ಶಿವಮೊಗ್ಗ: ಜಿಲ್ಲೆಯಲ್ಲಿ ಮಂಗಳವಾರ 20 ಜನರಿಗೆ ಪ್ರಾಥಮಿಕ ಸಂಪರ್ಕದಿಂದ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು 33 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 318ಕ್ಕೆ ಏರಿಕೆಯಾಗಿದೆ.
ನಗರವೊಂದರಲ್ಲಿಯೇ 19, ಶಿಕಾರಿಪುರ 8, ಹೊಸನಗರ 3, ಭದ್ರಾವತಿ, ಸಾಗರ ಹಾಗೂ ಶಿವಮೊಗ್ಗ ಗ್ರಾಮಾಂತರದಲ್ಲಿ ತಲಾ 1 ಪ್ರಕರಣಗಳು ದೃಢಪಟ್ಟಿವೆ. ಹಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ವಿನೋಬನಗರದ ಹುಡ್ಕೊ ಕಾಲೊನಿ ನಿವಾಸಿಯ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಕೋವಿಡ್ ಇರುವುದು ದೃಢಪಟ್ಟಿದೆ.
ಬಸ್ ನಿಲ್ದಾಣದ ಬಳಿಯ ಪಿಡಬ್ಲ್ಯೂಡಿ ಕ್ವಾರ್ಟರ್ಸ್ ನಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ಪತ್ತೆಯಾಗಿತ್ತು. ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ವಿನೋಬನಗರದ ನಿವಾಸಿಗೆ ಪಾಸಿಟಿವ್ ಬಂದಿದೆ. ರವಿ ವರ್ಮ ಬೀದಿಯ ಒಂದೇ ಕುಟುಂಬದ ನಾಲ್ವರಿಗೆ ಮತ್ತು ಅದೇ ಬೀದಿಯ ಮತ್ತೊಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಟ್ರಾವೆಲ್ ಹಿಸ್ಟರಿ ಇಲ್ಲದ ಅಶೋಕ ರಸ್ತೆಯ ಆಟೊ ಚಾಲಕರೊಬ್ಬರಿಗೆ ಸೋಂಕು ತಗಲಿದೆ. ಇವರಿಗೂ ಅನೇಕ ದಿನಗಳಿಂದ ಶೀತ ಹಾಗೂ ಜ್ವರವಿತ್ತು. ದಕ್ಷಿಣ ಆಫ್ರಿಕಾದಿಂದ ಶಿವಮೊಗ್ಗಕ್ಕೆ ಬಂದಿದ್ದ ಸದಾಶಿವಪುರದ ಹಕ್ಕಿಪಿಕ್ಕಿ ಕ್ಯಾಂಪ್ ನಿವಾಸಿಗೂ ಕೋವಿಡ್ ಸೋಂಕು ತಗಲಿದೆ. ಅವರು ಜೂ. 20ರಂದು ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಿಂದ ಆಗಮಿಸುವಾಗ ಹೈದರಾಬಾದ್‌ನಲ್ಲಿ ಕ್ವಾರಂಟೈನ್ ಮುಗಿಸಿಕೊಂಡು ಶಿವಮೊಗ್ಗಕ್ಕೆ ಜೂ. 29ರಂದು ಬಂದಿದ್ದರು ಎಂದು ತಿಳಿದುಬಂದಿದೆ. ಹಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಓಲ್ಡ್ ಬಾರ್ ಲೈನ್ ನಿವಾಸಿಯೊಬ್ಬರಿಗೆ ಕೋವಿಡ್ ಸೋಂಕು ತಗುಲಿದೆ.