ಶಿವಮೊಗ್ಗ: ಕೋವಿಡ್ ನಿಂದ ಜನರನ್ನು ರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೂಚನೆಯಂತೆ ಲಾಕ್‌ಡೌನ್ ಘೋಷಿಸಿದ್ದು, ಆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಲಾಕ್‌ಡೌನ್ ಸಡಿಲಗೊಳಿಸಲಾಗಿದೆ ಎಂದು ತಪ್ಪು ಸಂದೇಶ ಹರಿದಾಡುತ್ತಿದ್ದು, ಇದನ್ನೆಲ್ಲ ಜನ ನಂಬದೆ ಸಹಕರಿಸುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದರು.
ಅವರು ಮಂಗಳವಾರ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಗೋಪಿ ವೃತ್ತದಲ್ಲಿ ಜನಜಾಗೃತಿಗಾಗಿ ಏರ್ಪಡಿಸಲಾಗಿದ್ದ ಬೀದಿನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಕೋವಿಡ್ ಸೋಂಕಿನಿಂದ ಸ್ವಯಂ ಸಂರಕ್ಷಿಸಿಕೊಳ್ಳಬಹುದಾದ ವಿಧಾನಗಳು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ನಾಟಕಗಳ ಮೂಲಕ ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಯಾವುದೇ ಸೋಂಕು ಬರುವ ಮುನ್ನ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಅನುಕೂಲಕರ ಎಂದರು.
ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸಂಬಂಧಿತ ವಿವಿಧ ಇಲಾಖೆ ಅಧಿಕಾರಿ-ಸಿಬ್ಬಂದಿ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಮಾನ್ಯ ಮುಖ್ಯಮಂತ್ರಿಗಳು ಕಾಲಕಾಲಕ್ಕೆ ನೀಡಿದ ಸೂಚನೆಗಳಿಂದಾಗಿ ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ದಾಖಲಾಗಿಲ್ಲ. ಇದರಿಂದಾಗಿ ಶಿವಮೊಗ್ಗ ಜಿಲ್ಲೆ ಹಸಿರು ವಲಯದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ಅದಕ್ಕಾಗಿ ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು ಎಂದರು.
ಪ್ರಸ್ತುತ ಲಾಕ್‌ಡೌನ್ ಇದ್ದಾಗ್ಯೂ ಜನಸಾಮಾನ್ಯರ ಅನುಕೂಲಕ್ಕೆ ತೊಂದರೆಯಾಗದಿರಲೆಂದು ಜನರು ತಮ್ಮ ಅಗತ್ಯ ವಸ್ತುಗಳ ಖರೀದಿಸಲು, ಬ್ಯಾಂಕುಗಳಿಗೆ ತೆರಳಲು, ಸೀಮಿತ ಅವಧಿಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ವ್ಯವಹಾರಕ್ಕಾಗಿ ಅವಕಾಶ ಮಾಡಿಕೊಡಲಾಗಿದೆ. ಕಚೇರಿ ಸಿಬ್ಬಂದಿ ಕೂಡ ಕಚೇರಿ ಕೆಲಸದ ನಂತರ ನೇರವಾಗಿ ಮನೆಗೆ ತೆರಳುವಂತೆ ಸೂಚಿಸಲಾಗಿದೆ. ಆದರೆ ಸಾರ್ವಜನಿಕ ವಲಯದಲ್ಲಿ ಲಾಕ್‌ಡೌನ್ ಸಡಿಲಗೊಂಡು ಜನರ ಅನುಕೂಲಕ್ಕೆ ತಕ್ಕಂತೆ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂಬ ಬಗ್ಗೆ ತಪ್ಪು ಸಂದೇಶ ಹರಿದಾಡುತ್ತಿದೆ. ಇದು ಸರಿಯಲ್ಲ. ಲಾಕ್‌ಡೌನ್ ಸಡಿಲಗೊಳಿಸಿಲ್ಲ. ಅದು ಸರ್ಕಾರದ ಮುಂದಿನ ಆದೇಶದವರೆಗೆ ಮುಂದುವರೆಯಲಿದೆ. ನಿಯಮ ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಗಿಳಿದಲ್ಲಿ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದವರು ಎಚ್ಚರಿಸಿದ್ದಾರೆ.
ಅಗತ್ಯತೆಗಳಿಗಾಗಿ ನಗರದಲ್ಲಿ ಸಂಚರಿಸುವ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಮುಖಕ್ಕೆ ಮಾಸ್ಕ್ ಧರಿಸಬೇಕು. ಕೈಗವಸು ಹಾಕಿಕೊಳ್ಳುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು. ಕೃಷಿ ಚಟುವಟಿಕೆ, ರಸಗೊಬ್ಬರ-ಬೀಜಗಳ ಮಾರಾಟ ಮತ್ತು ಸಾಗಾಣಿಕೆಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಕೃಷಿಕರು ತಮ್ಮ ಕೃಷಿ ಉತ್ಪನ್ನಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಾರಾಟ ಮತ್ತು ಊರಿಂದೂರಿಗೆ ಸಾಗಾಟ ಮಾಡಬಹುದಾಗಿದೆ ಎಂದರು.
ಕೆಲಸವನ್ನರಸಿ ಶಿವಮೊಗ್ಗ ಜಿಲ್ಲೆಗೆ ಬಂದಿದ್ದ ಹೊರರಾಜ್ಯಗಳ 400ಕ್ಕೂ ಹೆಚ್ಚಿನ ಕಾರ್ಮಿಕರು ಇದ್ದು, ಅವರನ್ನು ಅವರ ಮೂಲಸ್ಥಳಕ್ಕೆ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ನಾಳೆಯೊಳಗಾಗಿ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ.ಶಾಂತರಾಜು ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿ-ಸಿಬ್ಬಂದಿ ಹಾಗೂ ಸ್ವಯಂ ಸೇವಾ ಸಂಸ್ಥೆಯ ಕಲಾವಿದರು ಭಾಗವಹಿಸಿದ್ದರು.