ಶಿವಮೊಗ್ಗ: ಲಾಕ್‌ಡೌನ್ ಪರಿಸ್ಥಿತಿ ಮಧ್ಯೆ ಧೃತಿಗೆಡದೆ ತಾನು ಬೆಳೆದ ತರಕಾರಿಗಳನ್ನು ನೇರವಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಿ ಶಿಕಾರಿಪುರ ತಾಲೂಕಿನ ಸಹಸ್ರವಳ್ಳಿ ಗ್ರಾಮದ ರೈತ ದುರ್ಗಪ್ಪ ಅಂಗಡಿ ಅವರು ಲಾಭ ಕಂಡುಕೊಂಡಿದ್ದಾರೆ.
ದುರ್ಗಪ್ಪ ಅಂಗಡಿ ಅವರು ಕಳೆದ ಕೆಲವು ವರ್ಷಗಳಿಂದ ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಮಾರ್ಗದರ್ಶನದಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತಮ್ಮ 2 ಎಕರೆ ಪ್ರದೇಶದಲ್ಲಿ, ಕೋಳಿ ಸಾಕಣೆ, ಜೇನು ಸಾಕಣೆ, ಕೃಷಿ ಹೊಂಡ, ಎರೆಹುಳುಗೊಬ್ಬರ ತಯಾರಿಕೆ ಘಟಕಗಳನ್ನು ಸ್ಥಾಪಿಸಿಕೊಂಡಿದ್ದಾರೆ.
ತೋಟಗಾರಿಕೆ ಬೆಳೆಗಳಾದ ಬಾಳೆ ಮತ್ತು ಅಡಕೆಯ ಬೆಳೆಗಳ ಮಧ್ಯೆ ಅಂತರ ಬೆಳೆಯಾಗಿ ತರಕಾರಿ ಬೆಳೆಗಳಾದ ತೊಂಡೆಕಾಯಿ, ನುಗ್ಗೆಕಾಯಿ, ಸೌತೆಕಾಯಿ, ಟೊಮ್ಯಾಟೋ, ಬದನೆಕಾಯಿ ಮತ್ತು ಬೀನ್ಸ್ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಆದರೆ ಲಾಕ್‌ಡೌನ್ ಅವ ಧಿಯಲ್ಲಿ ತಾವು ಬೆಳೆದ ತರಕಾರಿಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಕಂಗಾಲಾದ ದುರ್ಗಪ್ಪ ಅವರಿಗೆ ತರಕಾರಿ ಕೊಯ್ಲಿಗೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಸ್ಥಳೀಯ ಮಾರುಕಟ್ಟೆಯನ್ನು ಬಳಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿ ಧೈರ್ಯ ತುಂಬಲಾಯಿತು ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಬಿ.ಸಿ.ಹನುಮಂತಸ್ವಾಮಿ ಅವರು ತಿಳಿಸಿದ್ದಾರೆ.
ಬಳಿಕ ದುರ್ಗಪ್ಪ ಅವರು ಪರಿಚಯಸ್ಥ ಹಾಗೂ ಆರೋಗ್ಯವಂತ ಇಬ್ಬರು ಕೃಷಿ ಕಾರ್ಮಿಕರನ್ನು ನೇಮಿಸಿಕೊಂಡು ತರಕಾರಿಗಳನ್ನು ಕೊಯ್ಲು ಮಾಡಿದ್ದಾರೆ. ಅಲ್ಲದೆ, ತಾವು ತರಕಾರಿಗಳನ್ನು ಸಾಗಿಸುವ ವಾಹನ, ಗೋಣಿಚೀಲ ಮತ್ತು ಉಪಯೋಗಿಸುವ ವಸ್ತುಗಳನ್ನು ಸೋಂಕು ನಿವಾರಕ ರಾಸಾಯನಿಕಗಳಿಂದ ಶುದ್ಧಗೊಳಿಸಿಕೊಂಡು ತರಕಾರಿಗಳನ್ನು ಸಂಗ್ರಹಣೆ ಮಾಡಿಕೊಂಡಿದ್ದಾರೆ. ದೂರದ ಗ್ರಾಮಗಳಿಗೆ ಸಾಗಾಟಕ್ಕೆ ಅವಕಾಶ ಇಲ್ಲದೆ ಇದ್ದುದ್ದರಿಂದ ತಾವೇ ಖುದ್ದು ತರಕಾರಿಗಳನ್ನು ಸ್ಥಳೀಯವಾಗಿ ಮನೆ- ಮನೆಗೆ ಹೋಗಿ ತರಕಾರಿಗಳನ್ನು ಮಾರಾಟ ಮಾಡಿದ್ದಾರೆ.
ನೇರ ಮಾರುಕಟ್ಟೆಯಿಂದ ಅವರ ಮುಖದಲ್ಲಿ ಮಂದಹಾಸ ಬೀರುವ ಹಾಗೆ ಮಾಡಿದೆ. ರೈತ ಉತ್ಪಾದಕರ ಸಂಘ ಹಾಗೂ ಹಾಪ್‌ಕಾಮ್ಸ್‌ಗಳ ಮುಖಾಂತರ ಜೊತೆಗೆ ಸ್ಥಳೀಯವಾಗಿಯೇ ಮಾರುಕಟ್ಟೆ ವ್ಯವಸ್ಥೆ ಕಂಡುಕೊಂಡ ಅವರು ಹೇಳುವ ಪ್ರಕಾರ 20 ರೂ.ನಂತೆ 20 ಕ್ವಿಂಟಾಲ್ ತೊಂಡೆಕಾಯಿ, 25 ರೂ.ನಂತೆ 5 ಕ್ವಿಂಟಾಲ್ ನುಗ್ಗೆಕಾಯಿ, 20 ರೂ.ನಂತೆ 6 ಕ್ವಿಂಟಾಲ್ ಟೊಮ್ಯಾಟೊ, 30 ರೂ.ನಂತೆ 10 ಕ್ವಿಂಟಾಲ್ ಬೀನ್ಸ್ ಮಾರಾಟ ಮಾಡಿರುತ್ತಾರೆ. ಇದರಿಂದ ಒಟ್ಟು 54,500/- ರೂಪಾಯಿ ನಿವ್ವಳ ಆದಾಯ ಬಂದಿದೆ. ಲಾಕ್‌ಡೌನ್ ಮಧ್ಯೆಯೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದ ವ್ಯಾಪ್ತಿಯಲ್ಲಿ ಬರುವ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಂದ ಮಾಹಿತಿ ಪಡೆದು ಮಾರಾಟ ಮಾಡಲು ಸೂಕ್ತ ಮತ್ತು ಪರ್ಯಾಯ ದಾರಿಯ ಬಗ್ಗೆ ಚಿಂತಿಸದಿದ್ದರೆ ತರಕಾರಿಗಳು ಹೊಲದಲ್ಲಿ ಕೊಳೆತು ನಾರುತ್ತಿದ್ದವು. ಈಗ ತಾವು ಹಾಕಿದ ಬಂಡವಾಳವೂ ಬಂದಿದೆ. ನಾವು ಹೊಲಕ್ಕೆ ಹಾಕಿದ ಪರಿಶ್ರಮಕ್ಕೆ ಫಲ ಸಿಕ್ಕಿದೆ ಎಂದು ಅವರು ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ.