ಬೆಂಗಳೂರು: ಶಿವಮೊಗ್ಗದಲ್ಲಿ ಐಸಿಸ್ ಸಂಚು ಪ್ರಕರಣದ ಇಬ್ಬರು ಆರೋಪಿಗಳಾದ ಮಾಜ್ ಮುನೀರ್ ಅಹ್ಮದ್ ಮತ್ತು ಮೊಹಮ್ಮದ್ ಶಾರೀಕ್ ವಿರುದ್ಧ ಹೆಚ್ಚುವರಿ ಆರೋಪ ಮಾಡಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಇದೇ ಪ್ರಕರಣದಲ್ಲಿ ನಿಷೇಧಿತ ಐಸಿಸ್ ಮತ್ತು ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಬೆಂಬಲ ವ್ಯಕ್ತಪಡಿಸಿ ಮಂಗಳೂರಿನ ಗೋಡೆಯಲ್ಲಿ ಆಕ್ಷೇಪಾರ್ಹ ಬರಹ ಬರೆದಿದ್ದ ಪ್ರಕರಣದ ಆರೋಪಿ ತೀರ್ಥಹಳ್ಳಿ ಮೂಲದ ಅರಾಫತ್ ಅಲಿ ವಿರುದ್ಧ ಗುರುವಾರ ಆರೋಪಪಟ್ಟಿ ಸಲ್ಲಿಸಿದೆ.
ಶಂಕಿತರು ಐಸಿಸ್ ಮಾತ್ರವ ಲ್ಲದೆ, ಲಷ್ಕರ್-ಎ-ತೊಯ್ಬಾ ಮತ್ತು ತಾಲಿಬಾನ್ ಸಂಘಟನೆ ಪರವಾಗಿಯೂ ಕಾರ್ಯನಿರ್ವಹಿ ಸುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಎನ್‌ಐಎ ತಿಳಿಸಿದೆ.
2020ರ ಜನವರಿಯಲ್ಲಿ ಮಂಗಳೂರಿನ ಗೋಡೆ ಬರಹ ಬರೆದಿದ್ದ ಪ್ರಕರಣದಲ್ಲಿ ಇತರ ಆರೋಪಿಗಳನ್ನು ಪ್ರಚೋದಿಸಿ ಸಂಘಟನೆಗೆ ನೇಮಕ ಗೊಳಿಸಿದ್ದ ಅರಾಫತ್‌ನನ್ನು 2023ರ ಸೆ.14ರಂದು ಕೀನ್ಯಾದಿಂದ ದಿಲ್ಲಿಗೆ ಬರುವಾಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ತನ್ನ ವಿರುದ್ಧ ಗೋಡೆ ಬರಹ ಪ್ರಕರಣ ದಾಖಲಾಗುತ್ತಿದ್ದಂತೆ ಶಂಕಿತ ದುಬಾೖಗೆ ಪರಾರಿಯಾಗಿದ್ದ. ಈತ ಅಲ್-ಹಿಂದ್ ಮಾಡ್ನೂಲ್ ಪ್ರಕರಣದಲ್ಲಿ ಪರಾರಿ ಯಾಗಿರುವ ಅಬ್ದುಲ್ ಮತೀನ್ ತಾಹ ಮತತು ಮಸಾವೀರ್ ಹುಸೇನ್ ಶಾಯೇಬ್‌ನ ಸಹಚರನಾಗಿದ್ದ ಎಂದು ಎನ್‌ಐಎ ತಿಳಿಸಿದೆ.
ಅಬ್ದುಲ್ ಮತೀನ್ ತಾಹಾ ಮತ್ತು ಮುಸಾವೀರ್ ಹುಸೇನ್ ಶಾಯೇಬ್ ಸೂಚನೆ ಮೇರೆಗೆ ಅರಾಫತ್, ಮಂಗಳೂರಿನ ಎರಡು ಸ್ಥಳಗಳಲ್ಲಿ ಭಯೋತ್ಪಾದನೆ ಮತ್ತು ಭಯೋತ್ಪಾದಕ ಸಂಘಟನೆಗಳ ಬೆಂಬಲಿಸುವ ಬರಹಗಳನ್ನು ಬರೆಯಲು ಮೊಹಮ್ಮದ್ ಶಾರೀಕ್ ಮತ್ತು ಮಾಜ್ ಮುನೀರ್ ಅಹ್ಮದ್ ಹಾಗೂ ಇತರರಿಗೆ ಸೂಚಿಸಿದ್ದ. ಅಲ್ಲದೆ, ತನ್ನ ಆನ್‌ಲೈನ್ ಹ್ಯಾಂಡ್ಲರ್ ಜತೆ ಸೇರಿ ಐಸಿಸ್ ಸಂಘಟನೆ ಚಟುವಟಿಕೆಗಳನ್ನು ಹೆಚ್ಚಿಸಲು ದೊಡ್ಡ ಪಿತೂರಿ ನಡೆಸಿದ್ದ ಎಂಬುದು ಗೊತ್ತಾಗಿದೆ. ಜತೆಗೆ ಆನ್‌ಲೈನ್ ಹ್ಯಾಂಡ್ಲರ್‌ಗಳಿಂದ ಕ್ರಿಪ್ಟೋ ಕರೆನ್ಸಿ ರೂಪದಲ್ಲಿ ಹಣ ಪಡೆದು, ಗೋಡೆ ಬರಹ ಪ್ರಕರಣಗಳ ಆರೋಪಿಗಳಿಗೆ ಪಾವತಿ ಮಾಡಿದ್ದ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಎನ್‌ಐಎ ತಿಳಿಸಿದೆ.
ಮೊಹಮ್ಮದ್ ಶಾರೀಕ್ ಮತ್ತು ಮಾಜ್ ಮುನೀರ್ ಅಹ್ಮದ್ ಸಹಿತ 9 ಮಂದಿ ಆರೋಪಿಗಳ ವಿರುದ್ಧ ಐಸಿಸ್ ಸಂಚು ಪ್ರಕರಣದಲ್ಲಿ ಈ ಹಿಂದೆ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಸಲಾಗಿತ್ತು ಎಂದು ಎನ್‌ಐಎ ತಿಳಿಸಿದೆ.