Advertisement

ಶಿವಮೊಗ್ಗ ಹಿಂದೂ ಕಾರ್ಯಕರ್ತನ ಕೊಲೆ ಪ್ರಕರಣ; ಭಯ ಹುಟ್ಟಿಸಲು ಹರ್ಷನ ಹತ್ಯೆ

08:20 AM Sep 04, 2022 | Team Udayavani |

ಬೆಂಗಳೂರು: “ಹಿಜಾಬ್‌ ವಿವಾದದಿಂದ ರಾಜ್ಯದಲ್ಲಿ ಮುಸ್ಲಿಂ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ. ಹಿಂದೂ ಕಾರ್ಯಕರ್ತನನ್ನು ಹತ್ಯೆಗೈದು ಭಯದ ವಾತಾವರಣ ಸೃಷ್ಟಿಸಬೇಕು’ ಎಂಬ ದುರುದ್ದೇಶದಿಂದಲೇ ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷನ ಕೊಲೆಗೈಯಲಾಗಿದೆ. ಆದರೆ, ಹಂತಕರು ಯಾವುದೇ ಸಂಘಟನೆಗೆ ಸೇರಿದವರಲ್ಲ…

Advertisement

ಇದು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಶಿವಮೊಗ್ಗದ ಸಿಗ್ಗೇಹಟ್ಟಿಯ ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ಆರೋಪಿಗಳ ವಿರುದ್ಧ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖೀಸಿರುವ ಪ್ರಮುಖ ಅಂಶ.

ಪ್ರಕರಣ ಸಂಬಂಧ ತನಿಖೆ ನಡೆಸಿದ ಎನ್‌ಐಎ ಅಧಿಕಾರಿಗಳು ಶನಿವಾರ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ 750ಕ್ಕೂ ಹೆಚ್ಚು ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ಅದರಲ್ಲಿ “ಹಿಂದೂ ಕಾರ್ಯಕರ್ತನೊಬ್ಬನ ಕೊಲೆಗೈದು ರಾಜ್ಯದಲ್ಲಿ ಭಯ ಹುಟ್ಟಿಸಬೇಕು ಈ ಮೂಲಕ ತಮ್ಮ ಸಮುದಾಯದ ಸಾಮರ್ಥ್ಯ ಏನೆಂದು ತೋರಿಸಬೇಕು’ ಕೋಮುಸೌಹಾರ್ದತೆ ಮತ್ತು ಗಲಾಟೆ ಉಂಟು ಮಾಡಬೇಕು ಎಂಬ ದುರುದ್ದೇಶದಿಂದಲೇ ಹರ್ಷನ ಕೊಲೆ ಮಾಡಲಾಗಿದೆ. ಜತೆಗೆ ಹಳೇ ದ್ವೇಷ ಕೂಡ ಕೊಲೆಗೆ ಪ್ರೇರಣೆ ನೀಡಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಹಳೇ ದ್ವೇಷ ಕಾರಣ
ಹಿಂದೂ ಕಾರ್ಯಕರ್ತ ಹರ್ಷನ ಜತೆ ಆರೋಪಿಗಳಾದ ಮೊಹಮ್ಮದ್‌ ಖಾಸಿಫ್, ರಿಯಾನ್‌ ಶರೀಫ್ ಮತ್ತು ಆಸಿಫ್ ಉಲ್ಲಾಖಾನ್‌ ಅಲಿಯಾಸ್‌ ಚಿಕ್ಕು ಜತೆ ಸಣ್ಣ-ಸಣ್ಣ ವಿಚಾರಕ್ಕೆ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದರು. ಈ ಪೈಕಿ ರಿಯಾನ್‌ ಶರೀಫ್ ಮತ್ತು ಖಾಸಿಫ್ ತಮ್ಮ ಸಮುದಾಯದ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದರು. ಈ ಮಧ್ಯೆ ಸಿಗ್ಗೇಹಟ್ಟಿ ನಿವಾಸಿ ಹರ್ಷ ಮುಸ್ಲಿಂ ಸಮುದಾಯಗಳಿರುವ ಪ್ರದೇಶಗಳಲ್ಲಿ ಕೆಲವೊಂದು ಹಿಂದೂ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದ. ಅದನ್ನು ಸಹಿಸಲಾರದೆ ಖಾಸಿಫ್ ಮತ್ತು ರಿಯಾನ್‌ 2-3 ಬಾರಿ ಹರ್ಷನ ಮೇಲೆ ದಾಳಿ ನಡೆಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ಕೂಡ ದಾಖಲಾಗಿದೆ. ಜತೆಗೆ ಖಾಸಿಫ್ ತಂಡ ಮತ್ತು ಹರ್ಷನ ತಂಡ ಒಮ್ಮೆ ಶಿವಮೊಗ್ಗ ಜೈಲಿನಲ್ಲಿ ಗಲಾಟೆ ಮಾಡಿಕೊಂಡಿದ್ದರು. ಹೀಗಾಗಿ ಹರ್ಷನ ಕೊಲೆಗೆ ರಿಯಾನ್‌ ಮತ್ತು ಖಾಸಿಫ್ ಸಂಚು ರೂಪಿಸಿದ್ದರು.

ಹಿಜಾಬ್‌ ವಿವಾದ ಪ್ರಚೋದನೆ
ರಾಜ್ಯದಲ್ಲಿ ಹಿಜಾಬ್‌ ವಿವಾದ ಉಂಟಾಗಿದ್ದು, ಮುಸ್ಲಿಂ ಸಮುದಾಯದವನ್ನು ಕಡೆಗಣಿಸಲಾಗುತ್ತಿತ್ತು. ಅದರಿಂದ ಆಕ್ರೋಶಗೊಂಡಿದ್ದ ಖಾಸಿಫ್ ಮತ್ತು ರಿಯಾನ್‌ ನಗರದಲ್ಲಿ ಯಾರಾದರೂ ಹಿಂದೂ ಕಾರ್ಯಕರ್ತನನ್ನು ಭೀಕರವಾಗಿ ಹತ್ಯೆಗೈಯಬೇಕು. ಅದು ಇಡೀ ರಾಜ್ಯ ಮತ್ತು ಹಿಂದೂ ಸಮುದಾಯದಲ್ಲಿ ಭಯ ಉಂಟು ಮಾಡಬೇಕು ಎಂದು ನಿರ್ಧರಿಸಿದ್ದರು. ಈ ನಡುವೆ ಹರ್ಷ ರಿಯಾನ್‌ ಜತೆ ಹಿಜಾಬ್‌ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದ. ಅದರಿಂದ ಪ್ರಚೋದನೆಗೊಂಡ ರಿಯಾನ್‌, ಖಾಸಿಫ್, ಬೇರೆ ಹಿಂದೂ ಕಾರ್ಯಕರ್ತನ ಬದಲು ಹರ್ಷನ ಕೊಲೆಗೈದರೆ, ಹಳೇ ದ್ವೇಷದ ಪ್ರತಿಕಾರ ಹಾಗೂ ಹಿಂದೂ ಸಮುದಾಯಕ್ಕೂ ಎಚ್ಚರಿಕೆ ನೀಡಿದಂತಾಗುತ್ತದೆ ಎಂದು ತೀರ್ಮಾನಿಸಿ, ಜನವರಿ ಅಂತ್ಯ ಮತ್ತು ಫೆಬ್ರವರಿ ಆರಂಭದಲ್ಲಿ ಹರ್ಷನ ಕೊಲೆಗೆ ವಿಫ‌ಲ ಯತ್ನ ನಡೆದಿತ್ತು ಎಂದು ಮೂಲಗಳು ಹೇಳಿವೆ.

Advertisement

15 ದಿನಗಳಿಂದ ಸಂಚು
ಹರ್ಷನ ಹತ್ಯೆಗೆ ಬೇಕಾದ ಮಾರಕಾಸ್ತ್ರಗಳ ಖರೀದಿಗಾಗಿ ಕುಂಶಿ ಬಳಿ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದರು. ಅದರಿಂದ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಮಾರಕಾಸ್ತ್ರಗಳನ್ನು ಖರೀದಿಸಿದ್ದರು. ನಂತರ ಹರ್ಷನನ್ನು ಭೇಟಿಯಾಗಿದ್ದ ರಿಯಾನ್‌, ಪ್ರತಿ ಬಾರಿ ತಮ್ಮ ಸಮುದಾಯದ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ.
ಎಚ್ಚರಿಕೆಯಿಂದ ಇರು. ಉಳಿಗಾಲ ಇಲ್ಲ ಎಂದು ವಾರ್ನಿಂಗ್‌ ಕೊಟ್ಟಿದ್ದ. ಅನಂತರ ಸುಮಾರು 15 ದಿನಗಳ ಕಾಲ ಹರ್ಷನ ಕಾರ್ಯಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ತಂಡ ಕ್ಲಾರ್ಕ್‌ ಪೇಟೆಯಲ್ಲಿ ಸಭೆ ನಡೆಸಿತ್ತು. ತಮ್ಮ ಎಂಟು ಮಂದಿ ಸಹಚರರಿಗೆ ಹರ್ಷನ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಖಾಸಿಫ್ ಮತ್ತು ರಿಯಾನ್‌ ಸೂಚಿಸಿದ್ದರು. ಅಂತಿಮವಾಗಿ  ಫೆ.20ರಂದು ಹರ್ಷನನ್ನು ಎನ್‌.ಟಿ.ರಸ್ತೆಯ ಕಾಮತ್‌ ಪೆಟ್ರೋಲ್‌ ಬಂಕ್‌ ಬಳಿ ಭಾರತಿ ಕಾಲೋನಿಯಲ್ಲಿ  ಭೀಕರವಾಗಿ ಹತ್ಯೆಗೈದಿದ್ದರು. ನಂತರ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ(ಯುಎಪಿಎ) ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಾಸನ, ಬೆಂಗಳೂರು ಹಾಗೂ ಇತರೆ ಅಡಗಿದ್ದ ಆರೋಪಿಗಳನ್ನು ಬಂಧಿಸಿದ್ದರು. ತನಿಖೆಯಲ್ಲಿ ಕೋಮುಸೌಹಾರ್ದ ಕದಡುವ ಹುನ್ನಾರ ನಡೆದಿದೆ ಎಂಬ ಆರೋಪ ಮೇಲೆ ಪ್ರಕರಣವನ್ನು ಎನ್‌ಐಎಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ತನಿಖೆ ಪೂರ್ಣಗೊಳಿಸಿರುವ ಎನ್‌ಐಎ ಹತ್ತು ಮಂದಿ ಆರೋಪಿಗಳ ಹೇಳಿಕೆ ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಉಲ್ಲೇಖಿಸಿ 750ಕ್ಕೂ ಹೆಚ್ಚು ಪುಟಗಳ ಆರೋಪಪಟ್ಟಿ ಸಲ್ಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next