ಶಿವಮೊಗ್ಗ: ಹನುಮನ ಧ್ವಜ ವಿಚಾರದಲ್ಲಿ ಮನಸಿಗೆ ಬಂದಹಾಗೆ ತೀರ್ಮಾನ ಮಾಡುವುದು ಸರಿಯಲ್ಲ. ಬಿಜೆಪಿಯವರು ಇಂತವನ್ನೆಲ್ಲಾ ಹುಡುಕುತ್ತಾರೆ. ಬೇರೆ ಕಡೆ ಇರುವ ರಾಮನು ರಾಮನಲ್ಲವೇ? ಆರ್. ಅಶೋಕ್ ಗೆ ಮಾನ ಮರ್ಯಾದೆ ಇಲ್ಲ. ಬಿಜೆಪಿಯವರು ರಾಮನನ್ನು ಬೀದಿಗೆ ತಂದಿದ್ದಾರೆ. ಅಯೋಧ್ಯೆಗೆ ಹೋದವರೆಲ್ಲ ಪವಿತ್ರರು ಎಂದರ್ಥನಾ ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಸಾಧನೆ ಏನು ಎಂದು ಹೇಳಲಿ. ಬಿಜೆಪಿ ಅವರಿಗೆ ಮಾಡಲು ಕೆಲಸವಿಲ್ಲ. ಅವರು ಪ್ರತಿಭಟನೆ ಮಾಡಿಕೊಳ್ಳಲಿ ಬಿಡಿ. ಪ್ರತಿಭಟನೆ ಮಾಡುವವರನ್ನು ನಿಲ್ಲಿಸಲು ಬರುವುದಿಲ್ಲ ಎಂದರು.
ಜಾತಿ ಗಣತಿ ಸಮೀಕ್ಷೆ ಸ್ವೀಕರಿಸುತ್ತೇವೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಹೇಳಿಕೆಗೆ ನಾವು ಬದ್ಧ. ಈ ಬಗ್ಗೆ ಪರ ವಿರೋಧ ಇರುವುದು ಚರ್ಚೆಯಾಗಬೇಕು. ಕಾಂಗ್ರೆಸ್ ಪಕ್ಷ ಒಂದು ಒಳ್ಳೆ ತೀರ್ಮಾನ ಮಾಡುತ್ತಾರೆ ಎಂದರು.
ರಾಷ್ಟ್ರಪತಿ ಅವರಿಗೆ ಏಕವಚನದಲ್ಲಿ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸ್ವಾಭಾವಿಕವಾಗಿ ಹಳ್ಳಿ ಭಾಷೆಯದು. ಮಾಧ್ಯಮದಲ್ಲಿ ಈ ತರಹ ತೋರಿಸುವುದು ಬೇಡ. ಅವಳು ಎಂದ ತಕ್ಷಣ ಕೆಟ್ಟ ದೃಷ್ಟಿಯಿಂದ ನೋಡುವುದಲ್ಲ. ಅವರ ಕಾಳಜಿ ಬಗ್ಗೆ ಯಾರು ನೋಡಲ್ಲ. ಅವಳು ಎಂದಿದಕ್ಕೆ ನಾನೇ ಕ್ಷಮೆ ಕೇಳುತ್ತೇನೆ. ಹಾಗಾದರೆ ಆ ಕಾಳಜಿಗೆ ಯಾರು ಉತ್ತರ ಕೊಡುತ್ತಾರೆ. ಪಾರ್ಲಿಮೆಂಟ್ ಭವನ ಉದ್ಘಾಟನೆಗೆ, ಅಯೋಧ್ಯೆಗೆ ಯಾಕೆ ಕರಿಯಲಿಲ್ಲ. ರಾಮನ ಹೆಸರಿನಲ್ಲಿ ರಾಜಕಾರಣ ಮಾಡಬಾರದು ಎಂದರು.
ಇದನ್ನೂ ಓದಿ:Belthangady: ಕುಕ್ಕೇಡಿ ಸಮೀಪ ಸುಡುಮದ್ದು ಸ್ಫೋಟ ಪ್ರಕರಣ; ಮಾಲೀಕ ಸೈಯದ್ ಬಶೀರ್ ವಶಕ್ಕೆ
ಸುಮಲತಾ ಪಕ್ಷ ಸೇರ್ಪಡೆ ವಿಚಾರಕ್ಕೆ ಮಾತನಾಡಿದ ಮಧು ಬಂಗಾರಪ್ಪ, ಇದು ಪಕ್ಷದಲ್ಲಿ ತೀರ್ಮಾನವಾಗುತ್ತದೆ. ಸುಮಲತಾ ಸೇರ್ಪಡೆ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದರು.
ರಾಘವೇಂದ್ರ ಗೆಲ್ಲಿಸಿ ಎನ್ನುವ ಶಾಮನೂರು ಹೇಳಿಕೆ ವಿಚಾರಕ್ಕೆ ಮಾತನಾಡಿ, ಅವರೇ ಬಂದು ಸರಿ ಮಾಡುತ್ತಾರೆ. ಹಿರಿಯರಾಗಿ ಆಶೀರ್ವಾದ ಮಾಡಿದ್ದಾರೆ. ಎಂ.ಬಿ.ಪಾಟೀಲ್ ಗೆ ಯಡಿಯೂರಪ್ಪನವರೂ ಹೇಳಿದ್ದರು. ನನಗೂ ಒಳ್ಳೆ ಕೆಲಸ ಮಾಡಿದ್ದಾರೆಂದು ಹೇಳಿದ್ದರು. ಶಿವಮೊಗ್ಗ ರಾಜಕೀಯದಲ್ಲಿ ಈ ಹೇಳಿಕೆ ಪರಿಣಾಮ ಬೀರುವುದಿಲ್ಲ. ಆ ಹೇಳಿಕೆಯಿಂದ ನಮಗೆ ನಷ್ಟವಾಗುವುದಿಲ್ಲ ಎಂದರು.