Advertisement

ರಾಜರಾಜೇಶ್ವರಿ ನಗರದ ಟಿಕೆಟ್‌ಗೆ  ಶಿಲ್ಪಾ ಗಣೇಶ್‌ ಲಾಬಿ

11:51 AM Apr 26, 2017 | |

ಬೆಂಗಳೂರು: ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲು ಗೋಲ್ಡನ್‌ ಸ್ಟಾರ್‌ ಗಣೇಶ್‌ ಪತ್ನಿ ಶಿಲ್ಪಾ ಗಣೇಶ್‌ ಪ್ರಯತ್ನ ಆರಂಭಿಸಿದ್ದಾರೆ.

Advertisement

ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆಯೂ ಆಗಿರುವ ಶಿಲ್ಪಾ ಗಣೇಶ್‌ ಅವರ ಮನೆ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲೇ ಇರುವುದರಿಂದ ಅದನ್ನೇ ಪ್ರಧಾನವಾಗಿಟ್ಟುಕೊಂಡು ಚಿತ್ರೋದ್ಯಮದ ಬೆಂಬಲದೊಂದಿಗೆ ಬಿಜೆಪಿ ಟಿಕೆಟ್‌ ಗಿಟ್ಟಿಸಿಕೊಳ್ಳಲು ಲಾಬಿ ಆರಂಭಿಸಿದ್ದು,   ಪತಿಯಾದ ನಟ ಗಣೇಶ್‌ ಕೂಡ  ಹೆಂಡತಿ ರಾಜಕೀಯ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳಲಾಗಿದೆ.

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ 2008ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ, 2013ರಲ್ಲಿ ಕಾಂಗ್ರೆಸ್‌ನ ಮುನಿರತ್ನ ಅವರು ಈ ಕ್ಷೇತ್ರವನ್ನು ಬಿಜೆಪಿ ಕೈಯಿಂದ ಕಸಿದುಕೊಂಡಿದ್ದರು. ಅದನ್ನು ಮತ್ತೆ ತನ್ನ ವಶಕ್ಕೆ ತೆಗೆದುಕೊಳ್ಳಲು ಬಿಜೆಪಿ ಈಗಾಗಲೇ ಕಾರ್ಯತಂತ್ರ ಆರಂಭಿಸಿದೆ. ಇದರ ಪರಿಣಾಮ ಕ್ಷೇತ್ರದಲ್ಲಿ ಅಭ್ಯರ್ಥಿಗಳಾಗಲು ಭಾರೀ ಪೈಪೋಟಿ ಆರಂಭವಾಗಿದೆ.

ಶಿಲ್ಪಾ ಗಣೇಶ್‌ ಜತೆಗೆ ಪಾಲಿಕೆ ಮಾಜಿ ಸದಸ್ಯ ಜಿ.ಎಚ್‌.ರಾಮಚಂದ್ರ (ನಟಿ ಅಮೂಲ್ಯ ಅವರ ಮಾವ), ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಅವರ ಬಂಧು ಎ.ರವಿ ಮತ್ತು ಬಿಜೆಪಿ ರಾಜ್ಯ ಕಾರ್ಯದರ್ಶಿ ಪಿ.ಮುನಿರಾಜು ಗೌಡ (ತುಳಸಿ ಮುನಿರಾಜು) ಕೂಡ ಈ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಸ್ಪರ್ಧೆಯಲ್ಲಿದ್ದಾರೆ.

ರಾಷ್ಟ್ರೀಯ ನಾಯಕರ ಮೂಲಕ ಶಿಲ್ಪಾ ಯತ್ನ 
ರಾಜರಾಜೇಶ್ವರಿ ನಗರದಿಂದ ಟಿಕೆಟ್‌ಗಾಗಿ ಆರ್‌ಎಸ್‌ಎಸ್‌ನ ನೆರವು ಪಡೆದು ರಾಷ್ಟ್ರೀಯ ನಾಯಕರ ಮೂಲಕ ಪಕ್ಷದ ರಾಜ್ಯ ಘಟಕದ ಮೇಲೆ ಒತ್ತಡ ಹೇರಲು ಶಿಲ್ಪಾ ಗಣೇಶ್‌ ಪ್ರಯತ್ನಿಸುತ್ತಿದ್ದು, ಇದಕ್ಕೆ ನಟ ಗಣೇಶ್‌ ಕೂಡ ಬೆಂಬಲಕ್ಕೆ ನಿಂತಿದ್ದಾರೆ. ಈಗಾಗಲೇ ಅವರು ಆರ್‌ಎಸ್‌ಎಸ್‌ನ ಕೆಲವು ಮುಖಂಡರೊಂದಿಗೆ ಈ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.

Advertisement

ಇನ್ನೊಂದೆಡೆ ಆರ್‌ಎಸ್‌ಎಸ್‌ನ ಕೆಲವು ಮುಖಂಡರು ಪಿ.ಮುನಿರಾಜು ಗೌಡ ಅವರ ಪರ ಒಲವು ಹೊಂದಿದ್ದಾರೆ. ಇನ್ನೊಂದೆಡೆ ಕಳೆದ ಬಾರಿ ಬ್ಯಾಟರಾಯನಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಎ.ರವಿ ಅವರಿಗೆ ಈ ಬಾರಿ ರಾಜರಾಜೇಶ್ವರಿ ನಗರದಿಂದ ಟಿಕೆಟ್‌ ಕೊಡಿಸಲು ಆರ್‌.ಅಶೋಕ್‌ ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ, ಜಿ.ಎಚ್‌.ರಾಮಚಂದ್ರ ಅವರು ಪಕ್ಷದ ರಾಜ್ಯ ನಾಯಕರ ಮೂಲಕ ಟಿಕೆಟ್‌ಗಾಗಿ ಲಾಭಿ ನಡೆಸುತ್ತಿದ್ದಾರೆ.

ಏನೇ ಆದರೂ ಅಂತಿಮ ಕ್ಷಣದಲ್ಲಿ ಗೆಲ್ಲುವ ಅಭ್ಯರ್ಥಿಯನ್ನೇ ಬಿಜೆಪಿ ಆಯ್ಕೆ ಮಾಡಲಿದ್ದು, ಅದಕ್ಕಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಬೂತ್‌ ಮಟ್ಟದಿಂದ ಕಾರ್ಯಕರ್ತರ ಮೂಲಕ ವರದಿ ತರಿಸಿಕೊಂಡು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next