ಶಿವಮೊಗ್ಗ: ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಸಾಗುತ್ತಿದ್ದು ದೇವಾಲಯದ ರಸ್ತೆಗಳಲ್ಲಿ ಜನಸಾಗರ ಕಂಡುಬರುತ್ತಿದೆ. ಕೋಟೆ ದೇವಾಲಯ ಆವರಣದ ಮಾರಿಗದ್ದುಗೆಯಲ್ಲಿ ಪ್ರತಿಷ್ಠಾಪಿಸಿರುವ ಮಾರಿಕಾಂಬಾ ದೇವಿಯನ್ನು ಬುಧವಾರ ಸಹಸ್ರಾರು ಭಕ್ತರು ದರ್ಶನ ಪಡೆದು ಪುನೀತರಾದರು.
ಗಾಂಧಿ ಬಜಾರಿನಲ್ಲಿ ಪ್ರತಿಷ್ಠಾಪಿಸಿದ್ದ ಮಾರಿಕಾಂಬೆಯನ್ನು ಭವ್ಯ ಮೆರವಣಿಗೆಯೊಂದಿಗೆ ಮಂಗಳವಾರ ರಾತ್ರಿ ಮಾರಿ ಗದ್ದುಗೆಯಲ್ಲಿ ತಂದು ಪ್ರತಿಷ್ಠಾಪಿಸಲಾಯಿತು. ದೇವಾಲಯದಲ್ಲಿ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಯ ಎರಡನೇ ದಿನವಾದ ಬುಧವಾರ ಬೆಳಗ್ಗಿನ ಜಾವ 4ರಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕೋಟೆ ರಸ್ತೆಯ ವಾಸವಿ ಶಾಲೆಯವರೆಗೂ ಸರತಿ ಸಾಲಿನಲ್ಲಿ ನಿಂತು ದೇವಸ್ಥಾನಕ್ಕೆ ತೆರಳಿ ದೇವಿ ದರ್ಶನ ಪಡೆದರು. ಹರಕೆ ಹೊತ್ತ ಕುಟುಂಬದ ಸದಸ್ಯರು, ಮಕ್ಕಳು ಬೇವಿನ ಉಡಿಗೆ ತೊಟ್ಟು ಶ್ರದ್ಧಾಭಕ್ತಿಯಿಂದ ಬಂದು ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಜಾತ್ರೆ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿ- ವಿಧಾನ, ಪೂಜೆಗಳು ನಡೆದವು.
ದೇವಾಲಯಕ್ಕೆ ಸಂಪರ್ಕ ರಸ್ತೆಯಲ್ಲಿ ಆಟಿಕೆ ಸಾಮಗ್ರಿ, ತಿಂಡಿ ತಿನಿಸುಗಳ ಅಂಗಡಿಗಳು ಜಾತ್ರೆ ಕಳೆ ತಂದಿದ್ದರೆ, ಪರ ಊರು ಗಳಿಂದಲೂ ಬಂಧುಗಳು ಆಗಮಿಸಿದ್ದರಿಂದ ಹಬ್ಬಕ್ಕೆ ಮತ್ತಷ್ಟು ಕಳೆ ಬಂದಿತ್ತು. ಅನೇಕ ಬಡಾವಣೆ, ಬೀದಿಗಳ ತಮ್ಮ ತಮ್ಮ ಮನೆಗಳಲ್ಲಿ ಶಾಮಿಯಾನ ವ್ಯವಸ್ಥೆ ಮಾಡಿಕೊಂಡು ಹಬ್ಬದ ಅಡುಗೆ ತಯಾರಿಸಿ, ಊಟದ ವ್ಯವಸ್ಥೆ ಮಾಡಿದ್ದರು.
ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿತ್ತು. ಸಂಚಾರಿ ಶೌಚಾಲಯ, ಬೇವಿನ ಉಡುಗೆ ಧರಿಸಿದ್ದವರಿಗೆ ಸ್ನಾನದ ವ್ಯವಸ್ಥೆ, ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ದೇವಸ್ಥಾನದಿಂದ ಮಾಡಲಾಗಿತ್ತು. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದರು.
ಎಲ್ಲೆಲ್ಲೂ ಟ್ರಾಫಿಕ್: ಜಾತ್ರೆಯ ಅಂಗವಾಗಿ ಪರ ಊರುಗಳಿಂದಲೂ ನೆಂಟರಿಷ್ಟರು ನಗರಕ್ಕೆ ಆಗಮಿಸಿದ್ದರಿಂದ ಹಾಗೂ ಭಕ್ತರು ದೇವಸ್ಥಾನಕ್ಕೆ ತೆರಳುತ್ತಿದ್ದರು. ನಗರದಲ್ಲಿ ಸಂಚಾರ ದಟ್ಟಣೆ ಹಿಂದಿಗಿಂತ ಹೆಚ್ಚಾಗಿತ್ತು. ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಂಚಾರ ನಿಯಂತ್ರಣಕ್ಕೆಂದು ಅಳವಡಿಕೆ ಮಾಡಲಾಗಿತ್ತು. ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ನಗರದಾದ್ಯಂತ ಸಡಗರದ ವಾತಾವರಣ ಇದ್ದರೆ, ಜಾತ್ರೆಯನ್ನು ಅದ್ಧೂರಿಯಾಗಿ ನಡೆಸಲು ದೇವಸ್ಥಾನ ಸಮಿತಿ ಸಕಲ ಸಿದ್ಧತೆ ಕೈಗೊಂಡಿದೆ.