 1630ಲಕ್ಷ ವೆಚ್ಚ ಭರಿಸಲಾಗಿದೆ. ಅಲ್ಲದೇ 68 ಹೊಸ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದವರು ನುಡಿದರು.

ಪ್ರಸಕ್ತ ಸಾಲಿನ ಮುಂದುವರಿದ ಕಾಮಗಾರಿಗಳಲ್ಲಿ 228 ರಸ್ತೆ ಮತ್ತು ಸೇತುವೆ ವಲಯದಡಿ 54 ಕಾಮಗಾರಿಗಳನ್ನು, 54 ಸಮುದಾಯ ಭವನ ವಲಯದಡಿ 5 ಕಾಮಗಾರಿಗಳನ್ನು, 43 ಶಾಲಾ ಕಟ್ಟಡಗಳು ಮತ್ತು ಇತರೆ ವಲಯದಡಿ 4 ಕಾಮಗಾರಿಗಳನ್ನು ಪೂರೈಸಲಾಗಿದೆ. 9 ಸಣ್ಣ ನೀರಾವರಿ ಮತ್ತು ಇತರೆ ಕಾಮಗಾರಿಗಳಲ್ಲಿ 1 ಕಾಮಗಾರಿ ಪೂರ್ಣಗೊಳಿಸಲಾಗಿದೆ. 345 ಮುಂದುವರಿದ ಕಾಮಗಾರಿಗಳಲ್ಲಿ 68 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮಂಡಳಿ ಪ್ರಭಾರ ಉಪ ಕಾರ್ಯದರ್ಶಿ ಕಾಂತರಾಜ್‌, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಸೇರಿದಂತೆ ವ್ಯಾಪ್ತಿಯ ಶಾಸಕರು, ಜಿಲ್ಲಾ ಪಂಚಾಯತ್‌ ಅಧ್ಯಕ್ಷರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next