ಶಿವಮೊಗ್ಗ: ಜಿಲ್ಲೆಯಲ್ಲಿ ಜಾರಿಗೆ ತರಲಾಗಿರುವ ಅಂತರ್ಜಲ ಚೇತನ ಯೋಜನೆಯನ್ನು ಮುಂದಿನ ಒಂದು ವರ್ಷದ ಅವ ಧಿಯೊಳಗಾಗಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿದರು.
ಬುಧವಾರ ಶಿವಮೊಗ್ಗ ತಾಲೂಕು ಸೂಗೂರು ಸಮೀಪದ ಕ್ಯಾತಿನಕೊಪ್ಪ ಗ್ರಾಮದಲ್ಲಿ “ಅಂತರ್ಜಲ ಚೇತನ’ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಮಳೆ ನೀರು ಸಂಗ್ರಹಣೆ ಮತ್ತು ಮಣ್ಣಿನ ಸವಕಳಿ ತಡೆಯುವುದು, ಮಣ್ಣಿನ ತೇವಾಂಶ ಹೆಚ್ಚಿಸುವುದು, ಸ್ವಾಭಾವಿಕ ಹಳ್ಳಗಳುದ್ದಕ್ಕೂ ಕೃತಕ ಅಂತರ್ಜಲ ಮರುಪೂರಣ ರಚನೆಗಳನ್ನು ನಿರ್ಮಿಸುವುದು ಹಾಗೂ ಸ್ವಾಭಾವಿಕ ಸಸ್ಯವರ್ಗ ಹೆಚ್ಚಿಸುವುದು ಯೋಜನೆಯ ಸದುದ್ದೇಶವಾಗಿದೆ. ಈ ಎಲ್ಲಾ ಕಾಮಗಾರಿಗಳು ನಿರೀಕ್ಷೆಯಂತೆ ಪೂರ್ಣಗೊಳ್ಳಲು ಸಮುದಾಯದ ಸಹಭಾಗಿತ್ವ ಮಹತ್ವದ್ದಾಗಿದೆ ಎಂದ ಅವರು, ಈ ಯೋಜನೆಯಿಂದ ಜಿಲ್ಲೆಯ ಎಲ್ಲಾ 271 ಗ್ರಾಪಂಗಳ ಸುಮಾರು 8.82 ಲಕ್ಷ ಜನರಿಗೆ ಉಪಯೋಗವಾಗಲಿದೆ. ಈ ಯೋಜನೆಯಡಿ ಬೋಲ್ಡರ್ ಚೆಕ್ (ಕಲ್ಲುಗುಂಡು ತಡೆ) ನಿರ್ಮಾಣ, ಇಂಗುಬಾವಿ, ಇಂಗುಕೊಳವೆ, ಕೆರೆ ಹೊಂಡ ಸೇರಿದಂತೆ ಒಟ್ಟು 32,731ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವಿನೊಂದಿಗೆ ಕೈಗೆತ್ತಿಕೊಳ್ಳಲಾಗಿರುವ ಈ ಯೋಜನೆಗೆ 252ಕೋಟಿ ರೂ.ಗಳ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.
ಈ ಯೋಜನೆಯ ವ್ಯವಸ್ಥಿತ ಅನುಷ್ಠಾನಕ್ಕಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ತಜ್ಞ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಸೂಕ್ತ ಸಲಹೆ, ಸೂಚನೆ ನೀಡುವರಲ್ಲದೆ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ರಾಜ್ಯದ ಆಯ್ದ 8-10 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು, ಮುಂದಿನ ದಿನಗಳಲ್ಲಿ ಹಂತಹಂತವಾಗಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಮಾತನಾಡಿ, ಈ ಯೋಜನೆಯ ಅನುಷ್ಠಾನಕ್ಕಾಗಿ ಸರಳವಾದ ವೈಜ್ಞಾನಿಕವಾದ ವಿಧಾನಗಳನ್ನು ಅಳವಡಿಸಿ ಕೊಂಡು ಅನುಷ್ಠಾನಗೊಳಿಸಲು ಸರ್ಕಾರದೊಂದಿಗೆ ಸಮುದಾಯ ಮುಂದಾಗಬೇಕು. ಮಳೆ ನೀರು ಸಂಗ್ರಹಕ್ಕೆ ಇದು ಸುವರ್ಣಾವಕಾಶ ಎಂದರು.
ಆರ್ಟ್ ಆಫ್ ಲಿವಿಂಗ್‌ನ ಸಂಯೋಜಕ ನಾಗರಾಜ್ ಗಂಗೊಳ್ಳಿ ಅವರು ಮಾತನಾಡಿ, ಉಪಗ್ರಹ ಆಧಾರಿತ ಮಾಹಿತಿ ಮೇಲೆ ನೀರು ಇಂಗಿಸುವ ಸ್ಥಳಗಳನ್ನು ನಿಗ ದಿಗೊಳಿಸಲಾಗಿದೆ. ವೈಜ್ಞಾನಿಕ ವಿಧಾನಗಳ ಮೂಲಕ ನೀರನ್ನು ಇಂಗಿಸುವ ಯೋಜನೆ ರೂಪಿಸಲಾಗಿದೆ. ಈ ಯೋಜನೆಯ ವ್ಯವಸ್ಥಿತ ಅನುಷ್ಠಾನದಿಂದಾಗಿ ಬರಿದಾಗಿರುವ ಕೊಳವೆ ಬಾವಿಗಳಲ್ಲಿ ಪುನಃ ನೀರಿನ ಸೆಳವು ಕಾಣಬಹುದಾಗಿದೆ ಎಂದರು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ. ಅಶೋಕನಾಯ್ಕ, ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಉದ್ಯೋಗಖಾತ್ರಿ ಯೋಜನೆಯ ವ್ಯವಸ್ಥಾಪಕ ಅನಿರುಧ್ ಪಿ. ಶ್ರವಣ್, ಜಿಪಂ ಸದಸ್ಯ ಕೆ.ಇ. ಕಾಂತೇಶ್, ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ ಮತ್ತಿತರರು ಇದ್ದರು.