Advertisement

ಧನಗರ ಗೌಳಿಗರ ಶಿಲ್ಲಂಗಾನ ಹಬ್ಬ 

08:52 PM Oct 13, 2021 | Team Udayavani |

ವರದಿ: ಮುನೇಶ ಬಿ. ತಳವಾರ

Advertisement

ಮುಂಡಗೋಡ: ತಾಲೂಕಿನ ಧನಗರ ಗೌಳಿ ಜನಾಂಗದವರು ನವರಾತ್ರಿ ಉತ್ಸವವನ್ನು ಬಹಳ ವಿಶೇಷ ರೀತಿಯಲ್ಲಿ ಅದ್ದೂರಿಯಾಗಿ ಆಚರಿಸುತ್ತಾ ಬರುತ್ತಿರುವುದು ಗಮನ ಸೆಳೆಯುತ್ತದೆ.

ತಾಲೂಕಿನ ಮೈನಳ್ಳಿ, ಬಡ್ಡಿಗೇರಿ, ಚಳಗೇರಿ, ಕಳಕಿಖಾರೆ, ಕುದುರೆನಾಳ ಮತ್ತು ಬ್ಯಾನಳ್ಳಿ ಸೇರಿದಂತೆ ಒಟ್ಟು 32 ಹಳ್ಳಿಗಳಲ್ಲಿ ವಾಸವಾಗಿರುವ ಧನಗರ ಗೌಳಿ ಜನಾಂಗವು ಮೂಲತಃ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದವರು. ಇವರ ಮೂಲ ಕಸುಬು ಹೈನುಗಾರಿಕೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಈ ಜನಾಂಗದ ಮೂಲ ಕಸುಬು ಹೈನುಗಾರಿಕೆ ನಶಿಸುತ್ತಾ ಬಂದಿದೆ. ಇದಕ್ಕೆ ಮುಖ್ಯ ಕಾರಣ ಹಲವಾರು. ಕೆಲ ಅರಣ್ಯ ಸಿಬ್ಬಂದಿ ಅರಣ್ಯದಲ್ಲಿ ಹಸು ಹಾಗೂ ಎಮ್ಮೆಗಳನ್ನು ಮೇಯಿಸಲು ಬಿಡದಿರುವುದು, ಮೇವು ಹಾಗೂ ನೀರಿನ ಕೊರತೆ ಇತ್ಯಾದಿ. ಈ ಹಿಂದೆ ನೂರಾರು ಎಮ್ಮೆ ಹಾಗೂ ಹಸುಗಳನ್ನು ಸಾಕುತ್ತಿದ್ದರು. ಆದರೆ ಈಗ ಇವು ಸಂಖ್ಯೆ ಕ್ಷೀಣಿಸುತ್ತಾ ಬಂದಿದೆ.

ದಸರಾ ಮುಗಿದ ಮಾರನೇ ದಿನ ಆಚರಿಸುವ ವಿಶೇಷ ಹಬ್ಬವೇ ಶಿಲ್ಲಂಗಾನ. ಇದರ ವಿಶೇಷತೆ ಎಂದರೆ ನಮ್ಮ ಊರಿಗೆ ಒಳ್ಳೆಯದಾಗಲಿ ದನಕರುಗಳಿಗೆ ರೋಗ ಬರದಂತಿರಲಿ ಎಂದು ಹರಕೆ ತೀರಿಸುವುದು. ಇದನ್ನು ಒಂದು ಊರಿನಲ್ಲಿ ಹಮ್ಮಿಕೊಂಡು ಅಕ್ಕ ಪಕ್ಕದ ಊರುಗಳಿಗೆ ತಾಂಬೂಲ ಕೊಟ್ಟು ಜನರನ್ನು ಆಮಂತ್ರಿಸಲಾಗುತ್ತದೆ. ಆಮಂತ್ರಣ ಸ್ವೀಕರಿಸಿ ನೂರಾರು ಜನ ಬೇರೆ ಬೇರೆ ಊರುಗಳಿಂದ ಬಂದಿರುತ್ತಾರೆ. ಮಹಿಳೆಯರು ಮಡಕೆಯಲ್ಲಿ ಮಜ್ಜಿಗೆ ಮತ್ತು ಅದರ ಮೇಲೊಂದು ತೆಂಗಿನಕಾಯಿ ಇಟ್ಟುಕೊಂಡು ಮತ್ತು ಪುರುಷರು ವಾದ್ಯಗಳ ಮೂಲಕ ಸ್ವಾಗತ ಮಾಡುತ್ತಾರೆ.

ಶುಭ್ರ ಶ್ವೇತ ವರ್ಣದ ಬಟ್ಟೆ ಧರಿಸಿ ತಲೆಗೆ ಪಟಗ ಸುತ್ತಿಕೊಂಡು ಗಜ ಕುಣಿತ ಕುಣಿಯುತ್ತಾ ಬನ್ನಿ ಗಿಡಕ್ಕೆ ಹೋಗಿ ಮೊದಲು ಖಡ್ಗದಿಂದ ಬನ್ನಿ ಕೊಯ್ದು ನಂತರ ಬನ್ನಿಯನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡು ಶುಭಾಶಯ ಕೋರುತ್ತಾರೆ. 8ನೇ ದಿನ ರಾತ್ರಿ ಇಡೀ ಜಾಗರಣೆ ಮಾಡಿ ಊರಿನವರೆಲ್ಲಾ ಸೇರಿ ಮುರಳಿ ವಾದನ, ಗಜ ನೃತ್ಯ ಮಾಡಿ ಪ್ರತಿಯೊಬ್ಬರ ಮನೆಗೆ ಹೋಗಿ ಆಯುಧ ಪೂಜೆ ಮಾಡುವರು. ಪೂಜೆ ಪಠಣಗಳೊಂದಿಗೆ ಹರಹರ ಚಾಂಗಬಲಾ (ಎಲ್ಲರಿಗೂ ಶುಭವಾಗಲಿ) ಎಂಬ ಘೋಷ ವಾಕ್ಯದೊಂದಿಗೆ ಜಯಕಾರ ಹಾಕುತ್ತಾರೆ. ಒಂದೇ ತಟ್ಟೆಯಲ್ಲಿ ಒಂದೊಂದು ತುತ್ತು ಸುಮಾರು 15 ಜನ ಸೇರಿ ಸ್ವೀಕಾರ ಮಾಡುತ್ತಾರೆ. ವಾದ್ಯಗಳೊಂದಿಗೆ ವಿವಿಧ ರೀತಿಯ ನೃತ್ಯ ಮಾಡುತ್ತಾ ಶಿಲ್ಲಂಗಾನದ ಹಲವಾರು ವಿಧಿ ವಿಧಾನಗಳನ್ನು ನೆರವೇರಿಸಿ ಊರುಗಳಿಗೆ ತೆರಳುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next