Advertisement

28-29ರಂದು ಬ್ರಾಹ್ಮಣರ ರಾಜ್ಯ ಸಮ್ಮೇಳನ

04:52 PM Dec 12, 2019 | Naveen |

ಶಿವಮೊಗ್ಗ: ಕುಂದಾಪುರದಲ್ಲಿ ಡಿ.28 ಮತ್ತು 29 ರಂದು ನಡೆಯಲಿರುವ ಬ್ರಾಹ್ಮಣರ ರಾಜ್ಯ ಸಮ್ಮೇಳನದ ಮೂಲಕ ಸಮುದಾಯಕ್ಕೆ ಆಗಬೇಕಾಗಿರುವ ಕೆಲಸಗಳ ಬಗ್ಗೆ ಸರ್ಕಾರದ ಮುಂದೆ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಎನ್‌.ವೆಂಕಟನಾರಾಯಣ ಹೇಳಿದರು.

Advertisement

ಡಿ. 28 ಮತ್ತು 29ರಂದು ಕುಂದಾಪುರದಲ್ಲಿ ನಡೆಯಲಿರುವ 10ನೇ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನದ ಸಿದ್ಧತೆಯ ಅಂಗವಾಗಿ ನಗರದ ಶ್ರೀ ಗಾಯತ್ರಿ ದೇವಸ್ಥಾನ ಸಭಾಭವನದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ಆಯೋಜಿಸಿದ್ದ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಾಹ್ಮಣ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಬೇಕೆಂಬುದು ಸೇರಿದಂತೆ ಹಲವು ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದಿಡಲಾಗುವುದು ಎಂದರು. ಈ ಹಿಂದೆ ರಾಜ್ಯದಲ್ಲಿದ್ದ ಸಮ್ಮಿಶ್ರ ಸರ್ಕಾರ ಬ್ರಾಹ್ಮಣ ಮಂಡಳಿಯನ್ನು ಸ್ಥಾಪಿಸುವ ಮೂಲಕ ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ಚಾಲನೆ ನೀಡಿತ್ತು. ನಂತರ ಬಂದ ಬಿಜೆಪಿ ಸರ್ಕಾರ ಈ ಮಂಡಳಿಯನ್ನು ವಿಸರ್ಜಿಸಿದೆ.

ಈಗ ಸರ್ಕಾರ ಸದೃಢವಾಗಿದ್ದು ಕೂಡಲೇ ಮಂಡಳಿಯನ್ನು ಪುನರ್‌ ಸ್ಥಾಪಿಸಬೇಕು. ಪದಾಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಅವರು ಆಗ್ರಹಿಸಿದರು. ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10ರಷ್ಟು ಮೀಸಲಾತಿ ಘೋಷಿಸಿದೆ. ಇತರ ರಾಜ್ಯಗಳಲ್ಲಿ ಇದು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿದ್ದರೂ ರಾಜ್ಯದಲ್ಲಿ ಜಾರಿಗೆ ಬಂದಿಲ್ಲ. ಸೌಲಭ್ಯವನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಇತರ ಜಾತಿಗಳಿಗೆ ಜಾತಿ ಪ್ರಮಾಣ ಪತ್ರ ನೀಡುತ್ತಿದ್ದರೂ ಬ್ರಾಹ್ಮಣರಿಗೆ ಮಾತ್ರ ಅದು ಲಭ್ಯವಾಗುತ್ತಿಲ್ಲ. ಮೀಸಲಾತಿ ಮಾತ್ರವಲ್ಲದೆ ಇತರ ಸೌಲಭ್ಯಗಳನ್ನು ಪಡೆಯಲು ಜಾತಿ ಪ್ರಮಾಣ ಪತ್ರ ಅಗತ್ಯವಾಗಿದ್ದು ಸರ್ಕಾರ ಬ್ರಾಹ್ಮಣರಿಗೂ ಅದನ್ನು ನೀಡುವತ್ತ ಗಮನ ಹರಿಸಬೇಕು. ಶಿಕ್ಷಣ ಸಂಸ್ಥೆ ಹಾಗೂ ಸಮುದಾಯದ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯಕ್ಕೆ ಸರ್ಕಾರ ನೆರವು ನೀಡಬೇಕು ಎಂದು ಆಗ್ರಹಿಸಿದರು.

Advertisement

ಮಹಾಸಭಾ ಹಿರಿಯ ಉಪಾಧ್ಯಕ್ಷ ಲಕ್ಷ್ಮೀ ಕಾಂತ್‌ ಮಾತನಾಡಿ, ಸಣ್ಣಪುಟ್ಟ ತಪ್ಪು ಹಾಗೂ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಮುನ್ನಡೆದರೆ ಸಂಘಟನೆ ಇನ್ನಷ್ಟು ಬಲಗೊಳ್ಳುತ್ತದೆ. ಇದರಿಂದ ಬ್ರಾಹ್ಮಣ ಸಮುದಾಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಮುದಾಯದ ಪ್ರತಿಯೊಬ್ಬರೂ ಸಮಾಜದ ಅಭಿವೃದ್ಧಿಗೆ ಕೈ ಜೋಡಿಸಬೇಕು. ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.

ಮಹಾಸಭಾ ಉಪಾಧ್ಯಕ್ಷ ಅಬಸೆ ದಿನೇಶ್‌ ಕುಮಾರ್‌ ಜೋಶಿ ಮಾತನಾಡಿ, ಬ್ರಾಹ್ಮಣ ಸಮಾಜ ವೈಯಕ್ತಿಕ ಹಿತಾಸಕ್ತಿ ಬಗ್ಗೆ ಚಿಂತನೆ ಮಾಡುವುದಿಲ್ಲ. ರಾಷ್ಟ್ರ, ರಾಜ್ಯ ಹಾಗೂ ಇತರೆ ಎಲ್ಲ ಸಮಾಜದ ಶ್ರೇಯೋಭಿವೃದ್ಧಿ ಆಗಬೇಕೆಂಬ ಉದ್ದೇಶವನ್ನು ಹೊಂದಿದೆ. ಇದನ್ನು ನಾವೆಲ್ಲರೂ ತಿಳಿಸಿ ಹೇಳಬೇಕು ಎಂದರು.

ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್‌ ಮಾತನಾಡಿ, ಕಳೆದ ಬಾರಿ ಬೆಳಗಾವಿಯಲ್ಲಿ ನಡೆದ ಸಮಾವೇಶ ಅತ್ಯಂತ ಯಶಸ್ವಿಯಾಗಿದೆ ಎಂಬ ಮಾತು ಕೇಳಿಬಂದಿತ್ತು. ಇದೀಗ ಕುಂದಾಪುರದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ನಿರೀಕ್ಷೆ ಹುಸಿಯಾಗುವುದಿಲ್ಲ. ಸಮುದಾಯದಲ್ಲಿನ ಅನೇಕ ಸಮಸ್ಯೆಗಳ ಕುರಿತು ಸಮ್ಮೇಳನದಲ್ಲಿ ಚರ್ಚೆ ನಡೆಯಬೇಕು. ಜೊತೆಗೆ ಸಮಸ್ಯೆಗೆ ಪರಿಹಾರ ಹುಡುಕಬೇಕು. ಬ್ರಾಹ್ಮಣ ಸಮಾಜ ಇನ್ನಷ್ಟು ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಮುನ್ನಡೆಯಬೇಕು ಎಂದರು.

ಸಮಾಜದ ಪ್ರಮುಖ ಎಸ್‌. ದತ್ತಾತ್ರಿ ಮಾತನಾಡಿ, ಸಮ್ಮೇಳನದ ಮೂಲಕ ಬ್ರಾಹ್ಮಣ ಸಮಾಜದ ಶಕ್ತಿ ತೋರಿಸಬೇಕಿದೆ. ಸಮ್ಮೇಳನ ಆಯೋಜಿಸುವುದರಿಂದ ಸ್ಥಳೀಯ ಸಂಘಟನಾ ಶಕ್ತಿ ಹೆಚ್ಚಾಗುತ್ತಾ ಹೋಗುತ್ತದೆ ಎಂದರು.

ಮಹಾಸಭಾ ರಾಜ್ಯ ಪ್ರಧಾನ ವಕ್ತಾರ ಮ.ಸ. ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಅನ್ಯರನ್ನು ದ್ವೇಷಿಸುವ, ಹೊಟ್ಟೆಕಿಚ್ಚು, ಅಸೂಯೆಪಡುವ ಮನೋಭಾವ ಬೆಳೆಸಿಕೊಂಡರೆ ಅನೇಕ ಕಾಯಿಲೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಅನ್ಯರನ್ನು ಪ್ರೀತಿಸದೆ, ಗೌರವಿಸಿದೆ ಅವರಿಂದ ಅಪೇಕ್ಷೆ ಕೊಡುವುದು ತಪ್ಪು. ಪ್ರತಿಯೊಬ್ಬರನ್ನು ಪ್ರೀತಿಸುವ ಹಾಗೂ ಸಹಬಾಳ್ವೆಯಿಂದ ಮುನ್ನಡೆಯುವ ಮನೋಭಾವ ಹೊಂದಬೇಕು ಎಂದರು.

ಸಮ್ಮೇಳನದ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಮಹಾನಗರ ಪಾಲಿಕೆ ಸದಸ್ಯೆ ಸುರೇಖಾ ಮುರಳಿಧರ್‌ ಅವರನ್ನು ಸನ್ಮಾನಿಸಲಾಯಿತು. ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ಕೆ. ರಾಮಪ್ರಸಾದ್‌, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಮಾಧವ ಮೂರ್ತಿ, ಶಂಕರಾನಂದ ಜೋಯಿಸ್‌, ಸುರೇಶ್‌ ವೃಕ್ಷಂ ಇದ್ದರು. ಸುಮಿತ್ರಮ್ಮ ಪ್ರಾರ್ಥಿಸಿದರು. ಅಚ್ಚುತರಾವ್‌ ಸ್ವಾಗತಿಸಿದರು. ಎಂ.ಜಿ. ಪ್ರಕಾಶ್‌ ಭಟ್‌ ವಂದಿಸಿದರು. ಎಚ್‌.ಎನ್‌. ಛಾಯಾಪತಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next