ಶಿವಮೊಗ್ಗ: ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಹಂಗಾಮಿ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ರಘುರಾಮ್ ದೇವಾಡಿಗ, ಶಾಂತರಾಜ್ ಐ.ಪಿ. ನಾಮಪತ್ರ ಸಲ್ಲಿಸಿದ್ದಾರೆ. ಖಜಾಂಚಿ ಸ್ಥಾನಕ್ಕೆ ಜೆ.ಗಿರೀಶ ಹಾಗೂ ರಾಘು ಎಚ್.ಎನ್., ರಾಜ್ಯ ಪರಿಷತ್ ಸ್ಥಾನಕ್ಕೆ ಎಂ.ಎನ್. ಜಯಣ್ಣ ಗೌಡ, ಆರ್. ಮೋಹನ್ ಕುಮಾರ್ ನಾಮಪತ್ರ ಸಲ್ಲಿಸಿದರು.
ನಾಮಪತ್ರ ವಾಪಸ್ ಪಡೆಯಲು ಶುಕ್ರವಾರ ಸಂಜೆ 4 ಗಂಟೆವರೆಗೂ ಸಮಯವಿದೆ. ಅವಿರೋಧ ಆಯ್ಕೆಗೆ ಪ್ರಯತ್ನಿಸಿದ ಸಿ.ಎಸ್. ಷಡಾಕ್ಷರಿ ಅವರಿಗೆ ನಿರಾಸೆಯಾಗಿದ್ದು ಶುಕ್ರವಾರ ಮನವೊಲಿಸಿ ನಾಮಪತ್ರ ಹಿಂಪಡೆಯುವಂತೆ ಮಾಡುತ್ತಾರೋ ಕಾದು ನೋಡಬೇಕಿದೆ.
ನಾಮಪತ್ರ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಸ್. ಷಡಾಕ್ಷರಿ, ಕಾರ್ಯಕಾರಿ ಸಮಿತಿಯಲ್ಲಿ 58 ಜನ ನಿರ್ದೇಶಕರು ತಮಗೆ ಬೆಂಬಲ ನೀಡಿ ಪತ್ರ ಬರೆದುಕೊಟ್ಟಿದ್ದಾರೆ. ಒಂದು ಪಕ್ಷ ಚುನಾವಣೆ ನಡೆದರೆ ತಾವು ಗೆಲ್ಲುವುದಂತೂ ಖಚಿತ. ಆದರೆ ಅವಿರೋಧವಾಗಿ ಆಯ್ಕೆಯಾಗಬೇಕೆನ್ನುವುದು ನಮ್ಮ ಉದ್ದೇಶ. ಹಾಗಾಗಿ ಅಕಸ್ಮಾತ್ ಯಾರಾದರೂ ನಾಮಪತ್ರ ಸಲ್ಲಿಸಿದರೆ ಅವರಿಗೆ ವಾಪಸ್ ಪಡೆಯಲು ಮನವಿ ಮಾಡಲಾಗುವುದು ಎಂದರು.
ಸರ್ಕಾರಿ ನೌಕರರ ಸಂಘ ಈ ಹಿಂದೆ ಅನೇಕ ಕೆಲಸಗಳನ್ನು ಮಾಡಿದೆ. ಜನರ ಪ್ರೀತಿ ಗಳಿಸಿದೆ. ನನ್ನ ಮುಂದಿನ ಅವಧಿಯಲ್ಲೂ ಕೂಡ ಉತ್ತಮವಾಗಿ ಕೆಲಸ ಮಾಡುವ ಅಭಿಲಾಷೆ ಇದೆ. ನೌಕರರ ಸಮಸ್ಯೆಗಳು ಕೂಡ ಇವೆ. ಅವುಗಳಿಗೆ ಸ್ಪಂದಿಸುವೆ. ಸರ್ಕಾರಿ ನೌಕರರ ಪ್ರೀತಿ, ವಿಶ್ವಾಸ ತಮ್ಮ ಮೇಲೆ ಯಾವಾಗಲು ಇದೆ. ಅವರ ಋಣ ತೀರಿಸುವ ಕೆಲಸ ಮಾಡುವೆ ಎಂದರು. ಆಗಸ್ಟ್ 7 ರಂದು ರಾಜ್ಯಾಧ್ಯಕ್ಷರ ಚುನಾವಣೆ ನಡೆಯಲಿದೆ. ಸುತ್ತಲ ಜಿಲ್ಲೆಗಳ ಸಂಘದ ನಿರ್ದೇಶಕರು ತಾವೇ ಸ್ಪರ್ಧಿಸಬೇಕೆಂದು ಬಯಸುತ್ತಿದ್ದಾರೆ. ಇಡೀ ರಾಜ್ಯದಲ್ಲಿಯೇ ಶಿವಮೊಗ್ಗದ ಸರ್ಕಾರಿ ನೌಕರರ ಸಂಘ ಮಾದರಿಯಾಗಿ ಕ್ರಿಯಾಶೀಲವಾಗಿದೆ. ಇದರ ಆಧಾರವಾಗಿಯೇ ತಾವು ರಾಜ್ಯಾಧ್ಯಕ್ಷರ ಹುದ್ದೆಗೂ ಸ್ಪರ್ಧೆ ಮಾಡುವೆ ಎಂದರು. ಬಹುತೇಕ ನಿರ್ದೇಶಕರು ಇದ್ದರು.