Advertisement

ಅರಿಶಿನಗೇರಿ ಶಾಸನಕ್ಕಿದೆ ಅಪಾರ ಮಹತ್ವ

04:13 PM Oct 21, 2019 | Naveen |

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಅರಿಶಿನಗೇರಿ ಗ್ರಾಮದಲ್ಲಿ ಇತ್ತೀಚೆಗೆ 17ನೇ ಶತಮಾನದ ಅಪ್ರಕಟಿತ ಶಿಲಾ ಶಾಸನವೊಂದು ಪತ್ತೆಯಾಗಿದ್ದು ಸರ್ಕಾರದ ಸೇವೆಯಲ್ಲಿದ್ದ ಓರ್ವ ನೌಕರನಿಗೆ ಭೂಮಿ ದಾನ ಮಾಡಿದ ವಿಷಯ ಮಹತ್ವದ್ದಾಗಿದೆ ಎಂದು ಕಮಲಾ ನೆಹರು ಮಹಿಳಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ|ಬಾಲಕೃಷ್ಣ ಹೆಗಡೆ ತಿಳಿಸಿದರು.

Advertisement

ಹೊಸನಗರ ತಾಲೂಕಿನ ಹೊಂಬುಜ ಜೈನ ಮಠದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ ವತಿಯಿಂದ ಆಯೋಜಿಸಿದ್ದ 33ನೇ ವಾರ್ಷಿಕ ಸಮ್ಮೇಳನ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ “ಅರಿಶಿಣಗೇರಿಯಲ್ಲಿ ಇತ್ತೀಚೆಗೆ ದೊರೆತ ಅಪ್ರಕಟಿತ ಶಿಲಾ ಶಾಸನ’ ಎನ್ನುವ ತಮ್ಮ ಸಂಶೋಧನಾ ಪ್ರಬಂಧ ಮಂಡಿಸಿ ಅವರು ಮಾತನಾಡಿದರು.

ತಮ್ಮ ಕ್ಷೇತ್ರ ಕಾರ್ಯ ಸಂದರ್ಭದಲ್ಲಿ ಅರಿಶಿಣಗೇರಿಯ ವೀರೇಂದ್ರ ಪಾಟೀಲ್‌ ಎಂಬುವರ ಮನೆಯ ಮುಂದಿನ ಅಂಗಳದ ಅಂಚಿನಲ್ಲಿ ಈ ಶಾಸನವನ್ನು ಸನಿಹದ ಬೇರೆ ಎಲ್ಲಿಂದಲೋ ತಂದು ಇಲ್ಲಿ ನಿಲ್ಲಿಸಿದಂತೆ ಕಾಣುತ್ತದೆ ಎಂದ ಅವರು, 95 ಸೆಂಮೀ ಎತ್ತರದ ಗ್ರಾನೈಟ್‌ ಶಿಲೆಯಲ್ಲಿ ಶಾಸನವನ್ನು ಖಂಡರಿಸಲಾಗಿದೆ. 30 ಸೆಂಮೀ ಅಗಲವಿರುವ ಈ ಶಾಸನ ಸುಮಾರು 8 ಇಂಚು ದಪ್ಪ ಇದೆ. ಎರಡು ಪಟ್ಟಿಕೆಯಲ್ಲಿ ತಲಾ ಮೂರು ಸಾಲಿನಂತೆ ಒಟ್ಟು ಆರು ಸಾಲುಗಳ ಶಾಸನವನ್ನು ಕೊರೆಯಲಾಗಿದೆ. ಮೇಲಿನಿಂದ ಕೆಳಕ್ಕೆ ಬಂದಂತೆ ಅಗಲದ ಪ್ರಮಾಣದಲ್ಲಿ ಕಡಿಮೆಯಾಗುತ್ತ ಬಂದಿದೆ ಎಂದು ಅವರು ವಿವರಿಸಿದರು.

ಕ್ರಿ.ಶ.6-7ನೇ ಶತಮಾನದ ಶಾಸನಗಳಲ್ಲಿ ಉಲ್ಲೇಖೀತವಾದ “ಗೌಜ’ ಎಂಬ ಹೆಸರಿನ ಗ್ರಾಮವೇ ಸಾಗರ ತಾಲೂಕಿನ ಈಗಿನ “ಗೌತಮಪುರ’ವಾಗಿದೆ. ಒಂದು ಕಾಲದಲ್ಲಿ ಈ ಪ್ರದೇಶ ದೊಡ್ಡ ಶೈವ ಕೇಂದ್ರವಾಗಿತ್ತು. ಅಲ್ಲದೆ ಇದೇ ಗ್ರಾಮದಲ್ಲಿ ದೊರೆತ ಕ್ರಿಶ 8ನೇ ಶತಮಾನದ ಶಾಸನವೊಂದರಲ್ಲಿ 100ಕ್ಕೂ ಹೆಚ್ಚು ಜನರಿಗೆ “ದಾನ ಮಾಡಿದ’ ವಿಷಯ ಹಾಗೂ “ಇಂಥಹ ಗೋತ್ರದವರಿಗೆ ಬಿಟ್ಟಿದ್ದು’ ಎಂಬ ಉಲ್ಲೇಖವನ್ನೂ ಕಾಣಬಹುದು ಎಂದು ಅವರು ತಿಳಿಸಿದರು.

ಕಾಲಾನಂತರದಲ್ಲಿ ಅನೇಕ ಶೈವ ದೇವಾಲಯಗಳು ನಾಶವಾಗಿ ವೈಷ್ಣವ- ಶ್ರೀವೈಷ್ಣವ ಪಂಥಗಳು ಪ್ರವರ್ಧಮಾನಕ್ಕೆ ಬಂದವು ಎಂದು ಅವರು ತಿಳಿಸಿ, ಈ ಶಾಸನದಲ್ಲಿ ಉಲ್ಲೇಖೀತವಾಗಿರುವ “ವಲಿಕಾ ರನ ಗದ್ದೆ’ ಅಂದರೆ ಬಹುಷ ಓರ್ವ “ವಾಲಿಕಾರನ’ ಎಂದಾಗಿರಬೇಕು. “ವಾಲಿಕಾರ’ ಎಂದರೆ ಅರಸನು ಅಕ್ಕ ಪಕ್ಕದ ಗ್ರಾಮಗಳಿಗೆ ಕಳುಹಿಸುವ ಸುದ್ದಿ, ಪತ್ರ, ದಾಖಲೆ ಇತ್ಯಾದಿಗಳನ್ನು ಕೊಂಡೊಯ್ಯುವ “ಸಂದೇಶ’ ತಲುಪಿಸುವಾತ ಎಂದರ್ಥ.

Advertisement

ಅದ್ದರಿಂದ ಓರ್ವ “ವಾಲಿಕಾರನಿ’ಗೆ ಒಂದಷ್ಟು ಭೂಮಿಯನ್ನು ಓರ್ವ ಆಡಳಿತಗಾರ ದಾನವಾಗಿ ನೀಡಿದ್ದಿರಬಹುದು ಎಂದು ಅವರು ತಿಳಿಸಿದರು. ಶಾಸನ ಓದುವಲ್ಲಿ ಸಹಕರಿಸಿದ ಡಾ| ಜಗದೀಶ ಎ. ಹಾಗೂ ಖ್ಯಾತ ಪುರಾತತ್ವ ಶಾಸ್ತ್ರಜ್ಞ ಪ್ರೊ| ಎ.ಸುಂದರ ಅವರಿಗೆ ಡಾ| ಹೆಗಡೆ ಇದೇ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.

ಡಾ| ಪಿ. ನಂಜುಡಸ್ವಾಮಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಪ್ರೊ| ದತ್ತಪ್ರಸನ್ನ ಪಾಟೀಲ್‌, ಡಾ| ದೇವರ ಕೊಂಡಾರೆಡ್ಡಿ, ಸೀತಾಲಕ್ಷ್ಮೀ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next