ಶಿವಮೊಗ್ಗ: ಕಲ್ಯಾಣ ಕರ್ನಾಟಕ ನಿರ್ಮಾಣ ಬಿಜೆಪಿ ಗುರಿಯಾಗಿದೆ. ಶಿವಮೊಗ್ಗವನ್ನು ಕಾಂಗ್ರೆಸ್ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರಿಗೆ ಹುರಿದುಂಬಿಸಿದರು.
ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ಸಮಿತಿ ವಿಶೇಷ ಸಭೆಯಲ್ಲಿ ಭಾಗವಹಿಸಿ, ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಬಿಜೆಪಿ ರಾಜ್ಯದಲ್ಲಿ ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಆಡಳಿತ ಪಕ್ಷದ ಶಾಸಕರು, ಸಚಿವರು ರಾಜೀನಾಮೆ ಕೊಟ್ಟು ಹೊರಬಂದು ಬಿಜೆಪಿ ಬೆಂಬಲಿಸಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಬಿಜೆಪಿಗೆ ಕೊಟ್ಟಿದ್ದ ಜನಾದೇಶವನ್ನು ಧಿಕ್ಕರಿಸಿ ಅಪವಿತ್ರ ಮೈತ್ರಿಯಿಂದ ಸರಕಾರ ರಚನೆ ಮಾಡಿತು. ಒಂದೂವರೆ ವರ್ಷ ಫೈವ್ ಸ್ಟಾರ್ ಹೊಟೇಲ್‌ನಲ್ಲೇ ಸರಕಾರ ನಡೆಯಿತು. ಇದರಿಂದ ಬೇಸತ್ತ 17 ಮಂದಿ ಸ್ವಾಭಿಮಾನಿಗಳು ರಾಜೀನಾಮೆ ಕೊಟ್ಟು ಹೊರಬಂದರು. ಬಿಜೆಪಿ ಸರಕಾರ ರಚನೆಗೆ ಅವಕಾಶ ಮಾಡಿಕೊಟ್ಟರು ಎಂದರು.
ನರೇಂದ್ರ ಮೋದಿ ಅವರ ಅವಧಿಯಲ್ಲೇ ರಾಮಮಂದಿರ ನಿರ್ಮಾಣವಾಗುತ್ತದೆ. 50-60 ವರ್ಷದಿಂದ 1.5 ಕೋಟಿ ಹಿಂದೂಗಳು ಬಾಂಗ್ಲಾ, ಪಾಕಿಸ್ತಾನದಿಂದ ರಕ್ಷಣೆ ಕೋರಿ ವಲಸೆ ಬಂದಿದ್ದಾರೆ. ಅವರನ್ನು ರಕ್ಷಣೆ ಮಾಡಲು ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೆ ತರಲಾಗಿದೆ. ಇಲ್ಲಿರುವ ಮುಸ್ಲಿಮರಿಗೆ ಅನ್ಯಾಯವಾಗುವುದಿಲ್ಲ. ಆದರೆ ಇದನ್ನು ವಿರೋಧಿಸಿ ಕಾಂಗ್ರೆಸ್ ರಾಷ್ಟ್ರ ವಿರೋಧಿ ಪಾರ್ಟಿಯಾಗಿ ಬೆಳೆಯುತ್ತಿದೆ. ಅಧಿಕಾರಕ್ಕಾಗಿ ಹಪಹಪಿಸುತ್ತಿದೆ. ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿ ಮಾತನಾಡುತ್ತಿದ್ದಾರೆ. ರಾಷ್ಟ್ರಕ್ಕಾಗಿ ಅವರ ತ್ಯಾಗ ತಿಳಿಯದೇ ಮಾತನಾಡುತ್ತಿದ್ದಾರೆ, ಸಾವರ್ಕರ್ ಬಗ್ಗೆ ಯಾರೇ ಮಾತನಾಡಿದರೂ ಅವರು ರಾಷ್ಟ್ರ ವಿರೋಧಿಗಳೇ. ಬ್ರಿಟಿಷರಂತೆ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಪ್ರದರ್ಶಿಸುತ್ತಿದೆ. ಕಾಯಿದೆ ವಿರೋಧಿಸಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ಅವರಿಗೆ ಅಲ್ಲಿಯೇ ಉತ್ತರ ಸಿಗಲಿದೆ ಎಂದರು.
ಬಿಜೆಪಿ ರಾಜ್ಯದಲ್ಲಿ ಸರ್ವವ್ಯಾಪಿಯಾಗಲಿದೆ. ಈಗಾಗಲೇ ಉಪ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾ ಧಿಸಿದ್ದೇವೆ. ಖಾತೆಯನ್ನೇ ತೆರೆಯದ ಮಂಡ್ಯ ಮತ್ತು ಚಿಕ್ಕಬಳ್ಳಾಪುರದಲ್ಲಿ ನಾವು ಗೆದ್ದಿದ್ದೇವೆ. ಶೇ.80ರಷ್ಟು ಮತದಾರರು ನಮ್ಮ ಜೊತೆಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲೂ ಬಿಜೆಪಿ ಭದ್ರವಾಗಿದೆ. ಕೆ.ಎಸ್. ಈಶ್ವರಪ್ಪ, ಬಿ.ವೈ. ರಾಘವೇಂದ್ರ ಮುಂತಾದವರ ಪರಿಶ್ರಮ , ಕಾರ್ಯಕರ್ತರ ನಿಜವಾದ ಒಗ್ಗಟ್ಟು ಈ ಎಲ್ಲ ದೃಷ್ಟಿಯಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 10 ಮಂಡಲಗಳನ್ನು ಸ್ಥಾಪಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಂದೂ ಸ್ಥಾನವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಗೆಲ್ಲಬಾರದು. ಕಾಂಗ್ರೆಸ್ ಮುಕ್ತ ಜಿಲ್ಲೆಯಾಗಲಿ ಎಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ರುದ್ರೇಗೌಡ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಹೊಸ ಮನ್ವಂತರಕ್ಕೆ ಕಾಲಿಟ್ಟಿದೆ. ಕಟೀಲ್ ಅವರು ಪಕ್ಷವನ್ನು ಮತ್ತಷ್ಟು ಸಂಘಟಿಸುತ್ತಾರೆ. ಗ್ರಾಮೀಣಾಭಿವೃದ್ದಿಗೆ ನಮ್ಮ ಪಕ್ಷ ಒತ್ತು ಕೊಡುತ್ತದೆ. ಬಿಜೆಪಿಯ ಬೆಳವಣಿಗೆಗೆ ಇತರ ಪಕ್ಷಗಳು ನಲುಗಿ ಹೋಗಿವೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಕೇಂದ್ರ ಬಿಜೆಪಿ ಸರಕಾರ ಬಂದ ಆರು ತಿಂಗಳಲ್ಲಿ ಐತಿಹಾಸಿಕ ಮಸೂದೆಗಳು ಮಂಡನೆಯಾಗಿವೆ. ಇನ್ನೊಂದು ವರ್ಷದಲ್ಲಿ ರಾಜ್ಯಸಭೆಯಲ್ಲೂ ಬಹುಮತ ಬರಲಿದೆ. ನಂತರ ಇನ್ನಷ್ಟು ಕಾಯಿದೆಗಳು ಜಾರಿಯಾಗಲಿವೆ. ರಾಜ್ಯ, ಕೇಂದ್ರ ಸರಕಾರದ ಸಾಧನೆಯನ್ನು ಜನರ ಮಧ್ಯೆ ತೆಗೆದುಕೊಂಡು ಹೋಗಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್.ಎನ್. ಚನ್ನಬಸಪ್ಪ, ಜಿಲ್ಲೆಯಲ್ಲಿ ಬಿಜೆಪಿ ವ್ಯವಸ್ಥಿತವಾಗಿದೆ. 3.5 ಲಕ್ಷ ಸದಸ್ಯರಿದ್ದಾರೆ. 1.10 ಲಕ್ಷ ಹೊಸ ಸದಸ್ಯರು ಸೇರ್ಪಡೆಯಾಗಿದ್ದಾರೆ. 1198 ಸಕ್ರಿಯ ಸದಸ್ಯರಿದ್ದಾರೆ. 10 ಮಂಡಲ ಸ್ಥಾಪಿಸಲಾಗಿದೆ, 7 ಮಂಡಲಕ್ಕೆ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ, ನಮ್ಮ ಹಿಂದೆ ಆರ್‌ಎಸ್‌ಎಸ್ ಇದೆ. ಹಿಂದುತ್ವದ ನೆಲೆ ಕಂಡುಕೊಳ್ಳುತ್ತಿದ್ದೇವೆ. ಸಂಘಟನೆಗೆ ಆದ್ಯತೆ ಕೊಡುತ್ತಿದ್ದೇವೆ ಎಂದರು. ಸಚಿವ ಕೆ.ಎಸ್. ಈಶ್ವರಪ್ಪ, ಶಾಸಕರಾದ ಕುಮಾರ್ ಬಂಗಾರಪ್ಪ, ಆಯನೂರು ಮಂಜುನಾಥ್, ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಪ್ರಮುಖರಾದ ಲತಾ ಗಣೇಶ್, ಎಸ್ .ದತ್ತಾತ್ರಿ, ಡಿ.ಎಸ್. ಅರುಣ್, ಕೆ.ಜಿ. ಕುಮಾರಸ್ವಾಮಿ, ಸ್ವಾಮಿರಾವ್, ಪವಿತ್ರಾ ರಾಮಯ್ಯ ಮತ್ತಿತರರು ಇದ್ದರು. ಎಸ್.ಎನ್.ಚನ್ನಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಬಿ. ಮೇಘರಾಜ್ ಸ್ವಾಗತಿಸಿದರು. ಮಧು ನಿರೂಪಿಸಿದರು.