Advertisement

ಮಲೆನಾಡಿನ ಪುಟ್ಟ ಬಾಳೆಹಣ್ಣೆಗೆ ತಮಿಳುನಾಡು ಬಾಳೆ ಹೊಡೆತ!

12:38 PM Dec 11, 2019 | Naveen |

„ಶರತ್‌ ಭದ್ರಾವತಿ
ಶಿವಮೊಗ್ಗ:
ತಮಿಳುನಾಡು ಬಾಳೆ ಜಿಲ್ಲೆಗೆ ಕಾಲಿಟ್ಟ ಕಾರಣ ಗ್ರಾಹಕರ ಜೇಬಿಗೆ ಹೊರೆಯಾಗಿದ್ದು ಪುಟ್ಟ ಬಾಳೆ (ಏಲಕ್ಕಿ ಬಾಳೆ) ಈಗ ಭಾರೀ ಇಳಿಕೆಯಾಗಿದ್ದು ಬಾಳೆ ಬೆಳೆಗಾರರು ಹಾಗೂ ವ್ಯಾಪಾರಸ್ಥರನ್ನು ಆತಂಕಕ್ಕೀಡು ಮಾಡಿದೆ.

Advertisement

ಕಳೆದ ವರ್ಷ ಇದೇ ಸಮಯಕ್ಕೆ ಬಾಳೆ ಹಣ್ಣು ಬೆಲೆ ಕಡಿಮೆಯಾಗಿರಲಿಲ್ಲ. ಈ ಬಾರಿ ಅವಧಿಗಿಂತ ಮುನ್ನವೇ ಇಳಿಕೆಯಾಗಿದೆ. ಹಬ್ಬದ ಸೀಸನ್‌ ಆದ ಸೆಪ್ಟೆಂಬರ್‌, ಅಕ್ಟೋಬರ್‌ ವೇಳೆ ಚಿಲ್ಲರೆ ದರ 80-90 ರೂ. ಇತ್ತು. ಆದರೀಗ, 35-40 ರೂ.ಗೆ ಇಳಿಕೆಯಾಗಿದೆ. ಅದೇ ರೀತಿ, 60-65 ರೂ. ಗಳಷ್ಟಿದ್ದ ಸಗಟು ದರ 15-25 ರೂ.ಗೆ ಇಳಿಕೆಯಾಗಿದೆ.

ಆಗಸ್ಟ್‌ ಮೊದಲ ವಾರದಲ್ಲಿ ಸುರಿದ ಭಾರೀ ಮಳೆಗೆ ಶಿವಮೊಗ್ಗ, ದಾವಣಗೆರೆ, ಚನ್ನಗಿರಿ, ಹೊನ್ನಾಳಿ ಭಾಗದಲ್ಲಿ ಪುಟ್ಟಬಾಳೆ ಬೆಳೆ ಹಾಳಾಗಿತ್ತು. ಜತೆಗೆ, ಅನಿರೀಕ್ಷಿತವಾಗಿ ಬೆಳೆಯಲ್ಲಿ ಕಂಡುಬಂದ ಪಲಾಮ, ಸೊರಗು ರೋಗವೂ ಇಳುವರಿ ಕಡಿಮೆಯಾಗಲು ಕಾರಣವಾಗಿತ್ತು. ಶಿವಮೊಗ್ಗದೆಲ್ಲೆಡೆ ಹೇರಳವಾಗಿ ಬಾಳೆ ಬೆಳೆಯಲಾಗುತ್ತದೆ. ಆದರೆ, ಪ್ರಕೃತಿ ವಿಕೋಪದಿಂದಾಗಿ ಮಾರುಕಟ್ಟೆಯಲ್ಲಿ ಪುಟ್ಟ ಬಾಳೆ ಪೂರೈಕೆ ಆಗಿರಲಿಲ್ಲ. ಹೀಗಾಗಿ, ನೆರೆಯ ಜಿಲ್ಲೆಗಳಿಂದಲೂ ಆಮದು ಮಾಡಿಕೊಳ್ಳಲಾಗಿತ್ತು. ಗಣೇಶ ಚತುರ್ಥಿ, ದಸರಾ ಮತ್ತು ದೀಪಾವಳಿ ಸರಣಿ ಹಬ್ಬಗಳ ನಡುವೆ ಪುಟ್ಟ ಬಾಳೆಯ ಪೂರೈಕೆ ಕಡಿಮೆ ಆದ ಪರಿಣಾಮ ಬೆಲೆ ದ್ವಿಗುಣವಾಗಿತ್ತು. ಈಗ ಪರಿಸ್ಥಿತಿ ಪೂರ್ಣ ಹದ್ದುಬಸ್ತಿನಲ್ಲಿದೆ.

ಶಿವಮೊಗ್ಗದಲ್ಲೇ ನಿತ್ಯ 50 ಟನ್‌ ಬಾಳೆಗೆ ಬೇಡಿಕೆ ಇದ್ದು, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೂ ನಿತ್ಯ 50 ಟನ್‌ ಬಾಳೆ ರಫ್ತು ಮಾಡಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಆನವಟ್ಟಿ, ಜಡೆ, ಭದ್ರಾವತಿ, ಆನವೇರಿ, ಹೊಳಲೂರು ಸೇರಿದಂತೆ ನಾನಾ ಕಡೆಗಳಿಂದ ಪುಟ್ಟ ಬಾಳೆ ಮಾರುಕಟ್ಟೆಗೆ ಬರುತ್ತಿದೆ.

ಶಿವಮೊಗ್ಗದ ವ್ಯಾಪಾರಸ್ಥರೊಬ್ಬರು ತಮಿಳುನಾಡಿನಿಂದ ವಾರಕ್ಕೆ 13 ಟನ್‌ ಏಲಕ್ಕಿ ಬಾಳೆ ಆಮದು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಬೆಲೆಯೂ ಇಳಿಕೆಯಾಗಿದೆ. ಅಕ್ಟೋಬರ್‌ನಲ್ಲಿ ಪ್ರತಿ ವರ್ಷ ಬಾಳೆಯ ಬೆಲೆ ಸ್ವಲ್ಪ ಏರಿಕೆ ಕಾಣುತ್ತದೆ. ಇದಕ್ಕೆ ಕಾರಣ, ಈ ತಿಂಗಳಲ್ಲಿರುವ ಹಬ್ಬ- ಹರಿದಿನಗಳು. ಸಾಮಾನ್ಯವಾಗಿ, ಡಿಸೆಂಬರ್‌
ಬಂದಾಕ್ಷಣ ಬೇಡಿಕೆಯಲ್ಲಿ ದಿಢೀರ್‌ ಇಳಿಕೆ ಆಗುತ್ತದೆ.

Advertisement

ಇದೇ ರೀತಿ ಬೇಡಿಕೆ ಕುಸಿತದಲ್ಲಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಕೆಜಿಗೆ 15-20 ರೂ. ಇಳಿಕೆಯಾದಲ್ಲಿ ಬೆಳೆಗಾರರಿಗೆ ನಷ್ಟವಾಗುತ್ತದೆ. ಆದರೆ, ಈಗಿನ ಸದ್ಯದ ಮಾರುಕಟ್ಟೆ ಪರಿಸ್ಥಿತಿಯಲ್ಲಿ ನಿರ್ದಿಷ್ಟವಾಗಿ ಹೇಳುವುದು ಕಷ್ಟಸಾಧ್ಯ.

2017-18ರ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 92,546 ಹೆಕ್ಟೆರ್‌ ಬಾಳೆ ಬೆಳೆಯುವ ಕ್ಷೇತ್ರವಿದೆ. ಚಾಮರಾಜನಗರದಲ್ಲಿ ಅತಿ ಹೆಚ್ಚು 10,040 ಹೆಕ್ಟೇರ್‌ ಹಾಗೂ ಶಿವಮೊಗ್ಗದಲ್ಲಿ 5,191 ಹೆಕ್ಟೇರ್‌ ಪುಟ್ಟ ಬಾಳೆ ಬೆಳೆಸಲಾಗುತ್ತದೆ.

40ರ ಗಡಿ ಇಳಿದ ಬೆಲೆ
ಪುಟ್ಟ ಬಾಳೆ ಬೆಲೆಯು 2001ರಿಂದ 05 ರವರೆಗೆ ಕೆಜಿಗೆ 6-8 ರೂ., 2005-10ರ ವರೆಗೆ 20-25 ರೂ. ಹಾಗೂ 2010ರಿಂದ 15 ರವರೆಗೆ 40 ರೂ. ಇತ್ತು. 2010ರಿಂದೀಚೆಗೆ ಚಿಲ್ಲರೆ ವಹಿವಾಟಿನಲ್ಲಿ ಬಾಳೆಯ ಬೆಲೆಯು ಕೆಜಿಗೆ 40 ರೂ.ಗಿಂತ ಕೆಳಗೆ ಇಳಿದಿಲ್ಲ. ಆದರೆ ಈ ಬಾರಿ ಇಳಿಯುವ ಲಕ್ಷಣಗಳಿವೆ.

ಶಿವಮೊಗ್ಗಕ್ಕೆ ಇದೇ ಮೊದಲ ಬಾರಿಗೆ ಒಂದೂವರೆ ತಿಂಗಳಿನಿಂದ ತಮಿಳುನಾಡು ಬಾಳೆ ಬರುತ್ತಿದೆ. ಹೀಗಾಗಿ ದರದಲ್ಲಿ ಕಡಿಮೆಯಾಗಿದೆ. ಇದೇ ರೀತಿ ಮುಂದುವರಿದರೆ ಚಿಲ್ಲರೆ ವಹಿವಾಟಿನಲ್ಲಿ 30 ರೂ.ಗೂ ಬಾಳೆಹಣ್ಣು ಸಿಗಬಹುದು.
.ದಿನೇಶ್‌, ಬಾಳೆಹಣ್ಣು
ಮಾರಾಟಗಾರರು.

Advertisement

Udayavani is now on Telegram. Click here to join our channel and stay updated with the latest news.

Next