Advertisement
ಪೇಜಾವರ ಶ್ರೀಗಳು, ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಸೈನಿಕರು ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಜಿ. ಮಾದಪ್ಪನವರ ನಿಧನಕ್ಕೆ ಸಂತಾಪ ಸೂಚಿಸಿದ ನಂತರ ಸಭೆ ಆರಂಭವಾಯಿತು. ಸಭೆ ಆರಂಭಗೊಳ್ಳುತ್ತಿದ್ದಂತೆಯೇ ಸ್ಲಂ ಬೋರ್ಡ್ ನಿಂದ ನಿರ್ಮಿಸಲಾಗುತ್ತಿರುವ ಮನೆಗಳ ಯೋಜನೆ ವಿಳಂಬವಾಗುತ್ತಿದೆ ಎಂದು ಸದಸ್ಯ ಎಚ್.ಸಿ. ಯೋಗೀಶ್ ಮಾತು ಆರಂಭಿಸಿದರು.
650 ಮನೆಗಳನ್ನು ಆರು ತಿಂಗಳಲ್ಲಿ ನಿರ್ಮಿಸಿ ಕೊಡಬೇಕಿತ್ತು. ಆದರೆ, ಒಂದು ವರ್ಷವಾದರೂ
ಕೊಳೆಗೇರಿ ನಿವಾಸಿಗಳಿಗೆ ಗೃಹ ಭಾಗ್ಯ ದೊರೆತಿಲ್ಲ ಎಂದು ಪಾಲಿಕೆ ಪ್ರತಿಪಕ್ಷ ನಾಯಕ ರಮೇಶ್ ಹೆಗ್ಡೆ ಆರೋಪಿಸಿದರು.
Related Articles
Advertisement
ಬಿಜೆಪಿಯ ಶಂಕರ್ ಗನ್ನಿ ಮಾತನಾಡಿ, ಪೊಲೀಸರು ತಮ್ಮ ಕೆಲಸ ಮಾಡಿದ್ದಾರೆ. ಅದೂ ಅಲ್ಲದೆ ಈ ಪ್ರತಿಭಟನೆ ನಡೆದು ಒಂದು ತಿಂಗಳಾಗಿದೆ ಎಂದ ನಂತರ ಕಾಂಗ್ರೆಸ್ ಸದಸ್ಯರ ಮಾತುಗಳು ಏರು ಧ್ವನಿಯಲ್ಲಿ ನಡೆಯಿತು. ಮಾಜಿ ಉಪ ಮೇಯರ್ ಎಸ್.ಎನ್. ಚನ್ನಬಸಪ್ಪಮಧ್ಯ ಪ್ರವೇಶಿಸಿ ಮಾತನಾಡಲು ಯತ್ನಿಸಿದಾಗ ಸಭೆಯಲ್ಲಿ ಕೋಲಾಹಲ ಉಂಟಾಯಿತು. ಯಮುನಾ, ರಮೇಶ್ ಹೆಗ್ಡೆ ಸದನದ ಬಾವಿಗಿಳಿದರು. ವಿಳಂಬಕ್ಕೆ ಕಾರಣವೇನೆಂಬ ಬಗ್ಗೆ ಮಾಹಿತಿ ನೀಡುವಂತೆ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿ ಜ್ಯೋತಿ ಅವರಿಗೆ ಸೂಚಿಸಲಾಯಿತು. ಬ್ಯಾಂಕ್ ಸಾಲ ಸಿಗದ ಕಾರಣದಿಂದಾಗಿ ಮನೆ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಕೊಳೆಗೇರಿ ನಿವಾಸಿಗಳಿಗೆ ಮನೆ ನೀಡುವಾಗ ಈ ಬಗ್ಗೆ ಗೊತ್ತಿರಲಿಲ್ಲವೇ? ಟೆಂಡರ್‌ನಲ್ಲೊಂದು- ನಂತರ ಮತ್ತೂಂದು ಹೀಗೆ ಷರತ್ತುಗಳನ್ನು ಏಕೆ ಬದಲಾಗುತ್ತಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನ ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಬಡವರಿಗೆ ಸೂರು ನೀಡುವ ಬಗ್ಗೆ ಪಾಲಿಕೆ ಆಡಳಿತ ಪಕ್ಷ ಗಂಭೀರವಾಗಿ ಪರಿಗಣಿಸಬೇಕು. ಬಡವರು ಬಾಡಿಗೆ ಮನೆಯಲ್ಲಿದ್ದು, ಸಾವಿರಾರು ರೂ. ಖರ್ಚಾಗುತ್ತಿದೆ. ಸರಕಾರ ಕೂಡ ಈ ನಿಟ್ಟಿನಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು. ತಕ್ಷಣ ಎದ್ದು ನಿಂತು ಚನ್ನಬಸಪ್ಪ, “ಎಲ್ಲ
ವಿಷಯಗಳಲ್ಲೂ ರಾಜಕೀಯ ಎಳೆದು ತರಬೇಡಿ, ನಿಮ್ಮ ಹೋರಾಟ ಮತ್ತು ಕಾಳಜಿಯ ಬಗ್ಗೆ ನನಗೂ ಗೌರವವಿದೆ. ಈಗ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸೋಣ. ಸ್ಲಂ ಬೋರ್ಡ್ ಜತೆ ಕುಳಿತು ಚರ್ಚಿಸೋಣ ಎಂದು ಹೇಳಿದರು. ಮಧ್ಯ ಪ್ರವೇಶಿಸಿದ ಸದಸ್ಯ ನಾಗರಾಜ್ ಕಂಕಾರಿ, ರಮೇಶ್ ಹೆಗ್ಡೆ ಇತರರು ಮಾತನಾಡಿ, ಜಿಲ್ಲಾಧಿಕಾರಿಗಳು ಲೀಡ್ ಬ್ಯಾಂಕ್ ಮ್ಯಾನೇಜರ್, ಸ್ಲಂ ಬೋರ್ಡ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕೊಳೆಗೇರಿಯವರಿಗೆ ಮನೆ ನಿರ್ಮಿಸಿ ಕೊಡುವ ವಿಚಾರಕ್ಕೆ ತಾರ್ಕಿಕ ಅಂತ್ಯ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು. ಈ ಕುರಿತು ಸಚಿವರೊಂದಿಗೆ ಚರ್ಚಿಸಿ ನಿರ್ಣಯಕ್ಕೆ ಬರುವುದಾಗಿ ಮೇಯರ್ ಉತ್ತರಿಸಿದರು. ನಂತರ ಬಿಜೆಪಿ ಸದಸ್ಯ ಧೀರರಾಜ್ ಹೊನ್ನವಿಲೆ ಮಾತನಾಡಿ, ರಾಗಿಗುಡ್ಡದಲ್ಲಿ ನಡೆಯುತ್ತಿರುವ ಈ ಮನೆಗಳ ಕಾಮಗಾರಿ ನನ್ನ ಕ್ಷೇತ್ರದಲ್ಲಿ ನಡೆಯುತ್ತಿದೆ. ಒಂದೂವರೆ ವರ್ಷದಿಂದ ನಡೆಯುತ್ತಿರುವ ಕಾಮಗಾರಿಗೆ ಹಲವು ಅಡೆತಡೆಗಳು ಬಂದಾಗ ಸಚಿವ ಈಶ್ವರಪ್ಪನವರು ಬಗೆಹರಿಸಿದ್ದಾರೆ. ಆದರೆ ಬಡವರಿಗಾಗಿ ನಡೆಯಬೇಕಿದ್ದ ಸ್ಲಂಬೋರ್ಡ್ ನ ಮನೆಗಳು ಆದಷ್ಟು ಬೇಗ ಪೂರ್ಣಗೊಳ್ಳದೆ ಇರುವ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು. ಮೇಯರ್ ಸುವರ್ಣಾ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಇದ್ದರು.