Advertisement

ಶಿಲ್ಪ ವಿನಾಯಕ

04:53 PM Sep 15, 2018 | |

ವಿಘ್ನ ನಿವಾರಕ ವಿನಾಯಕನ ಆರಾಧನೆಯ ನಮ್ಮ ನಾಡಿನಲ್ಲಿ ಕ್ರಿಸ್ತಶಕ ಆರಂಭದ ಕಾಲದಿಂದಲೂ ಪ್ರಚಲಿತದಲ್ಲಿದೆ.  ಪ್ರಥಮ ಪೂಜಿತನಾದ ಗಣಪತಿಯನ್ನು ತ್ರಿಮೂರ್ತಿಗಳೂ ಆರಾಧಿಸಿದರು. ಯಾವುದೇ ಶುಭಕಾರ್ಯಗಳ ಪ್ರಾರಂಭವು ವಿನಾಯಕನ ಪೂಜೆಯಿಂದಲೇ ಆರಂಭವಾಗುತ್ತದೆ. 

Advertisement

ಇಂತಿಪ್ಪ ಹಿನ್ನೆಲೆಯ ಗಣಪತಿಗೂ ಕನ್ನಡ ನಾಡಿಗೂ ಅವಿನಾಭಾವ ಸಂಬಂಧ ಇದೆ. ನಮ್ಮಲ್ಲಿ ಗಣಪತಿಗೆ ಪ್ರತ್ಯೇಕ ಗುಡಿ ನಿರ್ಮಿಸುವ ಪದ್ಧತಿ ಕದಂಬರ ಕಾಲದಲ್ಲಿಯೇ ಅಸ್ಥಿತ್ವದಲ್ಲಿತ್ತು. ಕರಾವಳಿಯ ತೀರದಲ್ಲಿ ಗಣೇಶನ ಆರಾಧನೆಯು ಬಹಳ ಹಿಂದೆಯೇ ಪ್ರಚಲಿತದಲ್ಲಿತ್ತು. ಗಣೇಶನ ಆರಾಧಕರಾದ ಗಾಣಪತ್ಯ ಪಂಥವು ಇದ್ದುದರಿಂದ ಈಗಲೂ ಗೋಕರ್ಣ ಇಡುಗುಂಜಿ, ಆನೆಗುಡ್ಡೆ, ಗುಡ್ಡೆಟ್ಟು, ಹಟ್ಟಿಯಂಗಡಿ, ಕಾಸರಗೋಡಿನ ಸಮೀಪವಿರುವ ಮುದೋಡು ಮುಂತಾದ ಕಡೆ ಐದನೆಯ ಶತಮಾನಕ್ಕೂ ಹಿಂದಿನ ಗಣೇಶಮೂರ್ತಿಗಳು ಕಾಣಸಿಗುತ್ತದೆ. 

ವಿನಾಯಕನಿಗೆ ಪ್ರತ್ಯೇಕ ಗುಡಿಗಳಲ್ಲದೆ ಶಿವ ಪಂಚಾಯತನ ಪದ್ಧತಿಯಲ್ಲಿ ಪ್ರಧಾನ ದೇವತೆ ಶಿವನಾದರೆ ಶಕ್ತಿ, ಗಣೇಶ, ಸೂರ್ಯ, ವಿಷ್ಣುವಿನ ಮೂರ್ತಿಗಳನ್ನು ಸ್ಥಾಪಿಸಿ ಪೂಜಿಸುವ ರೂಢಿ ಇದೆ.  ಗಣೇಶ ಪಂಚಾಯತರಲ್ಲಿ ಪ್ರಧಾನ ದೇವತೆ. ಸಪ್ತಮಾತೃಕೆಯರ ಸಾಲಿನಲ್ಲಿ ಪ್ರಥಮವಾಗಿ ವೀಣಾಧಾರಿ ಶಿವನ ಮೂರ್ತಿಯಿದ್ದರೆ ಕೊನೆಯಲ್ಲಿ ಗಣಪತಿಯ ಮೂರ್ತಿಯು ಇರುವುದನ್ನು ನಮ್ಮ ನಾಡಿನ ಸಪ್ತಮಾತೃಕೆಯರ ದೇವಾಲಯಗಳಲ್ಲಿ ನೋಡಬಹುದು. ಇದಲ್ಲದೆ ಗಣೇಶನು ಯಂತ್ರರೂಪದಲ್ಲಿಯೂ ಪೂಜೆಗೊಳ್ಳುತ್ತಿರುವನು. ನಮ್ಮ ದೇಹದ ಕುಂಡಲಿಯ ಆರು ಚಕ್ರಗಳಲ್ಲಿ ಮೊದಲನೆಯ ಚಕ್ರ ಮೂಲಾಧಾರವಾಗಿದ್ದು ವಿನಾಯಕನ ಆವಾಸಸ್ಥಾನ ಎನ್ನುವ ಮಾತು ಚಾಲ್ತಿಯಲ್ಲಿದೆ. ತಾಂತ್ರಿಕ ಆರಾಧನೆಯಲ್ಲಿಯೂ ಗಣಪತಿಯನ್ನು ಪೂಜಿಸುವ ಪದ್ಧತಿಯಿದೆ. ಗಣಪತಿಯ ತಾಂತ್ರಿಕರೂಪ ಉಚ್ಚಿಷ್ಟ ಗಣಪತಿಯಾಗಿದ್ದು ಇಲ್ಲಿ ತೊಡೆಯ ಮೇಲೆ ಕುಳ್ಳಿರಿಸಿಕೊಂಡಿರುವ ದೇವಿಯ ಗುಹ್ಯ ಭಾಗವನ್ನು ಗಣೇಶನು ಸೊಂಡಿಲಿನಿಂದ ಸ್ಪರ್ಶಿಸುತ್ತಿರುತ್ತಾನೆ. 

ಮುದ್ಗುಲ ಪುರಾಣವು 32 ಬಗೆಯ ವಿನಾಯಕನನ್ನು ಹೆಸರಿಸಿದೆ. ಆರಂಭ ಕಾಲದಲ್ಲಿ ಗಣೇಶನ ಮೂರ್ತಿಯು ಸರಳವಾಗಿದ್ದು, ದ್ವಿಬಾಹುಗಳನ್ನು ಹೊಂದಿತ್ತು. ಆನೆಯ ತಲೆ, ಅಗಲ ಕಿವಿ, ಕುಬj ದೇಹ, ಡೊಳ್ಳು ಹೊಟ್ಟೆ ಹೊಂದಿದ್ದು ಸರಳ ರೂಪದಲ್ಲಿರುತ್ತದೆ. ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಮಹಾಗಣಪತಿಯು ಕನ್ನಡನಾಡಿನ ಅತ್ಯಂತ ಪ್ರಾಚೀನ ಗಣಪತಿ ಶಿಲ್ಪವೆಂದು ವಿದ್ವಾಂಸರುಗಳು ಗುರುತಿಸಿರುತ್ತಾರೆ. ಈ ಮೂರ್ತಿಯ ಕಾಲ ಸುಮಾರು 3-4ನೇ ಶತಮಾನ, ಇಡುಗುಂಜಿ, ಹಟ್ಟಿಯಂಗಡಿ ಆನೆ ಗುಡ್ಡೆಯ ವಿನಾಯಕ ಮೂರ್ತಿಗಳು  ಐದನೆಯ ಶತಮಾನಕ್ಕೆ ಸೇರುವ ಆದಿ ಕದಂಬರ ಕಾಲದ ಮೂರ್ತಿಗಳಾಗಿವೆ. ಬಾದಾಮಿಯ ಗುಹಾಂತರ ದೇವಾಲಯದಲ್ಲಿ ಮೊದಲನೆಯ ಗುಹೆಯ ಆರಂಭದಲ್ಲಿ ನರ್ತಿಸುತ್ತಿರುವ ನಟರಾಜನ ಎಡಬದಿಯಲ್ಲಿ ನರ್ತಿಸುತ್ತಿರುವ ವಿನಾಯಕನ ಶಿಲ್ಪವು ಚಾಲುಕ್ಯರ ಕಾಲದ ಗಣಪತಿಯ ಮೂರ್ತಿಯಾಗಿದೆ. ಐಹೊಳೆಯ ದುರ್ಗಾ ದೇವಾಲಯದ ಸಂಕೀರ್ಣದ ಸಮೀಪ ಸಾಲಾಗಿ ಸುಮಾರು ಹತ್ತಕ್ಕೂ ಅಧಿಕ ಇಲ್ಲಿ ದೊರೆತ ವಿನಾಯಕನ ಮೂರ್ತಿಗಳನ್ನು ನಿಲ್ಲಿಸಿರುತ್ತಾರೆ. ಎಲ್ಲವೂ ದ್ವಿಬಾಹುಗಳನ್ನು ಹೊಂದಿದ್ದು ಸುಮಾರು ಐದು ಅಡಿಗಳಷ್ಟು ಎತ್ತರವಿದೆ.

Advertisement

ಗಂಗರ ಕಾಲದಲ್ಲಿ

ಗಂಗರ ಕಾಲದಲ್ಲಿ ನಿರ್ಮಿಸಿರುವ ವಿನಾಯಕನ ಮೂರ್ತಿಯು ಬಹಳ ವಿಶೇಷತೆಯನ್ನು ಹೊಂದಿದೆ. ಬಂಡೆಯ ಮೇಲೆ ಉಬ್ಬುಶಿಲ್ಪದಂತೆ ರೂಪಿಸಿರುವ ಶಿಲ್ಪಗಳು ನೋಡಲು ಸರಳವಾಗಿದ್ದರೂ ಸತ್ವಯುತವಾಗಿರುತ್ತವೆ. ಗಣೇಶನ ಶಿಲ್ಪಗಳಲ್ಲಿ ವೈವಿಧ್ಯತೆಯನ್ನು ತಂದ ಕೀರ್ತಿ ಕಲ್ಯಾಣ ಚಾಲುಕ್ಯರು ಹಾಗೂ ಹೊಯ್ಸಳರಿಗೆ ಸಲ್ಲುತ್ತವೆ. ಸೂಕ್ಷ್ಮ ಕೆತ್ತನೆಗಳಿಂದ ಅಲಂಕೃತ ಕಿರೀಟ, ಚತುಭುìಜಗಳು, ಅಷ್ಟಭುಜಗಳು, ನಾಟ್ಯ ಗಣಪತಿ, ವೈವಿಧ್ಯಮಯ ಆಭರಣಗಳು ಮೂರ್ತಿಯ ಸೊಗಸನ್ನು ಹೆಚ್ಚಿಸಿವೆ.

ವಿಜಯನಗರದ ಅರಸರ ಕಾಲದಲ್ಲಿ ಮತ್ತೆ ಗಣಪತಿಯು ಬೃಹದಾಕಾರವನ್ನು ತಾಳಿತು. ಬಳಪದ ಕಲ್ಲನ್ನು ಬಳಸಿದರೆ ಅದರಿಂದ ತಯಾರಾದ ವಿಗ್ರಹವು ಬೇಗ ಹಾಳಾಗುವುದೆಂದು ಗಮನಿಸಿದ ವಿಜಯನಗರದ ಅರಸರು ಕಣಶಿಲೆ (ಗ್ರಾನೈಟ್‌)ಯಿಂದ ಮೂರ್ತಿಗಳನ್ನು ನಿರ್ಮಿಸಿದರು. ಹಂಪೆಯ ಸಾಸಿವೆಕಾಳು ಗಣಪತಿ ಕಡಲೆಕಾಳಿನ ಗಣಪತಿ, ಬೆಂಗಳೂರಿನ ದೊಡ್ಡಗಣಪತಿಯ ಮೂರ್ತಿಗಳನ್ನು ಈ ಮಾತಿಗೆ ಉದಾಹರಣೆಯಾಗಿ ನೀಡಬಹುದು.

ಪಾಳೆಯಗಾರರ ಕಾಲದಲ್ಲಿ ನಿರ್ಮಿಸಿದ ಕೋಟೆಯ ಪ್ರವೇಶದ ರಕ್ಷಣೆಗಾಗಿ ಹಾಗೂ ರಾಜಗೋಪುರದಲ್ಲಿ ವಿನಾಯಕನ ಮೂರ್ತಿಯನ್ನು ನಿರ್ಮಿಸುವ ಸಂಪ್ರದಾಯವಿತ್ತು. ಮುಮ್ಮಡಿ ಕೃಷ್ಣರಾಜ ಒಡೆಯರ್‌ ಶ್ರೀ ತತ್ವನಿಧಿಯಲ್ಲಿ ಮುದ್ಗಲ ಪುರಾಣದಲ್ಲಿರುವಂತೆ 32 ಬಗೆಯ ಗಣೇಶಮೂರ್ತಿಗಳನ್ನು ಸಚಿತ್ರಸಹಿತ ಧ್ಯಾನ ಶ್ಲೋಕದೊಂದಿಗೆ ನೀಡಲಾಗಿದೆ. ಇವರೇ ನಿರ್ಮಿಸಿರುವ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಹೊರಗೋಡೆಯ ದೇವಕೋಷ್ಟಗಳಲ್ಲಿ ಬಹುತೇಕ ಮುದ್ಗುಲ ಪುರಾಣದಲ್ಲಿರುವಂತೆಯೇ ಗಣೇಶನ ಮೂರ್ತಿಯನ್ನು ಗಾರೆಯಿಂದ ನಿರ್ಮಿಸಲಾಗಿದೆ.  ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದ ಹೊರಗೋಡೆಯ ಮೇಲೂ ಗಣೇಶನ ಗಾರೆಯ ಶಿಲ್ಪಗಳಿವೆ.

ಇವು ಹಳೇ ಗಣಪತಿ
  ಕನ್ನಡ ನಾಡಿನ, ಅತ್ಯಂತ ಪ್ರಾಚೀನ ಗಣಪತಿಮೂರ್ತಿ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗೋಕರ್ಣದಲ್ಲಿದೆ. ಇಲ್ಲಿರುವ ಮಹಾಬಲೇಶ್ವರನ ದೇವಾಲಯದ ಸಮೀಪದಲ್ಲಿರುವ ಗಣಪತಿಯನ್ನು ಅತ್ಯಂತ ಪ್ರಾಚೀನ ಶಿಲ್ಪವೆಂದು ಗುರುತಿಸಲಾಗಿದೆ. ಕನ್ನಡ ನಾಡಿನ ಪ್ರಥಮ ಅರಸು ಮನೆತನ ಆದಿ ಕದಂಬರ ಕಾಲದ ನಾಲ್ಕನೆಯ ಶತಮಾನಕ್ಕೆ ಸೇರುವ ಗಣಪತಿಯು ಬಾಲಕನ ರೂಪದಲ್ಲಿದ್ದು, ಅಗಲವಾದ ಆನೆಯ ತಲೆ, ವಿಶಾಲ ಕಿವಿಗಳು, ಡೊಳ್ಳು ಹೊಟ್ಟೆಯನ್ನು ಹೊಂದಿದೆ. ಬಲಗೈಯಲ್ಲಿ ಕಮಲದ ಹೂವನ್ನು ಹಿಡಿದಿದ್ದು ಎಡಗೈಯಲ್ಲಿರುವ ಮೋದಕವನ್ನು ಸೊಂಡಿಲಿನಿಂದ ತಿನ್ನುತ್ತಿರುವಂತೆ ಚಿತ್ರಿಸಲಾಗಿದೆ. ತ್ರೇತಾಯುಗದಲ್ಲಿ ಶಿವನ ಆತ್ಮಲಿಂಗವನ್ನು ತೆಗೆದುಕೊಂಡು ಹೊàಗುತ್ತಿದ್ದ ರಾವಣನಿಂದ ವಿನಾಯಕನು ರಕ್ಷಿಸಿದ ಸ್ಥಳ ಗೋಕರ್ಣವೆಂದು ಸ್ಥಳ ಪುರಾಣ ತಿಳಿಸುತ್ತದೆ.

ಉಡುಪಿ ಜಿಲ್ಲೆಯ ಹಟ್ಟಿಯಂಗಡಿಯಲ್ಲಿ ಎರಡು ಪ್ರಾಚೀನ ಗಣೇಶನ ಶಿಲ್ಪಗಳಿವೆ. ಐದನೆಯ ಶತಮಾನಕ್ಕೆ ಸೇರಿದ್ದು ಎನ್ನಲಾಗುವ ಮೊದಲನೆಯ ಶಿಲ್ಪವು ನೂತನವಾಗಿ ನಿರ್ಮಿಸಿರುವ ದೇವಾಲಯದಲ್ಲಿ ಪೂಜಿಸಲ್ಪುಡುತ್ತಿದೆ. ಮತ್ತೂಂದು ಪುರಾತನ ಗಣಪತಿ ಶಿಲ್ಪವು ಪುರಾತನ ಲೋಕೇಶ್ವರ ದೇವಾಲಯದಲ್ಲಿದೆ. ಕುಳಿತ ಭಂಗಿಯಲ್ಲಿರುವ ದ್ವಿಬಾಹು ಗಣಪತಿಯು ಬಲಗೈಯಲ್ಲಿ ಮೂಲಂಗಿಯನ್ನು ಹಿಡಿದಿದ್ದಾನೆ. 

ನಮ್ಮ ನಾಡಲ್ಲಿ ಚತುಭುìಜ ವಿನಾಯಕ, ಅದರಲ್ಲಿ ಕುಳಿತ ಭಂಗಿಯಲ್ಲಿರುವುದು ಮೈಸೂರಿನ ಬಳಿಯ ಮೂಗೂರಲ್ಲಿ. ಅಲ್ಲಿ ಪ್ರಸಿದ್ಧ ತಿಬ್ಟಾದೇವಿ ದೇವಾಲಯವಿದೆ. ಈ ದೇವಾಲಯದ ಸಮೀಪದಲ್ಲಿರುವ ದೇಶೇಶ್ವರ ದೇವಾಲಯವು ಮೂಲತಃ ಒಂಬತ್ತನೆಯ ಶತಮಾನಕ್ಕೆ ಸೇರುವ ಗಂಗ ಅರಸರ ಕಾಲದ್ದಾಗಿದೆ. ದೇಶೇಶ್ವರ ದೇವಾಲಯದ ನವರಂಗದಲ್ಲಿರುವ ಗಣೇಶನ ಮೂರ್ತಿಯು ವಿಶೇಷವಾಗಿದೆ. ಹಂತ ಹಂತವಾಗಿ ಮೇಲಿರುವ ಕಿರೀಟ, ಅಗಲ ಕಿವಿ, ಒಟ್ಟಾರೆ ಆಕರ್ಷಕವಾಗಿದೆ.  ಇದೇ ರೀತಿ ಕೀರಿಟ ಧರಿಸಿರುವ ಗಣಪತಿ  ಗಜೇಂದ್ರಗಡ ತಾಲ್ಲೂಕಿನಲ್ಲಿರುವ ಸೂಡಿ ಗ್ರಾಮದಲ್ಲಿದೆ. ಇದರ ಸಮೀಪ ಒಂಭತ್ತನೆಯ ಶತಮಾನಕ್ಕೆ ಸೇರುವ ರಾಷ್ಟ್ರಕೂಟರ ಕಾಲದ ಗಣೇಶಮೂರ್ತಿಯಿದೆ. ಪೇಟದ ಮಾದರಿಯ ಕಿರೀಟವನ್ನು ದೇವನು ಧರಿಸಿರುವುದು ವಿಶೇಷ.

ನಾಟ್ಯಗಣಪತಿ, ತಾಂತ್ರಿಕ ಆರಾಧನೆ
ಬೀದರ ಜಿಲ್ಲೆ ಹುಮ್ನಾಬಾದ್‌ ತಾಲ್ಲೂಕಿನ ಜಲಸಂಗ್ವಿಯ ಕಲ್ಲೇಶ್ವರ ದೇವಾಲಯದ ಹೊರಭಿತ್ತಿಯಲ್ಲಿ ನಾಟ್ಯಗಣಪನ ಶಿಲ್ಪವಿದೆ. ಇದೇ ರೀತಿಯ ನಾಟ್ಯ ಗಣಪತಿಯ ಶಿಲ್ಪವನ್ನು ಹಳೇಬೀಡಿನ ಕೇದಾರೇಶ್ವರ ದೇವಾಲಯದ ದಕ್ಷಿ$ಣ ದಿಕ್ಕಿನ ಬಾಗಿಲವಾಡಿನ ಸಮೀಪ ನೋಡಬಹುದು. ಇಲ್ಲಿ, ನರ್ತಿಸುತ್ತಿರುವ ಗಣಪತಿಯನ್ನು ಬಾಲಕನೊಬ್ಬನು ವಿಸ್ಮಯದಿಂದ ನೋಡುತ್ತಿರುವಂತೆ ಚಿತ್ರಿಸಲಾಗಿದೆ.

 ತಲಕಾಡಿನ ಪ್ರಸಿದ್ಧ ವೈದ್ಯನಾಥೇಶ್ವರ ದೇವಾಲಯದ ಹಿಂಬದಿಯಲ್ಲಿ ಒಂದು ಸಣ್ಣ ಗುಡಿಯಲ್ಲಿ ಉಚ್ಚಿಷ್ಟ ಗಣಪತಿಯ ಶಿಲ್ಪವಿದೆ. ಹನ್ನೆರಡನೆಯ ಶತಮಾನಕ್ಕೆ ಸೇರುವ ಗಣಪತಿಯು ದೇವಿಯನ್ನು ತನ್ನ ಎಡತೊಡೆಯ ಮೇಲೆ ಕುಳ್ಳಿರಿಸಿಕೊಂಡಿದ್ದಾನೆ.  ಇದೇ ರೀತಿಯ ಗಣಪತಿಯ ಗಾರೆಯ ಮೂರ್ತಿಯು ಕ್ರಿ.ಶ. 1848ರಲ್ಲಿ ನಿರ್ಮಿತ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಹೊರಪ್ರಾಕಾರದಲ್ಲಿ ಸಾಲಾಗಿ ನಿರ್ಮಿಸಿರುವ 32 ಗಣಪತಿ ಮೂರ್ತಿಗಳಲ್ಲಿ ಒಂದು ಮೂರ್ತಿಯಲ್ಲಿ ಕಾಣಬಹುದು.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ ಬಯಲು ಗಣಪತಿಯ ಮೂರ್ತಿಯಿದೆ. ಚಿತ್ರದುರ್ಗದ ನಾಯಕುಗಳ ಕಾಲದಲ್ಲಿ ನಿರ್ಮಿತವಾಗಿರುವ ಸುಮಾರು 10 ಅಡಿ ಎತ್ತರವಿರುವ ಗಣಪತಿಯ ವಿಶೇಷತೆ ಗಣಪತಿಯ ಹಿಂಭಾಗವು ಸ್ತ್ರೀರೂಪದಲ್ಲಿದ್ದು ಜಡೆಯಿದೆ. ಮಾತೃಸ್ವರೂಪವನ್ನು ಬಿಂಬಿಸುವ ಗಜವದನನ ಕಂಕುಳಲ್ಲಿ ನರಸಿಂಹನ ಸಣ್ಣ ಶಿಲ್ಪವಿದೆ. ಇದು ಸಹ ಬಹಳ ಅಪರೂಪವಾಗಿದ್ದು ಈಗ ಗಣಪತಿಗೆ ಆಲಯವನ್ನು ನಿರ್ಮಿಸಲಾಗಿದೆ.

ಕೆಂಗೇರಿ ಚಕ್ರಪಾಣಿ 

Advertisement

Udayavani is now on Telegram. Click here to join our channel and stay updated with the latest news.

Next