Advertisement

ಭಾರತದ ಕಿವೀಸ್‌ ಪ್ರವಾಸ: ಧವನ್‌, ಇಶಾಂತ್‌ ಹೊರಕ್ಕೆ

10:23 AM Jan 22, 2020 | sudhir |

ಹೊಸದಿಲ್ಲಿ: ಮುಂಬರುವ ನ್ಯೂಜಿಲ್ಯಾಂಡ್‌ ಪ್ರವಾಸಕ್ಕಿಂತ ಮೊದಲು ಕೆಲವು ಆಟಗಾರರು ಗಾಯದ ಸಮಸ್ಯೆಗೆ ಸಿಲುಕಿದ್ದರಿಂದ ಭಾರತೀಯ ಕ್ರಿಕೆಟ್‌ ತಂಡ ಕಳವಳಕ್ಕೆ ಒಳಗಾಗಿದೆ. ಆರಂಭಿಕ ಆಟಗಾರ ಶಿಖರ್‌ ಧವನ್‌ ನ್ಯೂಜಿಲ್ಯಾಂಡ್‌ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದಿದ್ದರೆ ವೇಗಿ ಇಶಾಂತ್‌ ಶರ್ಮ ಟೆಸ್ಟ್‌ ಸರಣಿ ಕಳೆದುಕೊಳ್ಳಲಿದ್ದಾರೆ.

Advertisement

ಭುಜದ ನೋವಿನಿಂದ ಬಳಲುತ್ತಿರುವ ಶಿಖರ್‌ ಧವನ್‌ ಅವರು ಶುಕ್ರವಾರದಿಂದ ಆರಂಭವಾಗುವ ಐದು ಪಂದ್ಯಗಳ ಟ್ವೆಂಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ 3ನೇ ಏಕದಿನದಲ್ಲಿ ಫೀಲ್ಡಿಂಗ್‌ ಮಾಡುವ ವೇಳೆ ಧವನ್‌ ಭುಜಕ್ಕೆ ಗಾಯ ಮಾಡಿಕೊಂಡಿದ್ದರು.

“ಹೌದು, ಧವನ್‌ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಬದಲಿ ಆಟಗಾರ ಯಾರೆಂದು ಶೀಘ್ರ ಪ್ರಕಟಿಸ ಲಾಗುವುದು’ ಎಂದು ಬಿಸಿಸಿಐ ತಿಳಿಸಿದೆ.

ಇಶಾಂತ್‌ ಕೂಡ ಹೊರಕ್ಕೆ
ರಣಜಿ ಟ್ರೋಫಿ ಪಂದ್ಯದ ವೇಳೆ ಪಾದದ ಸೆಳೆತಕ್ಕೆ ಒಳಗಾದ ಇಶಾಂತ್‌ ಶರ್ಮ ಅವರು ಫೆ. 21ರಿಂದ ಆರಂಭವಾಗುವ ಟೆಸ್ಟ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಇಶಾಂತ್‌ ಅವರ ಗಾಯದ ಎಂಆರ್‌ಐ ಸ್ಕ್ಯಾನ್‌ ನಡೆಸಲಾಗಿದ್ದು ಗಾಯದ ಪ್ರಮಾಣ ಗ್ರೇಡ್‌ ತ್ರೀ ಇದೆ. ಇದೊಂದು ಗಂಭೀರ ಗಾಯದ ಸಮಸ್ಯೆಯಾಗಿದ್ದು ಆರು ವಾರಗಳ ವಿಶ್ರಾಂತಿಯ ಅಗತ್ಯವಿದೆ. ಇದರಿಂದ ತಂಡಕ್ಕೆ ಹೊಡೆತ ಬೀಳಲಿದೆ ಎಂದು ಡೆಲ್ಲಿ ಆ್ಯಂಡ್‌ ಡಿಸ್ಟ್ರಿಕ್ಟ್ ಕ್ರಿಕೆಟ್‌ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ವಿನೋದ್‌ ತಿಹಾರ ಹೇಳಿದ್ದಾರೆ.

ನ್ಯೂಜಿಲ್ಯಾಂಡ್‌ ಪ್ರವಾಸ
ನ್ಯೂಜಿಲ್ಯಾಂಡ್‌ ಪ್ರವಾಸದ ವೇಳೆ ಭಾರತೀಯ ತಂಡವು ಐದು ಟ್ವೆಂಟಿ20, ಮೂರು ಏಕದಿನ ಮತ್ತು ಎರಡು ಟೆಸ್ಟ್‌ ಪಂದ್ಯಗಳನ್ನಾಡಲಿದೆ. ಟ್ವೆಂಟಿ20 ಸರಣಿಯು ಜ. 24ರಿಂದ ಆರಂಭವಾಗಲಿದೆ.

Advertisement

ಆಸ್ಟ್ರೇಲಿಯ ವಿರುದ್ಧದ 3ನೇ ಏಕದಿನ ಪಂದ್ಯದ ವೇಳೆ ಫಿಂಚ್‌ ಹೊಡೆತವೊಂದನ್ನು ತಡೆಯಲು ಶಿಖರ್‌ ಧವನ್‌ ಡೈವ್‌ ಹೊಡೆದಾಗ ಅವರ ಭುಜಕ್ಕೆ ಏಟು ಬಿತ್ತು. ಇದರಿಂದ ಅವರು ಕ್ಷೇತ್ರರಕ್ಷಣೆ ಮತ್ತು ಬ್ಯಾಟಿಂಗ್‌ ಕೂಡ ನಡೆಸಿರಲಿಲ್ಲ. ಧವನ್‌ ಅವರನ್ನು ಎಕ್ಸ್‌ರೇಗೆ ಒಳಪಡಿಸಿದಾಗ ಗಾಯದ ತೀವ್ರತೆ ಹೆಚ್ಚಿರುವ ಕಾರಣ ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದರಿಂದ ಅವರನ್ನು ಸರಣಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next