ಶಿವಮೊಗ್ಗ: ವಿಜಯೇಂದ್ರ ಅವರು ಸಿದ್ದರಾಮಯ್ಯ ಹಾಗು ಡಿಕೆಶಿವಕುಮಾರ್ ಬಗ್ಗೆ ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರ ಪಕ್ಷದವರೇ ಆದ ಯತ್ನಾಳ್ ಅವರು ವಿಜಯೇಂದ್ರ ಬಗ್ಗೆ ಮಾತನಾಡಿದ್ದಾರೆ. ಅದರ ಬಗ್ಗೆ ಮಾತನಾಡಲ್ಲ. ಡಿಕೆಶಿ ಬಗ್ಗೆ ಮಾತನಾಡಲು ಏನು ಯೋಗ್ಯತೆಯಿದೆ? ವಿಜಯೇಂದ್ರ ಎಲ್ಲಿದ್ದರು, ಇವರು ಏನು ಕೆಲಸ ಮಾಡುತ್ತಿದ್ದರು. ವಿಜಯೇಂದ್ರ ಅವರ ಆಸ್ತಿ ಎಷ್ಟು, ಅವರ ಆಸ್ತಿ ಹೇಗೆ ಬಂತು ಹೇಳಬೇಕಲ್ಲ. ವಿಜಯೇಂದ್ರ ಅವರ ಮೇಲೂ ಕೇಸ್ ಇದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಶನಿವಾರ (ಆ 03) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ತಪ್ಪು ಮಾಡದಿದ್ದರೂ ಜೈಲಿಗೆ ಹೋಗಿದ್ದರು. ಅವರು ಜೈಲಿಗೆ ಹೋಗಲು ಯಡಿಯೂರಪ್ಪ, ವಿಜಯೇಂದ್ರ ಕಾರಣ. ಡಿಕೆಶಿ ಬೆಳೆಯಬಾರದು, ಅವರನ್ನು ತುಳಿಯಬೇಕೆಂದು ಮಾಡಿದರು. ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ಜೈಲಿಗೆ ಕಳುಹಿಸಿದರು ಎಂದರು.
2012 ರಲ್ಲಿ ಮುಡಾ ಹಗರಣ ನಡೆದಿದೆ. 2012 ರಲ್ಲಿ ಬಿಜೆಪಿ ಸರಕಾರ ಇತ್ತು. ಮುಡಾ ಅಧ್ಯಕ್ಷರಾಗಿದ್ದವರು ರಾಜೀವ್. ಆದರೂ ಮುಡಾ ಹ್ಯಾಂಡಲ್ ಮಾಡುತ್ತಿದ್ದದ್ದು ವಿಜಯೇಂದ್ರ. ವಿಜಯೇಂದ್ರ ಅವರ ಕಾರಣದಿಂದಲೇ ಯಡಿಯೂರಪ್ಪ ಪೂರ್ತಿಯಾಗಿ ಅಧಿಕಾರ ಮಾಡಲಾಗಲಿಲ್ಲ. ವಿಜಯೇಂದ್ರ ಅವರು ಭ್ರಷ್ಟಾಚಾರ ಬಗ್ಗೆ ಮಾತನಾಡಬೇಕಾದರೆ ಹುಷಾರಾಗಿ ಇರಬೇಕು. ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಈಡಿ ಸಚಿವ ಸಂಪುಟ ಸಿದ್ದರಾಮಯ್ಯ ಜೊತೆ ನಿಲ್ಲುತ್ತೇವೆ ಎಂದರು.
ಬೆಂಗಳೂರು – ಮೈಸೂರು ಪಾದಯಾತ್ರೆ ವಿಚಾರಕ್ಕೆ ಮಾತನಾಡಿ, ಮುಖ್ಯಮಂತ್ರಿ ಅವರ ಬಳಿ ಮನವಿ ಮಾಡುತ್ತೇನೆ. ಎಲ್ಲರ ಹಗರಣ ಹೊರಗೆ ತೆಗೆಯಬೇಕು. ಇವರಿಗೆ ಒಬಿಸಿ ಮುಖ್ಯಮಂತ್ರಿ ಆಗಿರುವುದು ಹೊಟ್ಟೆ ಕಿಚ್ಚು. ಸತ್ಯ ಗೆಲ್ಲಬೇಕು, ಸುಳ್ಳು ಸೋಲಬೇಕು. ನಾವೆಲ್ಲಾ ಸಿದ್ದರಾಮಯ್ಯ ಅವರ ಜೊತೆ ನಿಲ್ಲುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದರು.
ಭ್ರಷ್ಟಾಚಾರದಲ್ಲಿ ಯಾರಿಗಾದರೂ ರಾಂಕ್ ಕೊಟ್ಟರೆ ವಿಜಯೇಂದ್ರ ಅವರೇ ನಂ.1. ವಿಜಯೇಂದ್ರ ಅವರೇ ಹಿಂದುಳಿದ ವರ್ಗದ ನಾಯಕನನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಕೇಜ್ರಿವಾಲ್ ಗೆ ಪ್ರಾಸಿಕ್ಯೂಷನ್ ಮಾಡಿದ್ದರು. ಅವರು ಜೈಲಲ್ಲಿದ್ದಾರೆ, ಒಳ್ಳೆಯ ಆಡಳಿತ ನಡೆಯುತ್ತಿದೆ. ಬಿಜೆಪಿಯವರಿಗೆ ಜೈಲಿಗೆ ಕಳುಹಿಸುವುದು ಎಂದರೆ ಖುಷಿ. ಯತ್ನಾಳ್ ಅವರು ವಿಜಯೇಂದ್ರ ಬಗ್ಗೆ ಹಿಗ್ಗಾಮುಗ್ಗ ಬೈಯುತ್ತಿದ್ದಾರೆ. ನಾಯಿ ತರಹ ಬೈಯುತ್ತಿದ್ದಾರೆ ಅದರ ಬಗ್ಗೆ ಅವರಿಗೆ ನಾಚಿಕೆ ಇಲ್ವಾ? ಬಿಜೆಪಿ ಪಾದಯಾತ್ರೆ ಅವರು ಅವರ ವಿರುದ್ದವೇ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಬೀಳಿಸುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿ ಅವರ ಭ್ರಷ್ಟಾಚಾರದ ವಿರುದ್ದವೇ ಪಾದಯಾತ್ರೆ ಮಾಡುತ್ತಿದೆ. ಈ ಪಾದಯಾತ್ರೆಯನ್ನು ನಾನು ಖಂಡಿಸುತ್ತೇನೆ ಎಂದು ಕಿಡಿಕಾರಿದರು.
ವಾಲ್ಮೀಕಿ ನಿಗಮ ಹಗರಣ ವಿಚಾರದ ಬಗ್ಗೆ ಮಾತನಾಡಿ, ಈ ಬಗ್ಗೆ ಮುಖ್ಯಮಂತ್ರಿ ಅವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ವಿಧಾನಸಭೆ ಒಳಗೆ ಹಾಗು ಹೊರಗೆ ಹೇಳಿದ್ದಾರೆ. ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.
ಇಲ್ಲಿಂದ ಸಂಸತ್ ಗೆ ಹೋಗಿರುವ ಬಿ.ವೈ. ರಾಘವೇಂದ್ರಗೆ ಕಮಿಟ್ಮೆಂಟ್ ಇಲ್ಲ. ಭೂಹಕ್ಕು ಪತ್ರ ಕೊಡಿಸುವಲ್ಲಿ ಸದನದಲ್ಲಿ ಅವರು ಮಾತನಾಡಿಲ್ಲ. ಬಗರ್ ಹುಕುಂ ಹಾಗೂ ಶರಾವತಿ ಸಂತ್ರಸ್ತರಿಗೆ ಭೂ ಹಕ್ಕು ಕೊಡಿಸುವಲ್ಲಿ ರಾಘವೇಂದ್ರ ವಿಫಲರಾಗಿದ್ದಾರೆ. ಕೇವಲ ಮತ ಗಳಿಸಿಕೊಂಡು ಹೋಗಿದ್ದಾರೆ. ಭೂ ಹಕ್ಕು ಕೊಡಿಸುವ ಪರವಾಗಿ ಕಾಗೋಡು ತಿಮ್ಮಪ್ಪ ಅವರು ಹೋರಾಟ ಮಾಡಿದ್ದರು. ಆ ಹೋರಾಟವನ್ನು ನಾವು ಮೈಗೂಡಿಸಕೊಳ್ಳಬೇಕು ಎಂದು ಹೇಳಿದರು.