ಶಿವಮೊಗ್ಗ: ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಎಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಈಗಾಗಲೇ ವಿತರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಜನ ನೂಕುನುಗ್ಗಲಾಗದಂತೆ ಸಾಮಾಜಿಕ ಅಂತರ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದ್ದಾರೆ.
ಪ್ರತಿಯೊಂದು ನ್ಯಾಯಬೆಲೆ ಅಂಗಡಿಗಳ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗುರುತು ಮಾಡುವಂತೆ ಸೂಚನೆ ನೀಡಲಾಗಿದೆ. ಅಂಗಡಿಗಳ ಎದುರು ಬಾಕ್ಸ್ ಗುರುತು ಹಾಕಲಾಗಿದೆ. ಜನ ಕಡ್ಡಾಯವಾಗಿ ನಿಗದಿತ ಚೌಕದೊಳಗೆ ನಿಂತು ಸರತಿ ಸಾಲಿನಲ್ಲಿ ಪಡಿತರ ಪಡೆಯುವಂತೆ ಸೂಚನೆ ನೀಡಿದ್ದಾರೆ. ಕೆಲವು ಕಡೆ ಜನ ನಿಗದಿತ ಗುರುತಿನ ಒಳಗೆ ನಿಲ್ಲದೆ, ಗುಂಪಾಗಿ ನಿಲ್ಲುತ್ತಿರುವ ಬಗ್ಗೆ ದೂರುಗಳು ಬಂದಿವೆ. ಪ್ರತಿಯೊಂದು ಕಡೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವುದನ್ನು ಖಾತ್ರಿಪಡಿಸಬೇಕು. ಗ್ರಾಮೀಣ ಮಟ್ಟದಲ್ಲಿ ಪಿಡಿಒಗಳು, ನಗರ ಮಟ್ಟದಲ್ಲಿ ಆಹಾರ ನಿರೀಕ್ಷಕರು, ಮಹಾನಗರ ಪಾಲಿಕೆ ಸಿಬ್ಬಂದಿ, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿಗಳ ಮಾಲಿಕರಿಗೆ ಎಚ್ಚರಿಕೆ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.
ಜಿಲ್ಲೆಯ ಶೇ 94ರಷ್ಟು ಜನರಿಗೆ ಪಡಿತರ: ಜಿಲ್ಲೆಯಲ್ಲಿ 3,55,232 ಬಿಪಿಎಲ್ ಕಾರ್ಡುಗಳು, 37,912 ಅಂತ್ಯೋದಯ ಕಾರ್ಡ್‌ಗಳಿವೆ. 3.93 ಲಕ್ಷ ಕುಟುಂಬಗಳು ಪಡಿತರ ವ್ಯವಸ್ಥೆ ಅಡಿ ಬರುತ್ತವೆ. 2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಇರುವುದು 4.6 ಲಕ್ಷ ಕುಟುಂಬಗಳು ಅಂದರೆ ಜಿಲ್ಲೆಯ ಶೇ. 94ರಷ್ಟು ಜನ ಬಡವರು. ಎಲ್ಲರಿಗೂ ಈ ಬಾರಿ ಎರಡು ತಿಂಗಳ ಪಡಿತರ ದೊರೆಯುತ್ತಿದೆ. ಜಿಲ್ಲೆಯಲ್ಲಿ 567 ನ್ಯಾಯಬೆಲೆ ಅಂಗಡಿಗಳಿವೆ. ಸಹಕಾರ ಸಂಘಗಳೂ ಸೇರಿ ಪಡಿತರ ವಿತರಿಸುವ ಪ್ರತಿಯೊಂದು ಅಂಗಡಿಗೂ ಕನಿಷ್ಠ 300 ರಿಂದ 2,500 ಪಡಿತರ ಚೀಟಿದಾರರಿಗೆ ಪಡಿತರ ವಿತರಿಸುವ ಜವಾಬ್ದಾರಿ ನೀಡಲಾಗಿದೆ. ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳು ಅತಿ ಹೆಚ್ಚು ಪಡಿತರ ವಿತರಿಸುತ್ತವೆ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ತಲಾ 10 ಕೆ.ಜಿ.ಅಕ್ಕಿ, 4 ಕೆ.ಜಿ. ಗೋಧಿ ನೀಡಲಾಗುತ್ತಿದೆ. ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ 70 ಕೆ.ಜಿ.ಅಕ್ಕಿ ವಿತರಿಸಲಾಗುತ್ತಿದೆ. ಎಪಿಎಲ್ ಹೊಂದಿರುವ ಏಕ ಸದಸ್ಯ ಕಾರ್ಡಿಗೆ 10
ಕೆ.ಜಿ. ಅಕ್ಕಿ, ಇಬ್ಬರಿಗಿಂತ ಹೆಚ್ಚಿನ ಸದಸ್ಯರಿರುವ ಕಾರ್ಡುದಾರರಿಗೆ 20 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ.