Advertisement

ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲೇ ರಾಷ್ಟ್ರ ಧ್ವಜಕ್ಕೆ ಅವಮಾನ?

01:30 PM Oct 24, 2019 | Naveen |

„ರಘು ಶಿಕಾರಿಪುರ
ಶಿಕಾರಿಪುರ:
ಸ್ಥಳೀಯ ಸಂಸ್ಥೆ ಸೇರಿದಂತೆ ಎಲ್ಲ ಸರಕಾರಿ ಕಚೇರಿಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕೆಂಬ ಸರಕಾರಿ ಆದೇಶವಿದೆ. ಇದು ರಾಷ್ಟ್ರ ಹಾಗೂ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವ ಪ್ರತಿಕವೂ ಹೌದು. ಆದರೆ ಇತ್ತಿಚೀನ ದಿನಗಳಲ್ಲಿ ಸರ್ಕಾರದ ಈ ಆದೇಶ ಕೇವಲ ದಾಖಲೆಗಳಾಗಿ ಮಾತ್ರ ಉಳಿದಿವೆಯೇ ಎಂಬ ಪ್ರಶ್ನೆ ಮೂಡಿದೆ. ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲೇ ಗ್ರಾಮ ಪಂಚಾಯತಿ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರದೇ ಇರುವುದು ಬೆಳಕಿಗೆ ಬಂದಿದೆ.

Advertisement

ಹೌದು.. ಶಿಕಾರಿಪುರ ತಾಲೂಕಿನ ಬೇಗೂರು ಗ್ರಾಪಂ ಕಾರ್ಯಾಲಯದ ಎದುರು ಸರಿಯಾಗಿ ರಾಷ್ಟ್ರದ್ವಜ ಹಾರಿಸುತ್ತಿಲ್ಲ. ಕಳೆದ ಭಾನುವಾರವಂತೂ ಧ್ವಜಕಂಬದಲ್ಲಿ ಧ್ವಜ ಹಾರಲೇ ಇಲ್ಲ. ಪ್ರತಿ ಗ್ರಾಪಂಗಳಲ್ಲಿ ಗ್ರಾಮ ಸಹಾಯಕ ಧ್ವಜವನ್ನು ಬೆಳಗ್ಗೆ ಏರಿಸಬೇಕು ಮತ್ತು ಸಂಜೆ ಇಳಿಸಬೇಕು. ಅದರೆ ಇದು ಸರಿಯಾಗಿ ನಡೆಯುತ್ತಿಲ್ಲ. ರಜೆ ದಿನಗಳಲ್ಲಿ ಧ್ವಜವನ್ನು ಇಳಿಸದೇ ಹಾಗೇ ಬಿಡುವುದು ಇವೆಲ್ಲ ಸಾಮಾನ್ಯವಾಗಿದೆ.

ಅಲ್ಲದೆ ಇಲ್ಲಿ ಬಣ್ಣ ಮಾಸಿದಂತೆ ಕಾಣುವ ಮತ್ತು ಸಣ್ಣದಾಗಿ ಹರಿದಿರುವ ಧ್ವಜ ಹಾರಿಸುತ್ತಿದ್ದಾರೆ. ಅಲ್ಲದೆ ಪ್ರತಿದಿನ ಸಂಜೆ ಗ್ರಾಮ ಸಹಾಯಕರು ಒಬ್ಬರೇ ಧ್ವಜ ಇಳಿಸುವುದರಿಂದ ಅನೇಕ ಬಾರಿ ಧ್ವಜ ನೆಲಕ್ಕೆ ಸ್ಪರ್ಶವಾಗುತ್ತಿದೆ. ಧ್ವಜ ಹಾರಿಸಲು ಕಾರ್ಯ ನಿರ್ವಹಿಸುವ ವ್ಯಕ್ತಿಗೆ ಸರ್ಕಾರದಿಂದ ದಿನಕ್ಕೆ 30 ರೂ. ಗಳಂತೆ ತಿಂಗಳಿಗೆ 900 ರೂ.ಗಳನ್ನು ನೀಡಲಾಗುತ್ತದೆ. ಅದರೆ ಪಿಡಿಒ, ಗ್ರಾಪಂ ಆಡಳಿತ ಮಂಡಳಿ ಈ ಹಣವನ್ನು ಅವರಿಗೆ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಸರ್ಕಾರಿ ಆದೇಶದ ಪ್ರಕಾರ ದ್ವಜ “1950 ರಾಷ್ಟ್ರಧ್ವಜ ಪ್ರದರ್ಶನ ಮತ್ತು ಅಭಿದಾನ ಕಾಯ್ದೆ’ ಮತ್ತು “ರಾಷ್ಟ್ರ ಘನತೆಯೆಡೆಗಿನ ಅಪಮಾನ ತಡೆ ಕಾಯ್ದೆ 1971′ ಹಾಗೂ ಭಾರತ ಧ್ವಜ ಸಂಹಿತೆ 2002 ಇದರಲ್ಲಿ ಎಲ್ಲಾ ಆಚರಣೆ, ಸಂಪ್ರದಾಯ ಮತ್ತು ಸೂಚನೆಗಳನ್ನು ಒಳಗೊಂಡಿದೆ. ಆದರೆ ಗ್ರಾಮೀಣ ಅಭಿವೃದ್ಧಿ ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳಿಗೆ ಬಹುಶಃ ಈ ನಿಯಮಗಳು ಕೇವಲ ಪುಸ್ತಕಗಳಿಗೆ ಮಾತ್ರ ಸೀಮಿತ ಎನ್ನುವಂತಾಗಿದೆ ಎಂಬುದಕ್ಕೆ ಬೆಗೂರು ಗ್ರಾ.ಪಂ. ಕಾರ್ಯಾಲಯ ಸಾಕ್ಷಿಯಾಗಿದೆ.

ಗ್ರಾಮ ಪಂಚಾಯತ್‌ಗಳಿಗೆ ಈಗಾಗಲೇ ಕೆಲಸದ ಒತ್ತಡ ಹೆಚ್ಚಿದ್ದು ಅಧಿಕಾರಿಗಳು ಧ್ವಜದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ರಾಷ್ಟ್ರಧ್ವಜವನ್ನು ಪಂಚಾಯತ್‌ ಗಳ ಎದುರು ಹಾರಿಸುವ ಬದಲು ಶಾಲಾ- ಕಾಲೇಜುಗಳ ಮೇಲೆ ಹಾರಿಸುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿಬಂದಿದೆ. ಶಾಲಾ-ಕಾಲೇಜುಗಳಲ್ಲಿ ಪ್ರತಿದಿನ ರಾಷ್ಟ್ರಗೀತೆ ಹೇಳುವುದರಿಂದ ಶಾಲಾ ಮುಖ್ಯೋಪಾಧ್ಯಯರು ಧ್ವಜ ಹಾರಿಸುವ ಮೂಲಕ ರಾಷ್ಟ್ರಕ್ಕೆ ಗೌರವ ಸೂಚಿಸಿದಂತಾಗುತ್ತದೆ.

Advertisement

ಅಲ್ಲದೆ ಶಾಲಾ- ಕಾಲೇಜುಗಳ ದೈಹಿಕ ಶಿಕ್ಷಕರಿಗೆ ಧ್ವಜ ಕಟ್ಟುವುದು, ಹಾರಿಸುವುದರ ತರಬೇತಿ ಇರುವುದರಿಂದ ಧ್ವಜಕಾಕಗುವ ಅವಮಾನ ತಪ್ಪಿಸಬಹುದು ಎಂಬುದು ಜನರ ಅಭಿಪ್ರಾಯವಾಗಿದೆ.

ಸರ್ಕಾರಗಳು ಅನೇಕ ಯೋಜನೆಗಳನ್ನು ರೂಪಿಸುತ್ತವೆ. ಆದರೆ ಅದರ ಅನುಷ್ಠಾನದ ಬಗ್ಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ಎಲ್ಲ ಸರಕಾರಿ ಕಚೇರಿ ಹಾಗೂ ಗ್ರಾ.ಪಂ. ಗಳಲ್ಲಿ ಧ್ವಜ ಹಾರಿಸುವ ಬಗ್ಗೆ ಸೂಕ್ತ ತರಬೇತಿ ನೀಡಬೇಕಿದೆ. ಅಲ್ಲದೆ ಈ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗುವುಂತೆ ಅಧಿಕಾರಿಗಳು, ಜನ ಪ್ರತಿನಿಧಿಗಳು ಗಮನಹರಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next