Advertisement

ಮನ ರಂಜಿಸಿದ ರೈತ ದಸರಾ

03:02 PM Oct 03, 2019 | Team Udayavani |

ಶಿವಮೊಗ್ಗ: ಮಹಾನಗರ ಪಾಲಿಕೆ ವತಿಯಿಂದ ಆಚರಿಸುತ್ತಿರುವ ದಸರಾ ಹಬ್ಬಕ್ಕೆ ಮತ್ತಷ್ಟು ಮೆರಗು ಸಿಕ್ಕಿದ್ದು ಹರಿಗೆ ಬಳಿ ಆಯೋಜಿಸಿದ್ದ ಗುಂಪು ಓಟ, ಹಗ್ಗಜಗ್ಗಾಟ, ಕೆಸರು ಗದ್ದೆ ಓಟ ಮತ್ತು ಅಡಕೆ ಸುಲಿಯುವ ಸ್ಪರ್ಧೆಗಳಿಂದ. ರೈತ ದಸರಾ ಹೆಸರಿನಲ್ಲಿ ಕಾರ್ಯಕ್ರಮ ಸಂಘಟಸಲಾಗಿತ್ತು.

Advertisement

ಕೆಸರು ಗದ್ದೆ ಓಟವಂತೂ ಭರ್ಜರಿಯಾಗಿತ್ತು. ಕೆಸರಿನಲ್ಲಿಯೇ ಕಾಲು ಕೀಳುತ್ತ ಓಡುವ ದೃಶ್ಯ ರೋಚಕವಾಗಿತ್ತು. ಮಹಿಳೆಯರು ಕೂಡ ಭಾಗವಹಿಸಿದ್ದು, ವಿಶೇಷವಾಗಿತ್ತು. ಹಗ್ಗ ಜಗ್ಗಾಟ ಆಟ ಕೂಡ ಗಮನ ಸೆಳೆಯಿತು. ಇದರ ಜೊತೆಗೆ ಅಡಕೆ ಸುಲಿಯುವ ಸ್ಪರ್ಧೆಯಲ್ಲಿ ಮಹಿಳೆಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.

ಬೆಳಗ್ಗೆ 8 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಆಯೋಜಕರು, ಸ್ಪರ್ಧಿಗಳು 10 ಗಂಟೆ ಸುಮಾರಿಗೆ ಆಗಮಿಸಿದ್ದರು. ನಂತರ 16 ವರ್ಷ ಒಳಗಿನ, 16 ವರ್ಷ ಮೇಲಿನ ಎರಡು ಗುಂಪುಗಳನ್ನು ಮಾಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು.

ಸುಮಾರು 200 ಮೀಟರ್‌ ಉದ್ದ ಇದ್ದ ಕೆಸರು ಗದ್ದೆಯಲ್ಲಿ ಓಡಲು ಬಹಳಷ್ಟು ಮಂದಿ ಉತ್ಸುಕರಾಗಿದ್ದರು. ಸ್ಪರ್ಧೆ ಮುಗಿದ ಮೇಲೂ ಯುವಕರು, ಯುವತಿಯರು ಕೆಸರು ಗದ್ದೆಯಲ್ಲಿ ಓಡಾಡಿ ವಿಡಿಯೋ ಮಾಡಿಕೊಳ್ಳುತ್ತಿದ್ದರು.

ಕೆಲಕಾಲ ಟಿಕ್‌ಟಾಕ್‌ ಪ್ರಿಯರೂ ಕಂಡು ಬಂದರು. ಕೆಸರು ಗದ್ದೆ ಓಟದ ನಂತರ ಅಡಕೆ ಕಾಯಿ ಸುಲಿಯುವ ಸ್ಪರ್ಧೆಯು ನಡೆಯಿತು. ಆರು ಜನ ಮಹಿಳೆಯರು ಭಾಗವಹಿಸಿದ್ದರು. ಸ್ಪರ್ಧಿಗಳಿಗೆ 15 ನಿಮಿಷದ ಸಮಯ ನೀಡಲಾಗಿತ್ತು. ಹೆಚ್ಚು ಕಾಯಿ ಹಾಗೂ ಯಾವುದೇ ಕಚ್ಚು ಇಲ್ಲದೇ ಸುಲಿದ ಸ್ಪರ್ಧೆಗಳಿಗೆ ಪ್ರಶಸ್ತಿ ಘೋಷಿಸಲಾಯಿತು. ನಂತರ ಹಗ್ಗ ಜಗ್ಗಾಟ ಸ್ಪರ್ಧೆ ಕೂಡ ನಡೆಯಿತು.

Advertisement

16ವರ್ಷ ಒಳಗಿನ ಹಾಗೂ ಮೇಲ್ಪಟ್ಟ ಗುಂಪುಗಳ ನಡುವೆ ಸ್ಪರ್ಧೆಗಳು ನಡೆದವು. ಪ್ರತಿ ತಂಡದಲ್ಲೂ 10 ಯುವಕರಿದ್ದರು. ನಂತರ ಮಹಿಳಾ ತಂಡಗಳೂ ಭಾಗಿಯಾಗಿದ್ದವು. ಗದ್ದೆಯಲ್ಲಿ ಉರುಳಾಡಿ ತಮ್ಮ ತಂಡ ಗೆಲ್ಲಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದ ಸ್ಪರ್ಧಿಗಳನ್ನು ಕಂಡು ನೋಡುಗರು ರೋಮಾಂಚನಗೊಂಡರು. ಮೇಯರ್‌ ಲತಾ ಗಣೇಶ್‌, ಉಪಮೇಯರ್‌ ಚನ್ನಬಸಪ್ಪ, ರೈತ ಮುಖಂಡ ಕೆ.ಟಿ. ಗಂಗಾಧರ್‌, ಶಿಮುಲ್‌ ಅಧ್ಯಕ್ಷ ಆನಂದ್‌, ಪಾಲಿಕೆ ಸದಸ್ಯರಾದ ಯೋಗೀಶ್‌, ನಾಗರಾಜ್‌ ಕಂಕಾರಿ, ಸತ್ಯನಾರಾಯಣ್‌, ಆರ್‌.ಸಿ. ನಾಯ್ಕ ಇತರರಿದ್ದರು. ಶಿಮುಲ್‌ ವತಿಯಂದ ಸ್ಪರ್ಧಿಗಳಿಗೆ, ನೆರೆದಿದ್ದವರಿಗೆ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next