Advertisement

ಮಕ್ಕಳಿಗೆ ಪೋಷಕರು ಮಾದರಿಯಾಗಲಿ

03:33 PM Feb 10, 2020 | Naveen |

ಶಿವಮೊಗ್ಗ: ಪೋಷಕರು ತಮ್ಮ ಮಕ್ಕಳಿಗೆ ತಾವೇ ಮಾದರಿಯಾಗಬೇಕು ಎಂದು ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಗೌರವಾಧ್ಯಕ್ಷ ಹಾಗೂ ಬೆಕ್ಕಿನಕಲ್ಮಠದ ಡಾ| ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

Advertisement

ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಕೆಳದಿ ಶಿವಪ್ಪನಾಯಕ ಪ್ರಶಸ್ತಿ ಪ್ರದಾನ ಮತ್ತು 2018-2019ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂದು ಪೋಷಕರು ತಮ್ಮ ಮಕ್ಕಳಿಗೆ ಆದರ್ಶಗಳನ್ನು ಹೊರಗಡೆ ಹುಡುಕಿಕೊಂಡು ಹೋಗುವಂತೆ ಮಾಡಿದ್ದಾರೆ. ಅದರ ಬದಲು ತಮ್ಮ ಮನೆಯಲ್ಲೇ ತಾವು ಮಕ್ಕಳಿಗೆ ಮಾದರಿಯಾಗಬೇಕು ಎಂದರು.

ಪ್ರತಿಯೊಬ್ಬರೂ ಸೈನಿಕರಾಗಬೇಕು ಎಂದ ಅವರು, ಸೈನಿಕರಾಗಿ ಯುದ್ಧಭೂಮಿಯಲ್ಲಿ ಶತ್ರುಗಳ ವಿರುದ್ಧ ಹೋರಾಡಬೇಕೆಂದೇನಿಲ್ಲ. ನಮ್ಮ ಸಮಾಜದೊಳಗೆ ಸೈನಿಕರಾಗಿ ನಮ್ಮೊಳಗಿನ ಶತ್ರುಗಳ ವಿರುದ್ಧ ಹೋರಾಡಿ ಜಯಿಸುವ ಮೂಲಕ ನಾವು ವೀರಸೈನಿಕರಾಗಬೇಕು ಎಂದರು.

ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ನೀಡಿದ ಕೆಳದಿ ಶಿವಪ್ಪನಾಯಕ ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದ ಲೆಫ್ಟಿನೆಂಟ್‌ ಜನರಲ್‌ ರಮೇಶ್‌ ಹಲಗಲಿ ಅವರು, ಪ್ರಾಮಾಣಿಕತೆ, ಸ್ವಾಭಿಮಾನ ಹಾಗೂ ಸೃಜನಶೀಲತೆ ದೇಶವನ್ನು ಬದಲಾವಣೆ ಮಾಡುವ ಪ್ರಮುಖ ಅಂಶಗಳಾಗಿವೆ ಎಂದರು.

ಮೌಲ್ಯಗಳ ಅಳವಡಿಕೆ, ನೈತಿಕತೆ, ನಡತೆ ಕೂಡ ಅತೀ ಮುಖ್ಯವಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಕೌಶಲ್ಯ ವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಬೇಕಿದೆ. ಈ ಮೂಲಕ ಯುವ ಸಮುದಾಯ ಕಠಿಣ ಪರಿಶ್ರಮ ಹಾಕಿದರೆ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

Advertisement

ಇಂದು ಇಡೀ ಜಗತ್ತಿಗೆ ತಾಪಮಾನ ಏರಿಕೆಯೇ ಸಮಸ್ಯೆಯಾಗಿದೆ. ಇದನ್ನು ಕಡಿಮೆ ಮಾಡಲು ಯುದ್ಧ ನಡೆಯಬೇಕಿದೆ. ಇದೇ ರೀತಿ ತಾಪಮಾನ ಹೆಚ್ಚಳವಾದರೆ ಜೀವಸಂಕುಲಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದರು. ರಾಷ್ಟ್ರ- ರಾಷ್ಟ್ರಗಳ ನಡುವೆ ಯುದ್ಧ ನಡೆದರೆ ಆರ್ಥಿಕ ಹಿಂಜರಿತವಾಗಲಿದೆ. ಅಪಾರ ಪ್ರಮಾಣದ ಜೀವ ಹಾನಿ ಸಂಭವಿಸಲಿದೆ. ಯುದ್ಧ ಮಾಡುವುದು ಪ್ರತಿಷ್ಠೆಯ ವಿಷಯವಾಗಬಾರದು. ಬದಲಾಗಿ ಪರಿಸರ ಸಂರಕ್ಷಣೆ, ತಾಪಮಾನ ಕಡಿಮೆ ಮಾಡಲು, ಸಾಕ್ಷರತೆಗೆ ಒತ್ತು ನೀಡಬೇಕೆಂದು ಹೇಳಿದರು.

ಕೇಂದ್ರ ಸರ್ಕಾರ ಭಾರತದ ಆರ್ಥಿಕತೆಯನ್ನು 10 ಟ್ರಿಲಿಯನ್‌ಗೆ ಕೊಂಡೊಯ್ಯುವ ಗುರಿ ಹೊಂದಿದೆ. ಇದಕ್ಕೆ ಪ್ರತಿಯೊಬ್ಬರೂ ಹೆಚ್ಚಿನ ಪರಿಶ್ರಮ ಹಾಕಬೇಕಿದೆ. ಶಿಕ್ಷಣ, ಮೌಲ್ಯ ಅಳವಡಿಕೆ ಹಾಗೂ ಸಮುದಾಯದ ಅಭಿವೃದ್ಧಿಯಾದಾಗ ಮಾತ್ರ ನಿಗದಿತ ಗುರಿ ಸಾಧಿಸಲು ಸಾಧ್ಯವಾಗಲಿದೆ ಎಂದರು.

ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶಾಸಕ ಡಾ| ಶಾಮನೂರು ಶಿವಶಂಕರಪ್ಪ ಅವರು ಮಾತನಾಡಿ, ಅಖೀಲ ಭಾರತ ವೀರಶೈವ ಮಹಾಸಭಾದಿಂದ ಪ್ರತಿ ಜಿಲ್ಲೆಯಲ್ಲಿಯೂ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಇದಕ್ಕಾಗಿ ಕೇಂದ್ರದಿಂದ 70 ರಿಂದ 75 ಲಕ್ಷ ಪ್ರತಿವರ್ಷ ವ್ಯಯಿಸಲಾಗುತ್ತಿದೆ. ಆದರೆ ಮುಂಬರುವ ದಿನಗಳಲ್ಲಿ ಎಲ್ಲಾ ಜಿಲ್ಲಾ ಸಂಘಟನೆಗಳು ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರಕ್ಕೆ ಬೇಕಾದ ಹಣವನ್ನು ಜಿಲ್ಲಾ ಸಂಘಟನೆಯಿಂದ ವ್ಯಯಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ ಒಗ್ಗಟ್ಟಿಲ್ಲ. ಒಳ ಪಂಗಡಗಳನ್ನೆಲ್ಲಾ ಬಿಟ್ಟು, ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸುವ ಮೂಲಕ ಸಮಾಜವನ್ನು ಬೆಳೆಸಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಅವರು ಮಾತನಾಡಿ, ನಮ್ಮ ಸಮಾಜದಲ್ಲಿ ಬಹಳಷ್ಟು ಸ್ವಾಮೀಜಿಗಳು, ಅಧ್ಯಯನಶೀಲರು, ಜ್ಞಾನಿಗಳು, ಉನ್ನತ ಪದವಿಗಳನ್ನು ಗಳಿಸಿದವರು ಡಾಕ್ಟರೇಟ್‌ ಪಡೆದವರ ಸಂಖ್ಯೆಯು ಜಾಸ್ತಿ ಇದೆ. ಒಂದು ರೀತಿಯಲ್ಲಿ ಸಂಪದ್ಭರಿತವಾದ ಸಮಾಜವಾಗಿದೆ. ನಮ್ಮ ಸಮಾಜದ ಬಗ್ಗೆ ನಾವು ಹೆಮ್ಮಪಡಬೇಕು ಎಂದರು.

ಕಾರ್ಯಕ್ರಮದಲ್ಲಿ 2018-2019ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಎನ್‌.ಸಜ್ಜನ್‌ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಚಂದ್ರಶೇಖರಪ್ಪ, ವಿಶ್ವಾಸ್‌ ಇ., ಬೆನಕಪ್ಪ, ರಾಜಶೇಖರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next