Advertisement

11ರಿಂದ ಅಡಕೆ ವಹಿವಾಟಿಗೆ ಅವಕಾಶ

06:37 PM May 06, 2020 | Naveen |

ಶಿವಮೊಗ್ಗ: ಅಡಕೆ ಬೆಳೆಗಾರರ ಹಿತ ಮನಗಂಡು ಮೇ 11ರಿಂದ ಅಡಕೆ ವಹಿವಾಟಿಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ರಾಜ್ಯ ಅಡಕೆ ಟಾಸ್ಕ್ಫೋರ್ಸ್‌ ಕಮಿಟಿಯ ಅಧ್ಯಕ್ಷರೂ ಆದ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

Advertisement

ಮ್ಯಾಮ್‌ಕೋಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಕೆ ಮಾರುಕಟ್ಟೆಯನ್ನು ಈಗಾಗಲೇ ಶಿರಸಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ತರೆಯಲಾಗಿದೆ. ಅದೇ ಶಿವಮೊಗ್ಗ, ಚಿಕ್ಕಮಗಳೂರಿನಲ್ಲೂ ಮಾರುಕಟ್ಟೆ ತೆರೆಯಲಾಗುವುದು ಎಂದು ಪ್ರಕಟಿಸಿದರು.

ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷ ಎಸ್‌. ಆರ್‌.ಸತೀಶ್ಚಂದ್ರ ಹಾಗೂ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರಾದ ಯಡಗೆರೆ ಸುಬ್ರಹ್ಮಣ್ಯ, ಆರ್‌.ಎಂ. ರವಿ, ಅಡಕೆ ವರ್ತಕರ ಸಂಘದ ಅಧ್ಯಕ್ಷ ಡಿ.ಎಂ. ಶಂಕರಪ್ಪ, ಅಡಕೆ ಸಹಕಾರ ಮಹಾಮಂಡಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರ ಸಮ್ಮುಖದಲ್ಲಿ ಸಭೆ ನಡೆಸಿ, ತೀರ್ಮಾನ ಕೈಗೊಳ್ಳಲಾಗಿದೆ. ಹೀಗಾಗಿ, ಅಡಕೆ ಬೆಳೆಗಾರರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಧೈರ್ಯ ಹೇಳಿದರು.

ಕೋವಿಡ್ ವೈರಸ್‌ ಹರಡುವುದನ್ನು ತಡೆಯುವ ಉದ್ದೇಶದಿಂದ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಲಾಗಿದೆ. ಹೀಗಾಗಿ, ಉತ್ತರ ಭಾರತದಲ್ಲಿರುವ ಪಾನ್‌ಮಸಾಲಾ ಕಾರ್ಖಾನೆಗಳು ಸ್ಥಗಿತಗೊಂಡಿವೆ. ಆದ್ದರಿಂದ, ಅಡಕೆ ರಫ್ತು ಸಾಧ್ಯವಾಗಿಲ್ಲ. ಕಾರ್ಮಿಕರೂ ಲಭ್ಯವಿಲ್ಲದ ಕಾರಣದಿಂದಾಗಿ ಅಡಕೆ ವಹಿವಾಟು ಸ್ಥಗಿತಗೊಂಡಿತ್ತು. ಆದರೀಗ, ಉತ್ತರ ಭಾರತದ ಕಾರ್ಖಾನೆಗಳೊಂದಿಗೂ ಮಾತನಾಡಿದ್ದು ಅವುಗಳನ್ನು ಬರುವ ದಿನಗಳಲ್ಲಿ ತೆರೆಯಲಾಗುತ್ತಿದೆ ಎಂದರು.

ಧಾರಣೆ ಕುಸಿಯದು- ಭೀತಿ ಬೇಡ: ಕೋವಿಡ್  ‌-19ನಿಂದಾಗಿ ವಹಿವಾಟೇ ನಿಂತಿದ್ದು, ಅಡಕೆ ಧಾರಣೆ ಕುಸಿಯಬಹುದೆಂಬ ಭೀತಿಯಲ್ಲಿ ರೈತರಿದ್ದಾರೆ. ಆದರೆ, ಯಾರೂ ಭಯ ಪಡುವ ಅಗತ್ಯವಿಲ್ಲ. ಅಡಕೆಯ ಧಾರಣೆ ಕುಸಿಯಲು ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ಭೀತಿಗೆ ಒಳಗಾಗಿ ರೈತರು ಮಧ್ಯವರ್ತಿಗಳಿಗೆ ಕಡಿಮೆ ದರಕ್ಕೆ ಮಾರಾಟ ಮಾಡಬಾರದು ಎಂದು ಜ್ಞಾನೇಂದ್ರ ಮನವಿ ಮಾಡಿದರು.

Advertisement

ಈ ವೇಳೆ ಅಡಕೆ ಬೆಳೆಗಾರರು, ವರ್ತಕರು ಸಂಯಮದಿಂದ ವರ್ತಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರ ವಿಧಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಮೇ 11ರಿಂದ ಮ್ಯಾಮ್‌ಕೋಸ್‌ ವ್ಯಾಪ್ತಿಯ ಎಲ್ಲ ಶಾಖೆ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಭದ್ರಾವತಿ, ಚನ್ನಗಿರಿ ಸೇರಿ ಎಲ್ಲ ಎಪಿಎಂಸಿಗಳಲ್ಲೂ ವ್ಯಾಪಾರ, ವಹಿವಾಟು ಆರಂಭವಾಗಲಿದೆ ಎಂದರು. ಅಡಕೆ ಮಹಾಮಂಡಳದ ಅಧ್ಯಕ್ಷ ಕೊಂಕೋಡಿ ಪದ್ಮನಾಭ, ತುಮ್‌ಕೋಸ್‌ ಅಧ್ಯಕ್ಷ ಆರ್‌.ಎಂ.ರವಿ, ಮ್ಯಾಮ್ಕೋಸ್‌ ಉಪಾಧ್ಯಕ್ಷ ಯಡಗೆರೆ ಸುಬ್ರಹ್ಮಣ್ಯ, ಅಡಕೆ ವರ್ತಕರ ಸಂಘದ ಅಧ್ಯಕ್ಷ ಡಿ.ಎಂ. ಶಂಕರಪ್ಪ, ರಾಘವೇಂದ್ರ,ಕೆ.ಜಿ. ಜಯರಾಂ ಇತರರಿದ್ದರು.

ಮೇ 11ರಿಂದ ಅಡಕೆ ವಹಿವಾಟು ನಡೆಯಲಿದ್ದು ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಈಗಾಗಲೇ ಶಿರಸಿ, ಉತ್ತರ ಕನ್ನಡ, ದಕ್ಷಿಣ  ಕನ್ನಡ, ಉಡುಪಿಯಲ್ಲಿ ವಹಿವಾಟು ಆರಂಭವಾಗಿದೆ. ಕೋಕೋಗೂ ಉತ್ತಮ ಬೆಲೆ ಇದೆ. ಧಾರಣೆ ಕುಸಿಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ.
ಎಸ್‌.ಆರ್‌. ಸತೀಶ್ಚಂದ್ರ,
ಅಧ್ಯಕ್ಷ, ಕ್ಯಾಂಪ್ಕೊ ಸಂಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next