ಶಿವಮೊಗ್ಗ: ಈವರೆಗೂ ಕೋವಿಡ್ ವೈರಸ್ ಕಾಣಿಸಿಕೊಳ್ಳದೇ ಗ್ರೀನ್ ಜೋನ್‌ನಲ್ಲಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಗುರುವಾರದಿಂದ ನೀಡಿರುವ ಸಡಿಲಿಕೆಯು ಆರ್ಥಿಕ ವಲಯಕ್ಕೆ ಚೇತರಿಕೆ ನೀಡಿದೆ. ಬೆಳಗ್ಗೆ 7ರಿಂದ 12 ಗಂಟೆವರೆಗೆ ಕದ್ದು ಮುಚ್ಚಿ ವ್ಯವಹಾರ ನಡೆಸುತ್ತಿದ್ದ ವಾಣಿಜ್ಯ ಮಳಿಗೆಗಳು ಈಗ ನಿರಾಳಗೊಂಡಿವೆ.
ಕೃಷಿ ವಲಯಕ್ಕೆ ಸಂಪೂರ್ಣ ಉತ್ತೇಜನ ನೀಡಿರುವುದರಿಂದ ಕೃಷಿ ಪೂರಕವಾದ ಗೊಬ್ಬರ, ಪೈಪ್, ಗ್ಯಾರೇಜ್‌ಗಳು ಆರಂಭಗೊಂಡಿವೆ. ಶಿವಮೊಗ್ಗ- ಭದ್ರಾವತಿ, ಶಿವಮೊಗ್ಗ- ತೀರ್ಥಹಳ್ಳಿ, ಸಾಗರ ನಡುವಿನ ಡಾಬಾಗಳು ಇನ್ನಷ್ಟೇ ಕಾರ್ಯಾರಂಭ ಮಾಡಬೇಕಿದೆ. ಮೊಬೈಲ್ ರೀಚಾರ್ಜ್ ಮಳಿಗೆ ತೆರೆಯಲು ಅವಕಾಶ ನೀಡಿರುವುದು ಬೇರೆ ರೀತಿ ಚಟುವಟಿಕೆಗೂ ದಾರಿಯಾಗಿದೆ. ಜೆರಾಕ್ಸ್, ದಿನಸಿ ಅಂಗಡಿ ಜತೆ ರೀಚಾರ್ಜ್ ಸೇವೆ ಮಾಡುತ್ತಿದ್ದ ಅಂಗಡಿಗಳು ಸಹ ಓಪನ್ ಆಗಿವೆ. ಮೊದಲಿನಿಂದಲೂ ನಗರ ಭಾಗದಲ್ಲಿ ಹೆಚ್ಚಿನ ಬಿಗಿ ಭದ್ರತೆ ಒದಗಿಸಲಾಗಿದೆ. ಗ್ರಾಮಾಂತರದಲ್ಲಿ ಅಷ್ಟಿಲ್ಲ. ಇದೇ ಅವಕಾಶ ಬಳಸಿಕೊಂಡು ಇನ್ನಷ್ಟು ವ್ಯಾಪಾರ ವಹಿವಾಟು ನಡೆಯುತ್ತಿದೆ.
ಡೋರ್ ಹಾಕಿದಂತೆ ಕಾಣುತ್ತಿದ್ದರೂ ಸಲೂನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಗ್ರಾಹಕರಿಗೆ ಕರೆ ಮಾಡಿ ಬೆಳಗ್ಗಿನ ಜಾವ ಕರೆದು ಕ್ಷೌರ ಮಾಡಲಾಗುತ್ತಿದೆ. ಅನೇಕ ಬಾರಿ ಪೊಲೀಸರು ಮತ್ತು ಬೀಟ್ ಅಧಿಕಾರಿಗಳು ಮೌಖೀಕ ತಿಳಿವಳಿಕೆ ನೀಡಿದರೂ ಕದ್ದು ಮುಚ್ಚಿ ವ್ಯವಹಾರಗಳು ಜೋರಾಗಿವೆ. ಮಧ್ಯಾಹ್ನ 12 ಗಂಟೆವರೆಗೂ ನಗರ ಭಾಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಪೊಲೀಸರು ನಿಯಂತ್ರಣ ಮಾಡುತ್ತಿದ್ದಾರೆ. ಕೆಲ ಏರಿಯಾಗಳ ರಸ್ತೆ ಬ್ಲಾಕ್ ಮಾಡಿರುವುದರಿಂದ ಮುಖ್ಯ ರಸ್ತೆಗಳು ಜನದಟ್ಟಣೆಯಿಂದ ಕೂಡಿದ್ದವು.
ಹೊಟೇಲ್‌ಗಳಲ್ಲಿ ಪಾರ್ಸೆಲ್ ಸೇವೆಗೆ ಅವಕಾಶ ಇದ್ದರೂ ನಷ್ಟದ ಭೀತಿಯಲ್ಲಿ ಯಾರೂ ಮುಂದೆ ಬರುತ್ತಿಲ್ಲ. ಹೈವೇ ಡಾಬಾಗಳು ಇನ್ನೆರಡು ದಿನಗಳಲ್ಲಿ ಓಪನ್ ಆಗಬಹುದು. ಅದೇ ಹೆಚ್ಚು ವಾಣಿಜ್ಯ ಮಳಿಗೆಗಳಿರುವ ಗಾರ್ಡನ್ ಏರಿಯಾ, ಗಾಂಧಿ ಬಜಾರ್‌ನಲ್ಲಿ ಜನರ ಓಡಾಟಕ್ಕೆ ಅವಕಾಶವಿಲ್ಲ. ಸಣ್ಣಪುಟ್ಟ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿರುವುದರಿಂದ ಓಪನ್ ಮಾಡುತ್ತಿಲ್ಲ. ಹೊಸ ಆದೇಶದ ನಂತರ ಜನರಲ್ಲಿ ಗೊಂದಲಗಳಿದ್ದು ಹಂತಹಂತವಾಗಿ ಚಟುವಟಿಕೆ ಆರಂಭಗೊಳ್ಳುವ ನಿರೀಕ್ಷೆ ಇದೆ.
ಜನರಲ್ಲಿ ಗೊಂದಲ ಜಿಲ್ಲೆ ಒಳಗೆ ಓಡಾಡಲು ಯಾರಿಗೂ ಪಾಸ್ ವ್ಯವಸ್ಥೆ ಮಾಡದ ಕಾರಣ ಕೆಲ ಸಾರ್ವಜನಿಕರು ಗೊಂದಲದಲ್ಲಿದ್ದಾರೆ. ಕೃಷಿ ಸಂಬಂಧಿತ ವಾಣಿಜ್ಯ ಮಳಿಗೆ ಸಿಬ್ಬಂದಿ ಯಾವ ಕಾರ್ಡ್ ಇಲ್ಲದೇ ಓಡಾಡಲು ಹಿಂಜರಿಯುತ್ತಿದ್ದಾರೆ. ಪ್ರಮುಖ ಸರ್ಕಲ್‌ಗಳಲ್ಲಿ ಚೆಕ್‌ಪೋಸ್ಟ್ ಮಾಡಿರುವುದರಿಂದ ತಪಾಸಣೆ ಕಡ್ಡಾಯವಾಗಿದೆ. ಪ್ರತಿ ಹಂತದಲ್ಲೂ ವಿಚಾರಣೆಗೆ ಒಳಗಾಗುವುದು ಇರಿಸು ಮುರಿಸು ಉಂಟು ಮಾಡುತ್ತಿದೆ.
ಕಟ್ಟಡ ನಿರ್ಮಾಣ ಸ್ಪೀಡ್ ಮಳೆಗಾಲ ಆರಂಭದೊಳಗೆ ಮನೆ ಕಾಮಗಾರಿ ಮುಗಿಸಲು ಅನೇಕರು ಮುಂದಾಗಿದ್ದರು. ಲಾಕ್‌ಡೌನ್ ಕಾರಣ
ಸಾಧ್ಯವಾಗಿರಲಿಲ್ಲ. ಬಸವ ಜಯಂತಿಗೆ ಸಿದ್ಧತೆ ಮಾಡಿಕೊಂಡವರು ಮುಂದಿನ ಶುಭ ದಿನಕ್ಕೆ ಯೋಚನೆ ಮಾಡುತ್ತಿದ್ದಾರೆ. ಒಳ ರಸ್ತೆಗಳಲ್ಲಿ ಈಗಾಗಲೇ ಕಡಿಮೆ ಕಾರ್ಮಿಕರಿಟ್ಟುಕೊಂಡು ನಡೆಸುತ್ತಿದ್ದ ಕಾಮಗಾರಿ ಈಗ ಗರಿಗೆದರಿದೆ.