Advertisement

ಯಶಸ್ವಿನಿ ಯೋಜನೆ ಪುನಾರಂಭವಾಗಲಿ

03:32 PM Nov 18, 2019 | Naveen |
ಶಿಕಾರಿಪುರ: ರಾಜ್ಯ ಸರ್ಕಾರ ಸಹಕಾರಿ ಕ್ಷೇತ್ರಕ್ಕೆ ನೀಡಿದ ಯಶಸ್ವಿನಿ ಯೋಜನೆಯನ್ನು ಪುನರ್‌ ಆರಂಭಿಸಬೇಕು ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡ ಹೇಳಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ 66ನೇ ಅಖೀಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದಿನ ರಾಜ್ಯ ಸರ್ಕಾರ ಸಹಕಾರಿ ಸಂಘಗಳಿಗೆ ನೀಡಿದ ಯಶಸ್ವಿನಿ ಯೋಜನೆಯನ್ನು ತೆಗೆದು ಹಾಕಿ ಹೊಸ ಯೋಜನೆಯನ್ನು ನೀಡಿದ್ದು ಇದು ಬಡವರಿಗೆ, ರೈತರಿಗೆ ಸರಿಯಾಗಿ ಬಳಕೆಯಾಗುತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಹಿಂದೆ ಮುಖ್ಯಮಂತ್ರಿಗಳಾಗಿದ್ದಾಗ ಈ ಯೋಜನೆಗೆ ಪ್ರೋತ್ಸಾಹ ನೀಡಿ ಇನ್ನೂ ಹೆಚ್ಚು ಸೌಲಭ್ಯ ನೀಡಿದ್ದರು.
ನಮ್ಮ ಸೌಭಾಗ್ಯದಿಂದ ಮತ್ತೆ ಅವರು ಮುಖ್ಯಮಂತ್ರಿಯಾಗಿದ್ದಾರೆ. ಈ ಯೋಜನೆಯನ್ನು ಪುನರ್‌ ಆರಂಭಿಸುವ ಮೂಲಕ ಬಡ ಜನರಿಗೆ, ರೈತಾಪಿ ವರ್ಗದವರಿಗೆ ಅನುಕೂಲ ಮಾಡಿಕೊಡಬೇಕು ಎಂದರು. ಶಿಕಾರಿಪುರ ತಾಲೂಕು ಮಟ್ಟದಲ್ಲಿ ಒಂದು ಮೆಗಾ ಡೈರಿ ಸ್ಥಾಪನೆ ಮಾಡುವುದರಿಂದ ಸುತ್ತಮುತ್ತಲಿನ 3-4 ಜಿಲ್ಲೆಗಳಿಗೆ ಅದರ ಉಪಯೋಗವಾಗುತ್ತದೆ. ಇದು ಗ್ರಾಮೀಣ ಜನರ ಅರ್ಥಿಕ ಅಭಿವೃದ್ಧಿಗೆ ಮುಖ್ಯ ಪಾತ್ರ ನಿರ್ವಹಿಸಬಹುದು ಎಂದರು. ರಾಷ್ಟ್ರೀಯ ಬ್ಯಾಂಕ್‌ಗಳು ಸಾವಿರಾರು ಕೋಟಿ ಹಣ ಇದ್ದರೂ ಸಣ್ಣ, ಅತೀ ಸಣ್ಣ ರೈತರಿಗೆ ಸಾಲ ನೀಡುವುದಿಲ್ಲ. ನಮ್ಮ ಸಹಕಾರಿ ಸಂಘಗಳ ಮೂಲಕ ಲಕ್ಷಾಂತರ ಸಣ್ಣ, ಅತೀ ಸಣ್ಣ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿದ್ದೇವೆ. ರೈತರು ಸರ್ಕಾರ ಕೊಡುವ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕು. ಪಡೆದ ಸಾಲವನ್ನು ಕಟ್ಟಬೇಕು. ಈ ಮೂಲಕ ಒಬ್ಬರು ಎಲ್ಲರಿಗಾಗಿ, ಎಲ್ಲರೂ ಒಬ್ಬರಿಗಾಗಿ ಎಂಬ ಸಹಕಾರಿ ತತ್ವ ಪಾಲನೆಯಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಸಹಕಾರಿ ಸಪ್ತಾಹದ ಮುಖ್ಯ ಉದ್ದೇಶ ಸಹಕಾರಿ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವುದು. ಇದರಿಂದ ಸಹಕಾರಿ ಸಂಘಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಸಹಕಾರಿ ಕ್ಷೇತ್ರದಲ್ಲಿ ಪರಸ್ಪರ ನಂಬಿಕೆ ವಿಶ್ವಾಸ ಮುಖ್ಯ. ಜನರು ಪಡೆದ ಸಾಲವನ್ನು ನಿಯಮಿತ ಅವ ಧಿಯೊಳಗೆ ಮರುಪಾವತಿ ಮಾಡಿದ್ದಾರೆ. ಸಹಕಾರಿ ಸಂಘಗಳು ಇನ್ನೊಬ್ಬರಿಗೆ ಸಾಲ ನೀಡಿದರೆ ಅವರ ಕಷ್ಟಗಳಿಗೆ ಸಹಕಾರವಾಗುತ್ತದೆ. ರೈತರಿಗೆ ದೊಡ್ಡ ಮಟ್ಟದಲ್ಲಿ ಸಹಕಾರ ಮಾಡುವುದು ಪುಣ್ಯದ ಕೆಲಸವಾಗಿದೆ ಎಂದರು.
ರಾಷ್ಟ್ರೀಕೃತ ಬ್ಯಾಂಕ್‌ಗಳು ಮಾಡದೇ ಇರುವ ಕೆಲಸವನ್ನು ಸಹಕಾರಿ ಸಂಸ್ಥೆಗಳು ಮಾಡುತ್ತಿವೆ. ಯುಪಿಎ ಸರ್ಕಾರ ಸಹಕಾರಿ ಬ್ಯಾಂಕ್‌ಗಳ ಮೇಲೆ ಆದಾಯ ತೆರಿಗೆ ಹೇರಿರುವುದು ಸರಿಯಲ್ಲ. ಈ ಬಗ್ಗೆ ಕೇಂದ್ರ ಅರ್ಥಿಕ ಸಚಿವರ ಬಳಿ ಈ ಹಿಂದೆಯೇ ಚರ್ಚೆ ಮಾಡಿದ್ದು ಮನವಿ ಸಹ ನೀಡಿದ್ದೇವೆ. ಈ ನಿಯಮವನ್ನು ಹಿಂತೆಗೆದುಕೊಳ್ಳುವುದು ಸರ್ಕಾರಕ್ಕೆ ಬಿಟ್ಟ ವಿಷಯವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಸಹಕಾರಿ ಸಂಘಗಳು ದೊಡ್ಡಮಟ್ಟದ ಪಾತ್ರ ನಿರ್ವಹಿಸಿವೆ. ಗ್ರಾಮೀಣ ಮಟ್ಟದ ರೈತರ, ಸಣ್ಣ ವ್ಯಾಪಾರಿಗಳ ಜೀವನ ಮಟ್ಟದಲ್ಲಿ ಅಭಿವೃದ್ಧಿಗೆ ಶ್ರಮಿಸುವ ಸಂಸ್ಥೆಗಳೆಂದರೆ ಸಹಕಾರಿ ಸಂಘಗಳು. ಸಹಕಾರಿ ಸಂಘಗಳು ತನ್ನ ಸ್ವಂತಕ್ಕಾಗಿ ಲಾಭವನ್ನು ಬಳಸಿಕೊಳ್ಳುತ್ತಿಲ್ಲ. ಆದರೆ ಅಂದಿನ ಕೇಂದ್ರ ಸರ್ಕಾರದ ಅರ್ಥಿಕ ಸಚಿವ ಚಿಂದಂಬರಂ ಸಹಕಾರಿ ಸಂಘಗಳ ಮೇಲೆ ಆದಾಯ ತೆರಿಗೆ ಹೇರಿರುವುದರಿಂದ ಸಹಕಾರಿ ಸಂಘಗಳ ಬೆಳವಣಿಗೆ ಕುಂಠಿತವಾಗಿದೆ ಎಂದರು.
ಸಹಕಾರಿ ಮಹಾ ಮಂಡಳಿ ಉಪಾಧ್ಯಕ್ಷ ಡಾ| ಬಿ.ಡಿ. ಭೂಕಾಂತ್‌, ಜಿಲ್ಲಾ ಯೂನಿಯನ್‌ ಅಧ್ಯಕ್ಷ ಸುರೇಶ್‌, ಸಹಕಾರಿ ಸಂಘದ ಉಪ ನಿಬಂಧಕ ತಿಪ್ಪೇಸ್ವಾಮಿ, ಹಾಲು ಒಕ್ಕೂಟ ನಿರ್ದೇಶಕ ಶಿವಶಂಕರ್‌, ತಾಪಂ ಅಧ್ಯಕ್ಷ ಶಂಭು ಕಣೇದರ್‌, ಜಿಪಂ ಸದಸ್ಯೆ ರೇಣುಕಾ, ಸವಿತಾ ಸುರೇಶ್‌, ಮಂಜಾಚಾರ್‌, ಕೆ. ಹಾಲಪ್ಪ, ವೀರನಗಭಡ, ತೀರ್ಥಪ್ರಸನ್ನ, ಗುರುರಾಜ್‌ ಜಕ್ಕಿನಕೊಪ್ಪ, ರಾಮಯ್ಯ, ನಾಗರಾಜಪ್ಪ, ಸಿದ್ದಲಿಂಗಪ್ಪ ಇದ್ದರು.
Advertisement

Udayavani is now on Telegram. Click here to join our channel and stay updated with the latest news.

Next