ಶಿವಮೊಗ್ಗ: ಮಧ್ಯ ಕರ್ನಾಟಕ ಮತ್ತು ಕರಾವಳಿಯನ್ನು ಬೆಸೆಯುವ ಪ್ರಮುಖ ರಸ್ತೆಯಾಗಿರುವ ಆಗುಂಬೆ ರಸ್ತೆ ಈ ಬಾರಿಯ ಮಳೆಗಾಲದಲ್ಲಿ ಬಂದ್ ಆಗುವುದು ನಿಚ್ಚಳವಾಗಿದೆ. ಮಳೆಗಾಲ ಆರಂಭವಾಗಿದ್ದರೂ ಈ ವರೆಗೆ ಆಗುಂಬೆ ಘಾಟಿ ರಸ್ತೆಯನ್ನು ನಿರ್ವಹಣೆ ಮಾಡುವ ಗೋಜಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿಲ್ಲ. ಗುಡ್ಡದಲ್ಲಿರುವ ಚರಂಡಿಗಳು ಕಸತುಂಬಿ ಬ್ಲಾಕ್ ಆಗಿದ್ದು ಕುಸಿಯುವ ಆತಂಕ ತಂದೊಡ್ಡಿದೆ.
2018 ರಲ್ಲಿ ಗುಡ್ಡ ಕುಸಿತದಿಂದಾಗಿ ಹಲವು ತಿಂಗಳು ಸಂಚಾರ ಬಂದ್ ಆಗಿತ್ತು. 2019ರಲ್ಲೂ ವಿಪರೀತ ಮಳೆ ಹಾಗೂ ದುರಸ್ತಿ ಕಾರಣಕ್ಕೆ ರಸ್ತೆ ಬಂದ್ ಮಾಡಲಾಗಿತ್ತು. ಕಳೆದ ಬಾರಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಅನೇಕ ಅನಾಹುತಗಳೇ ಸಂಭವಿಸಿದ್ದವು. ಆದರೂ ಈ ಬಾರಿ ಮಳೆಗಾಲ ಆರಂಭಗೊಳ್ಳುವ ಮುನ್ನ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ.
ಕುಸಿತಕ್ಕೆ ಕಾರಣ: ಆಗುಂಬೆ ಘಾಟಿ ರಸ್ತೆಯ ಮೇಲ್ಭಾಗದಲ್ಲಿ ಹಿಲ್ ಸ್ಲೋಪ್, ರಸ್ತೆಯ ಕೆಳಗೆ ವ್ಯಾಲಿ ಸ್ಲೋಪ್ ಇದ್ದು, ಮಳೆ ನೀರು ರಸ್ತೆ ಬದಿ ನಿರ್ಮಾಣ ಮಾಡಿರುವ ಚರಂಡಿಯಲ್ಲಿ ಹರಿಯುತ್ತದೆ. ಹೂಳು ತುಂಬಿ ಚರಂಡಿ ಮುಚ್ಚಿಕೊಂಡಿದ್ದರೆ ಗುಡ್ಡದಿಂದ ಹರಿಯುವ ನೀರು ರಸ್ತೆ ಮೇಲೆ ಹರಿದು ರಸ್ತೆಗೆ ಹಾನಿ ಮಾಡುವುದಲ್ಲದೆ ಗಾರ್ಡ್ ವಾಲ್ ಪಕ್ಕ ಹರಿಯಲು ಪ್ರಾರಂಭಿಸುತ್ತದೆ. ಈ ಗಾರ್ಡ್ ವಾಲ್ ಪಕ್ಕ ಟೆಲಿಫೋನ್, ಇತರೆ ಕೇಬಲ್‌ಗಳನ್ನು ಹಾಕಲಾಗಿದ್ದು, ಈ ಜಾಗದ ಮಣ್ಣು ಸಡಿಲವಾಗಿದೆ. ನೀರು ಗಾರ್ಡ್ ವಾಲ್ ಪಕ್ಕ ರಭಸವಾಗಿ ಹರಿಯಲಾರಂಭಿಸಿದರೆ ಸಬ್ ಬೇಸ್, ಸಬ್ ಗ್ರೇಡ್‌ಗೆ (ರಸ್ತೆಯ ಅಡಿಪಾಯ) ಇಳಿದು ಗುಡ್ಡ ಕುಸಿಯುವ ಆತಂಕ ಇದೆ. ಘಾಟಿ ರಸ್ತೆಯ ಹಲವೆಡೆ ಚರಂಡಿಗಳು ಬ್ಲಾಕ್ ಆಗಿವೆ. ಮರಗಳು ಉರುಳಿದ್ದು ಈವರೆಗೂ ತೆರವು ಮಾಡಿಲ್ಲ. ಗುಡ್ಡದ ಒಂದು ತೆರವಿನಲ್ಲಿ ಒಂದು ಕಡೆ ಕುಸಿತವಾಗಿದ್ದು ಅದನ್ನು ಈವರೆಗೂ ಶಾಶ್ವತ ದುರಸ್ತಿ ಮಾಡದೆ ಮರಳು ಚೀಲಗಳನ್ನು ಇಟ್ಟು ಕೈ ತೊಳೆದುಕೊಳ್ಳಲಾಗಿದೆ.
ಶಿವಮೊಗ್ಗದಿಂದ ಉಡುಪಿಗೆ ಹೋಗುವವರು ಆಗುಂಬೆ ಘಾಟಿ ಅಥವಾ ಹುಲಿಕಲ್ ಘಾಟಿ ರಸ್ತೆ ಬಳಸುತ್ತಾರೆ. ಮಳೆಗಾಲದಲ್ಲಿ ಈ ಎರಡು ರಸ್ತೆಗಳೂ ಬಂದ್ ಆಗಿರುವ ಅನೇಕ ಉದಾಹರಣೆಗಳಿವೆ. ಅತ್ತ ಉಡುಪಿಯಿಂದ ಶಿವಮೊಗ್ಗ, ಶೃಂಗೇರಿ, ಕೊಪ್ಪಕ್ಕೆ ಹೋಗುವವರು ಆಗುಂಬೆ ಮೂಲಕವೇ ಬರಬೇಕು. ವೈದ್ಯಕೀಯ ಸೇವೆಗೆ ಹೆಸರುವಾಗಿಯಾಗಿರುವ ಮಣಿಪಾಲಕ್ಕೆ ಮಧ್ಯ ಕರ್ನಾಟಕದಿಂದ ಹೋಗುವ ಸಾವಿರಾರು ಜನ ಇದೇ ಮಾರ್ಗವನ್ನು ಅವಲಂಬಿಸಿದ್ದಾರೆ. ಕೋವಿಡ್ ಲಾಕ್‌ಡೌನ್ ಕಾರಣ ಎರಡು ತಿಂಗಳ ಕಾಲ ಆಸ್ಪತ್ರೆಗೆ ತೆರಳಲಾಗದೆ ವನವಾಸ ಪಡುತ್ತಿದ್ದ ರೋಗಿಗಳಿಗೆ ಈಗ ಮತ್ತೆ ಅಡ್ಡಿಯುಂಟಾಗುವ ಸಾಧ್ಯತೆ ಇದೆ. ರಸ್ತೆ ದುರಸ್ತಿ ಮಾಡದಿದ್ದರೆ ಅನಾಹುತಕ್ಕೆ ಅವಕಾಶ ಮಾಡಿಕೊಟ್ಟಂತೆಯೇ ಸರಿ ಎಂಬುದು ಜನರ ಅಭಿಪ್ರಾಯವಾಗಿದೆ.
ಸರಕಾರದ ಅನುದಾನ ತಡವಾದರೆ ಟಾಸ್ಕ್ ಫೋರ್ಸ್ ಮೂಲಕ ಸಣ್ಣಪುಟ್ಟ ದುರಸ್ತಿ ಕಾಮಗಾರಿಗೆ ಹಣ ಮೀಸಲಿಡಲಾಗುತ್ತಿತ್ತು. ಆಗುಂಬೆ ಘಾಟಿ ನಿರ್ವಹಣಾ ಕಾಮಗಾರಿಗೆ ಸದ್ಯದ ಮಟ್ಟಿಗೆ 50 ಸಾವಿರ ವೆಚ್ಚವಾಗಬಹುದು. ರಸ್ತೆ ಕುಸಿದರೆ 5 ಕೋಟಿ ಕೂಡ ಆಗಬಹುದು. ಮುಂಜಾಗ್ರತೆಯಿಂದ ರಸ್ತೆ ದುರಸ್ತಿ ಮಾಡಬೇಕು. ಸೋಮವಾರ ಈ ಬಗ್ಗೆ ಗಮನಿಸಿ ಇಲಾಖೆ ಗಮನಕ್ಕೆ ತಂದಿದ್ದೇನೆ.
ಬಾಲಕೃಷ್ಣ ಶ್ರೀನಿವಾಸ್,
ನಿವೃತ್ತ ಎಂಜಿನಿಯರ್, ಪಿಡಬ್ಲ್ಯೂಡಿ
ಆಗುಂಬೆ ಘಾಟಿ ರಸ್ತೆ ಸಂಚಾರಕ್ಕೆ ನಿರ್ವಹಣೆ ಹಾಗೂ ದುರಸ್ತಿ ಕಾರ್ಯ ನಡೆಯುತ್ತಿದೆ. ಆ ಬಗ್ಗೆ ನಿರಂತರ ನಿಗಾ ವಹಿಸಲಾಗಿದೆ.
ಶಿವಕುಮಾರ್ ಕೆ.ಬಿ.,
ಜಿಲ್ಲಾಧಿಕಾರಿ, ಶಿವಮೊಗ್ಗ
ಶರತ್ ಭದ್ರಾವತಿ