ಶಿವಮೊಗ್ಗ: ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರ. ರಾಷ್ಟ್ರ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಮಕ್ಕಳನ್ನು ಪುಸ್ತಕದ ಹುಳುಗಳನ್ನಾಗಿ ಮಾಡದೆ ಅವರಿಗೆ ಸಮಾಜದ ಆಗು-ಹೋಗುಗಳ ಅರಿವನ್ನು ಮೂಡಿಸುವ ಕೆಲಸವಾಗಬೇಕಾಗಿದೆ ಎಂದು ತಹಶೀಲ್ದಾರ್ ಬಿ.ಎನ್. ಗಿರೀಶ್ ತಿಳಿಸಿದರು.
ಶನಿವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಸಂಸ್ಥೆ ಶಿವಮೊಗ್ಗ ಮತ್ತು ಸೈಕಲ್ ಕ್ಲಬ್ ಸಹಕಾರದೊಂದಿಗೆ ಏರ್ಪಡಿಸಲಾಗಿದ್ದ ಸಂಸ್ಥಾಪಕರ ದಿನಾಚರಣೆ ಹಾಗೂ ಸೈಕಲ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎನ್ನುವಂತೆ ಬಾಲ್ಯದಿಂದಲೇ ಮಕ್ಕಳಲ್ಲಿ ಸ್ನೇಹ, ಸಹೋದರತ್ವ, ಹೊಂದಾಣಿಕೆ ಮತ್ತು ಆತ್ಮವಿಶ್ವಾಸಗಳನ್ನು ಬೆಳೆಸಬೇಕು. ಆದರ್ಶ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಮಕ್ಕಳಿಗೆ ಬೋಧಿ ಸುವ ಮೂಲಕ ಮಕ್ಕಳಲ್ಲಿ ದೇಶ ಪ್ರೇಮ ಬೆಳೆಸಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪ್ರಾಮುಖ್ಯತೆ ನೀಡುತ್ತಿರುವುದು ಸಂತಸದ ಸಂಗತಿ ಎಂದರು.
ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತ ಎಚ್.ಡಿ. ರಮೇಶ ಶಾಸ್ತ್ರಿ ಮಾತನಾಡಿ, ಲಾರ್ಡ್ ಹಾಗೂ ಸ್ಕೌಟ್ಸ್- ಗೈಡ್ಸ್ ಸಂಸ್ಥೆಯ ಸಂಸ್ಥಾಪಕಿ ಲೇಡಿ ಬೇಡನ್ ಪೊವೆಲ್ ಜನ್ಮದಿನ ಮತ್ತು ವಿಶ್ವಚಿಂತನಾ ದಿನಾ ಹಾಗೂ ವಿಶ್ವಭಾತೃತ್ವ ದಿನಾಚರಣೆಯನ್ನು ವಿಶೇಷವಾಗಿ ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಸೈಕಲ್ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಜಿಲ್ಲಾ ಖಜಾಂಚಿ ಚುಡಾಮಣಿ ಇ. ಪವಾರ್, ಜಿಲ್ಲಾ ಕಾರ್ಯದರ್ಶಿ ಕೆ.ಪಿ. ಬಿಂದು ಕುಮಾರ್, ಜಿಲ್ಲಾ ಸಹ ಕಾರ್ಯದರ್ಶಿ ವೈ.ಆರ್. ವೀರೇಶಪ್ಪ, ಎ.ಎಸ್.ಒ.ಸಿ. ಭಾರತಿ ಡಾಯಸ, ಡಿ.ಟಿ.ಸಿ (ಗೈ) ಕಾತ್ಯಾಯಿನಿ ಸಿ.ಎಸ್, ಡಿ.ಟಿ.ಸಿ. (ಸ್ಕೌ) ಎಚ್. ಶಿವಶಂಕರ್, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಡಿ.ಎನ್. ನೂರ್ ಅಹಮ್ಮದ್, ಸಹ ಕಾರ್ಯದರ್ಶಿ ಎ.ವಿ. ರಾಜೇಶ್, 60 ಸ್ಕೌಟ್ಸ್ ಮತ್ತು ಗೈಡ್ಸ್‌ಗಳು, ರೇಂಜರ್, ಸ್ಕೌಟರ್ ಮತ್ತು ಗೈಡರ್ಗಳು ಇದ್ದರು.
ನಂತರ ಸೈಕಲ್ ಜಾಥಾವು ಜಿಲ್ಲಾ ಸ್ಕೌಟ್ ಭವನದಿಂದ ಹೊರಟು ನಗರದ ಪ್ರಮುಖ ಬೀದಿಗಳಾದ ಕೋಟೆ ಪೊಲೀಸ್ ಠಾಣೆ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಅಮೀರ್ ಅಹ್ಮದ್ ವೃತ್ತ, ನೆಹರು ರಸ್ತೆ, ಗೋಪಿ ಸರ್ಕಲ್, ಮಹಾವೀರ ಸರ್ಕಲ್, ಬಸವೇಶ್ವರ ಸರ್ಕಲ್ ಗಳಲ್ಲಿ ಲಾರ್ಡ್ ಮತ್ತು ಲೇಡಿ ಬೇಡನ್ ಪೊವೆಲ್ ಅವರ ಸಂದೇಶವನ್ನು ಸಾರಲಾಯಿತು.