Advertisement

ಪನಾಮಾ ರೋಗನಿರೋಧಕ ಬಾಳೆ ಸಸಿ ವಿತರಣೆ

05:47 PM Feb 05, 2020 | Naveen |

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ಮತ್ತು ಸೂಕ್ಷ್ಮಜೀವ ವಿಜ್ಞಾನ ವಿಭಾಗಗಳು ಜಂಟಿಯಾಗಿ ಪನಾಮಾ ರೋಗನಿರೋಧಕ ಬಾಳೆ ಸಸಿಗಳನ್ನು ಅಭಿವೃದ್ಧಿಪಡಿಸಿದ್ದು, ಮಂಗಳವಾರ ರೈತರಿಗೆ ಉಚಿತವಾಗಿ ವಿತರಿಸಲಾಯಿತು.

Advertisement

ಕೇಂದ್ರ ಜೈವಿಕ ತಂತ್ರಜ್ಞಾನ ಸಚಿವಾಲಯದ ಸಹಯೋಗದಲ್ಲಿ ವಿವಿಯ ಜೈವಿಕ ತಂತ್ರಜ್ಞಾನ ಮತ್ತು ಸೂಕ್ಷ್ಮಜೀವ ವಿಜ್ಞಾನ ವಿಭಾಗಗಳು ಮಂಗಳವಾರ ಆಯೋಜಿಸಿದ್ದ “ಅಂಗಾಶ ಬಾಳೆ ಕೃಷಿ ಪದ್ಧತಿ ಸಮಸ್ಯೆಗಳು ಮತ್ತು ಭವಿಷ್ಯ’ ಎಂಬ ಕಾರ್ಯಾಗಾರದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳ 50ಕ್ಕೂ ಹೆಚ್ಚು ರೈತರಿಗೆ ಉಚಿತವಾಗಿ ರೋಗನಿರೋಧಕ ಬಾಳೆ ಸಸಿಗಳು ಹಾಗೂ ಜೈವಿಕ ಶಿಲೀಂಧ್ರದ ಸಾವಯವ ಗೊಬ್ಬರವನ್ನು ವಿತರಿಸಲಾಯಿತು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಗುಲ್ಬರ್ಗಾ ವಿವಿಯ ವಿಶ್ರಾಂತ ಕುಲಪತಿ ಪ್ರೊ| ಎಸ್‌. ಆರ್‌. ನಿರಂಜನ್‌, ಅತಿಯಾದ ಕೀಟನಾಶಕ, ಕಳೆನಾಶಕ ಮತ್ತು ರಸಗೊಬ್ಬರಗಳ ಬಳಕೆಯಿಂದ ರಾಸಾಯನಿಕಯುಕ್ತ ಕೃಷಿಯು ಮಣ್ಣಿನ ಫಲವತ್ತತೆ ಮತ್ತು ತೇವಾಂಶ ಉಳಿಸಿಕೊಳ್ಳುವ ಅಂಶಗಳನ್ನು ಕೊಂದು ಹಾಕಿವೆ. ಜೈವಿಕ ಶಿಲೀಂಧ್ರ (ಟ್ರೈಕೋಡರ್ಮಾ)ದ ಸಾವಯವ ಗೊಬ್ಬರವು ಪನಾಮಾ ವಿಲ್ಟ್ ರೋಗವನ್ನು ತಡೆಯುವ ಜೊತೆಗೆ ಮಣ್ಣಿನ ತೇವಾಂಶ ಮತ್ತು ಫಲವತ್ತತೆಯನ್ನು ಹಿಡಿದಿಡುವಲ್ಲಿ ಸಮರ್ಥವಾಗಿ ಸಹಾಯಕವಾಗಲಿದೆ ಎಂದರು.

ಕುವೆಂಪು ವಿವಿಯ ಎರಡು ವಿಭಾಗಗಳು ರೋಗ ನಿರೋಧಕ ಬಾಳೆಯನ್ನು ಅಭಿವೃದ್ಧಿಪಡಿಸುವ ಜೊತೆಗೆ ಸುಮಾರು 6000 ಸಸಿಗಳನ್ನು ಬೆಳೆಸಿ ವಿತರಿಸುವ ಶ್ರಮವನ್ನು ತೋರಿವೆ. ಸಂಶೋಧನೆ, ಆವಿಷ್ಕಾರ ಮತ್ತು ಉತ್ಪಾದನೆಯ ಸರಣಿ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಂಡಿದ್ದು ಈ ಸಮಗ್ರ ಪ್ರಯತ್ನವು ಸಂಸ್ಥೆಯೊಂದರ ಸಾಮಾಜಿಕ ಜವಾಬ್ದಾರಿಯನ್ನು ಪ್ರತಿಬಿಂಬಿಸುತ್ತದೆ. ವಿವಿಯ ಕುಲಪತಿ ಪ್ರೊ| ಬಿ.ಪಿ. ವೀರಭದ್ರಪ್ಪ
ಮಾತನಾಡಿ, ವಿಶ್ವವಿದ್ಯಾಲಯದ ಸಂಶೋಧನೆಗಳು ನೇರವಾಗಿ ಸಮಾಜ ಮತ್ತು ರೈತರನ್ನು ತಲುಪಬೇಕು. ಈ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮದಲ್ಲಿ ವಿವಿಯು ರೋಗನಿರೋಧಕ ಶಕ್ತಿ ಹೊಂದಿರುವ ಬಾಳೆ ಸಸಿಗಳನ್ನು ರೈತರಿಗೆ ವಿತರಿಸುತ್ತಿರುವುದು ಗಮನಾರ್ಹವಾಗಿದೆ. ವಿಜ್ಞಾನಿ-ವಿವಿ- ರೈತರ ಸಂಬಂಧವನ್ನು ಗಟ್ಟಿಗೊಳಿಸುವ ದಿಕ್ಕಿನತ್ತ ವಿವಿ ಮತ್ತಷ್ಟು ಸಂಶೋಧನೆ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದರು.

ಕಾರ್ಯಾಗಾರದಲ್ಲಿ ಬಾಗಲಕೋಟೆಯ ತೋಟಗಾರಿಕ ವಿವಿಯ ಸಂಶೋಧಕ ಪ್ರೊ| ಕುಲಪತಿ ಎಚ್‌. ಅವರು ಬಾಳೆ ಬೆಳೆಯ ವ್ಯವಸಾಯದ ಹೊಸ ವಿಧಾನಗಳು, ರೋಗಬಾಧೆಯನ್ನು ತಡೆಯುವ ಉಪಾಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವಿವಿಯ ಕುಲಸಚಿವ ಪ್ರೊ| ಎಸ್‌. ಎಸ್‌. ಪಾಟೀಲ್‌, ಜೈವಿಕ ತಂತ್ರಜ್ಞಾನ ವಿಭಾಗದ ಪ್ರೊ| ಕೃಷ್ಟ, ಡಾ| ತಿಪ್ಪೇಸ್ವಾಮಿ ಬಿ. ಸೇರಿದಂತೆ ವಿವಿಧ ವಿಭಾಗಗಳ ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳ ರೈತರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next