Advertisement

ರಾಮಾಯಣ ದರ್ಶನಂ ಮೇರು ಕೃತಿ

04:54 PM Dec 30, 2019 | Naveen |

ಶಿವಮೊಗ್ಗ: ಕುವೆಂಪು ಅವರು ಮಲೆಗಳಲ್ಲಿ ಮದುಮಗಳು ಕಾದಂಬರಿ ರಚನೆಯ ಮಧ್ಯೆಯೇ ರಾಮಾಯಣ ದರ್ಶನಂ ಕೈಗೆತ್ತಿಕೊಂಡಿದ್ದು ಆಶ್ಚರ್ಯ. ಈ ರೀತಿಯ ಸಂದರ್ಭಗಳಲ್ಲಿ ಚಂಚಲತೆ, ಅನ್ಯಮನಸ್ಕತೆಯ ಅಪಾಯವಿರುತ್ತದೆ ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಪಟ್ಟರು.

Advertisement

ಕರ್ನಾಟಕ ಸಂಘದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ “ರಾಮಾಯಣ ದರ್ಶನಂ’ ಕುರಿತು ಅವರು ಮಾತನಾಡಿದರು. ಒಂದು ಕೃತಿ ಪೂರ್ಣಗೊಂಡ ನಂತರ ಇನ್ನೊಂದನ್ನು ಕೈಗೆತ್ತಿಕೊಳ್ಳುವುದು ಸಹಜ. ಏಕೆಂದರೆ ಪಾತ್ರಗಳ ಹಾಗೂ ಸಂಬಂಧಗಳ ಕೊಂಡಿ ಕಳಚಿಕೊಳ್ಳುವ ಸಾಧ್ಯತೆ ಇರುತ್ತದೆ. ಇಂತಹ ಸವಾಲುಗಳ ಮಧ್ಯೆಯೂ ಸಂಪೂರ್ಣ ಕಾವ್ಯದ ಸೃಷ್ಟಿಶೀಲ ಕಲ್ಪನೆಯ ದಾರ್ಶನಿಕತೆ ಮೇರು ಕೃತಿಯಾಗಿ ರಾಮಾಯಣ ದರ್ಶನಂ ಗಮನ ಸೆಳೆಯುತ್ತದೆ ಎಂದು ವ್ಯಾಖ್ಯಾನಿಸಿದರು.

ವ್ಯಕ್ತಿಯ ಅಗಲಿಕೆ, ವಿರಹ ವೇದನೆ ಕವಿತೆ ಹುಟ್ಟುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಮನುಷ್ಯ ಕವಿಯಾಗುವುದಕ್ಕೆ ಅಗಲಿಕೆಯ ನೋವು ಸಾಕು. ವಾಲ್ಮೀಕಿ ಕ್ರೌಂಚ ಪಕ್ಷಿಗಳ ಅಗಲಿಕೆಯ ದುಖಃವನ್ನು ಸಹಿಸಲಾರದೇ ಕವಿಯಾದ. ಇದು ಸೃಷ್ಟಿಶೀಲತೆಯ ರಹಸ್ಯ. ಕವಿತೆಗೆ ದುಃಖರಸದ ಲೇಪನವಿದೆ. ರಾಮಾಯಣ ಎಂಬುದೇ ಒಂದು ರೀತಿ 20ನೇ ಶತಮಾನದ ಆಧುನಿಕ ರಾಮಾಯಣ ದರ್ಶನ ಎಂದು ಪ್ರತಿಪಾದಿಸಿದರು.

ಕುವೆಂಪು ಅವರ ರಾಮಾಯಣ ದರ್ಶನಂನಲ್ಲಿ ಲೋಕ ಸಂಚಾರಿಯಾದ ನಾರದನು ವಾಲ್ಮೀಕಿಗೆ ರಾವಣನ ಕಥೆ ಹೇಳಿದ ಎಂದಿದೆ. ನಾರದನ ವೀಣೆಯಿಂದ ಹೇಳಲ್ಪಟ್ಟ ಕಥೆ ಎಂದು ತಿಳಿಸಲಾಗಿದೆ. ಕುವೆಂಪು ಅವರ ರಾಮಾಯಣ ವಿಶಿಷ್ಟ ನೆಲೆಗಟ್ಟಿನಲ್ಲಿ ಸಾಗುತ್ತದೆ. ಪ್ರಾಪಂಚಿಕ ಲೋಕ, ಸೃಷ್ಟಿಶೀಲತೆ, ವಿಮರ್ಶೆ ಸೇರಿದಂತೆ ಹಲವು ವಿಚಾರಗಳ ಮೇಲೆ ರಾಮಾಯಣ ಬೆಳಕು ಚೆಲ್ಲುತ್ತದೆ ಎಂದರು.

ಕಾವ್ಯದ ಸೃಷ್ಟಿಯಲ್ಲಿ ಎಲ್ಲವೂ ಸಂಪರ್ಕದಲ್ಲಿರಬೇಕು. ಅದು ಗೋಚರವಾಗುವಂತಹುದು. ಸೃಷ್ಟಿಶೀಲತೆಯಲ್ಲಿ ಎಲ್ಲವೂ ಸಂಬಂಧ ಹೊಂದಬೇಕು. ಅನ್ಯಮನಸ್ಕತೆಯೂ ಸಹ ಒಳಮನಸ್ಸಿಗೆ ಸಂಬಂಧವಿರುತ್ತದೆ. ನೈಸರ್ಗಿಕ ಸ್ಥಿತಪ್ರಜ್ಞೆ ಎಂಬುದು ವಿಮರ್ಶೆಯ ಒಂದು ಭಾಗವಾಗಿದೆ ಎಂದು ವಿಶ್ಲೇಷಿಸಿದರು.

Advertisement

ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಎಚ್‌.ಎಸ್‌. ನಾಗಭೂಷಣ ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ತಿಂಗಳು 17ನೇ ತಾರೀಖೀನಿಂದ 10 ದಿನಗಳ ಕಾಲ ಕರ್ನಾಟಕ ಸಂಘದಲ್ಲಿ ಪುಸ್ತಕ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಕೆ. ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕಿ ಹಾಲಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next