ಮೊಹಾಲಿ: ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ರ ಭರ್ಜರಿ ಬ್ಯಾಟಿಂಗ್ ಸಾಹಸದಿಂದ ಭಾರತ ಪ್ರವಾಸಿ ಆಸೀಸ್ ವಿರುದ್ಧ 358 ರನ್ ಗಳಿಸಿ ದೊಡ್ಡ ಗುರಿ ನೀಡಿದೆ. ಕಳಪೆ ಫಾರ್ಮ್ ನಿಂದ ಹೊರಬಂದ ಶಿಖರ್ ಧವನ್ ಶತಕ ಬಾರಿಸಿ ಮಿಂಚಿದರೆ, ರೋಹಿತ್ ಶರ್ಮಾ 95 ರನ್ ಗೆ ಔಟ್ ಆಗಿ ಕೇವಲ ಐದು ರನ್ ನಿಂದ ಶತಕ ತಪ್ಪಿಸಿಕೊಂಡರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ ಕೊಹ್ಲಿಯ ಯೋಜನೆ ಫಲಕೊಟ್ಟಿತು. ಸರಣಿಯಲ್ಲಿ ಮೊದಲ ಬಾರಿಗೆ ಉತ್ತಮ ಆರಂಭ ನೀಡಿದ ಧವನ್ – ಶರ್ಮಾ ಜೋಡಿ, ಮೊದಲ ವಿಕೆಟ್ ಗೆ 193 ರನ್ ಗಳ ಭರ್ಜರಿ ಜೊತೆಯಾಟವಾಡಿದರು. 95 ರನ್ ಗಳಿಸಿದ್ದ ರೋಹಿತ್ ಜೇ ರಿಚರ್ಡ್ಸನ್ ಅವರಿಗೆ ವಿಕೆಟ್ ಒಪ್ಪಿಸುವುದರೊಂದಿಗೆ ಆಸೀಸ್ ಪಂದ್ಯದಲ್ಲಿ ಮೊದಲ ಖುಷಿ ಅನುಭವಿಸಿತು.
ಗಬ್ಬರ್ ಈಸ್ ಬ್ಯಾಕ್ : ಕಳಪೆ ಬ್ಯಾಟಿಂಗ್ ಫಾರ್ಮ್ನಿಂದಾಗಿ ಟೀಕೆಗೆ ಗುರಿಯಾಗಿದ್ದ ಧವನ್ ಇಂದು ಎಲ್ಲಾ ಟೀಕಾಕಾರರಿಗೆ ತನ್ನ ಬ್ಯಾಟಿನಿಂದಲೇ ಉತ್ತರ ನೀಡಿದರು. ಕೇವಲ 115 ಎಸೆತ ಎದುರಿಸಿದ ಧವನ್ 18 ಬೌಂಡರಿ ಮತ್ತು ಮೂರು ಭರ್ಜರಿ ಸಿಕ್ಸರ್ ನೆರವಿನಿಂದ 143 ರನ್ ಗಳಿಸಿದರು. ರಾಹುಲ್ ಜೊತೆಗೆ 61 ರನ್ ಜೊತೆಯಾಟ ನಡೆಸಿದ ಶಿಖರ್ ಪ್ಯಾಟ್ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದರು,
ಬಹುಸಮಯದ ನಂತರ ಅವಕಾಶ ಪಡೆದ ಕೆ.ಎಲ್.ರಾಹುಲ್ 26 ರನ್ ಗಳಸಿದರೆ, ನಾಯಕ ಕೊಹ್ಲಿ ಏಳು ರನ್ ಗಳಿಸಿ ಔಟಾದರು. ಧೋನಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ರಿಷಭ್ ಪಂತ್ 36 ರನ್ ಗಳಿಸಿದರು. ವಿಜಯ್ ಶಂಕರ್ ಗಳಿಕೆ 26 ರನ್.
ಕೊನೆಯಲ್ಲಿ ಕುಸಿದ ಭಾರತ: 296 ರನ್ ಗೆ ನಾಲ್ಕನೇ ವಿಕೆಟ್ ಕಳೆದುಕೊಂಡ ಭಾರತ ಕೊನೆಗೆ 9 ವಿಕೆಟ್ ಕಳೆದುಕೊಂಡಿತು. ಆಸೀಸ್ ಪರ ಪ್ಯಾಟ್ ಕಮಿನ್ಸ್ 5 ವಿಕೆಟ್, ಜೇ ರಿಚರ್ಡ್ಸನ್ ಮೂರು ವಿಕೆಟ್ ಪಡೆದರು.